×
Ad

ಮೆಟಾ ಭಾರತದ ನೂತನ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ನೇಮಕ

Update: 2022-11-17 22:47 IST

ಹೊಸದಿಲ್ಲಿ, ನ. 17: ಮೆಟಾ ಇಂಡಿಯಾದ ಉಪಾಧ್ಯಕ್ಷರನ್ನಾಗಿ ಸಂಧ್ಯಾ ದೇವನಾಥನ್ ಅವರನ್ನು ನೇಮಕ ಮಾಡಿರುವುದಾಗಿ ಫೇಸ್‌ಬುಕ್‌ನ ಮಾತೃ ಕಂಪೆನಿ ಮೆಟಾ ಗುರುವಾರ ಘೋಷಿಸಿದೆ. ಅಜಿತ್ ಮೋಹನ್ ರಾಜೀನಾಮೆ ನೀಡಿ ಪ್ರತಿಸ್ಪರ್ಧಿ ಸ್ನ್ಯಾಪ್ ಇಂಕ್‌ಗೆ ಸೇರಿದ ದಿನಗಳ ಬಳಿಕ ತನ್ನ ಭಾರತದ ಮುಖ್ಯಸ್ಥರನ್ನಾಗಿ ಸಂಧ್ಯಾ ದೇವನಾಥನ್ ಅವರನ್ನು ಮೆಟಾ ನೇಮಕ ಮಾಡಿದೆ.

ಸಂಧ್ಯಾ ದೇವನಾಥನ್ ಅವರು ಮುಂದಿನ ವರ್ಷ ಜನವರಿ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಮೆಟಾ ಎಪಿಎಸಿಯ ಉಪಾಧ್ಯಕ್ಷ ಡ್ಯಾನ್ ನೇರಿ ಅವರಿಗೆ ವರದಿ ಮಾಡಲಿದ್ದಾರೆ. ಅಲ್ಲದೆ, ಎಪಿಎಸಿ ನಾಯಕತ್ವ ತಂಡದ ಭಾಗವಾಗಲಿದ್ದಾರೆ. 
ಸಂಧ್ಯಾ ದೇವನಾಥನ್ ಅವರು 2016ರಲ್ಲಿ ಮೆಟಾ ಕಂಪೆನಿಗೆ ಸೇರಿದ್ದರು. ಸಿಂಗಪುರ ಹಾಗೂ ವಿಯೆಟ್ನಾಂನಲ್ಲಿ ವ್ಯವಹಾರ ಹಾಗೂ ತಂಡವನ್ನು ರೂಪಿಸಲು ಅವರು ನೆರವು ನೀಡಿದ್ದರು. ಅಲ್ಲದೆ, ಆಗ್ನೇಯ ಏಷ್ಯಾದಲ್ಲಿ ಮೆಟಾದ ಇ-ಕಾಮರ್ಸ್ ನೇತೃತ್ವವನ್ನು ವಹಿಸಿದ್ದರು.  

ಸಂಧ್ಯಾ ದೇವನಾಥನ್ ಅವರು ದಿಲ್ಲಿ ವಿಶ್ವವಿದ್ಯಾನಿಲಯದಿಂದ 2000ದಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಅವರು 22 ವರ್ಷಗಳ ಅನುಭವ ಹೊಂದಿರುವ ಜಾಗತಿಕ ಔದ್ಯಮಿಕ ನಾಯಕಿ. ಬ್ಯಾಂಕಿಂಗ್, ಪಾವತಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹುದ್ದೆಗಳನ್ನು ಅವರು ನಿರ್ವಹಿಸಿದ್ದಾರೆ. 

Similar News