ಟೋಲ್ ವಿರೋಧಿ ಹೋರಾಟದ ಯಶಸ್ವಿಯು ಜಿಲ್ಲೆಯ ಎಲ್ಲಾ ಜನಪರವಾದ ಹೋರಾಟಗಳಿಗೆ ನಾಂದಿಯಾಗಲಿ : ಲುಖ್ಮಾನ್ ಬಂಟ್ವಾಳ್

Update: 2022-11-17 15:08 GMT

ಸುರತ್ಕಲ್, ನ.17: ಸುರತ್ಕಲ್ ಟೋಲ್ ವಿರೋಧಿ ಹೋರಾಟಕ್ಕೆ ಸಿಕ್ಕಿದ ಜಯ, ಜಿಲ್ಲೆಯ ಮುಂದಿನ ಎಲ್ಲಾ ಜನಪರವಾದ ಹೋರಾಟಗಳಿಗೆ ನಾಂದಿಯಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಖ್ಮಾನ್ ಬಂಟ್ವಾಳ್ ಅಭಿಪ್ರಾಯ ಪಟ್ಟರು.‌

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳು ಕಳೆದ 21 ದಿನಗಳಿಂದ ನಡೆಸುತ್ತಿರುವ ಹಗಲು-ರಾತ್ರಿ ಧರಣಿ ಸ್ಥಳಕ್ಕೆ, ಗುರುವಾರ ಬೆಳಗ್ಗೆ ತನ್ನ ಬೆಂಬಲಿಗರೊಂದಿಗೆ ಆಗಮಿಸಿ ಧರಣಿ ವೇದಿಕೆಯಲ್ಲಿ ಮಾತನಾಡಿದ ಧರ್ಮಾಧಾರಿತವಾಗಿ ಮತ ಪಡೆದು ಚುನಾಯಿತರಾದ ಬಿಜೆಪಿಯ ಸ್ಥಳೀಯ ಶಾಸಕರುಗಳು, ಬಂಡವಾಳಸಾಹಿ ಗುತ್ತಿಗೆದಾರರ ಪರವಾಗಿ ಕೆಲಸ ಮಾಡಿಕೊಂಡು ದಕ್ಷಿಣ ಕನ್ನಡ  ಜಿಲ್ಲೆಯನ್ನೇ ಮಾರಿಕೊಂಡಿದ್ದಾರೆ. 

ಜವಾಬ್ದಾರಿಯುತ ಜನಪ್ರತಿನಿಧಿಗಳಾಗಿ  ಸುಳ್ಳು ಭರವಸೆಗಳನ್ನು ನೀಡುತ್ತಾ ಜಿಲ್ಲೆಯ ಜನತೆಗೆ ಇವರ ಕೊಡುಗೆ ಶೂನ್ಯ ಎಂದು ಹೇಳಿದರು.

ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸುವಂತೆ ಈಗಾಗಲೇ ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಗಜಟ್ ನೋಟಿಫಿಕೇಶನ್ ಹೊರಡಿಸಿ ಹಲವು ದಿನಗಳಾಯ್ತು, ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರುಗಳು ಪತ್ರಿಕಾಗೋಷ್ಠಿ ನಡೆಸಿ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಹೊರತು ಟೋಲ್ ಸಂಗ್ರಹ ಈಗಲೂ ನಡೆಯುತ್ತಿದೆ, ಟೋಲ್ ತೆರವು ಕಾರ್ಯ ನಡೆಯುವವರೆಗೂ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಧರಣಿ ವೇದಿಕೆಯಲ್ಲಿ ಕಾರು ಟ್ಯಾಕ್ಸಿ ಯೂನಿಯನ್ ಗಳ ಅಧ್ಯಕ್ಷರು ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು.

Similar News