ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ: ಆರೋಪಿ ಅಫ್ತಾಬ್ ಪೊಲೀಸ್ ಕಸ್ಟಡಿ ವಿಸ್ತರಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ, ನ. 17: ತನ್ನ ಗೆಳತಿಯನ್ನು ಹತ್ಯೆಗೈದು ತುಂಡು ಮಾಡಿ ಎಸೆದ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲನನ್ನು ಇನ್ನೂ ಐದು ದಿನಗಳ ಕಾಲ ತಮ್ಮ ಕಸ್ಟಡಿಯಲ್ಲಿ ಪ್ರಶ್ನಿಸಲು ನಗರ ಪೊಲೀಸರಿಗೆ ದಿಲ್ಲಿ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ.
ಅಲ್ಲದೆ, ಪ್ರಕರಣದ ನಿಗೂಢತೆ ಬೇಧಿಸಲು ಅಫ್ತಾಬ್‌ನಿಗೆ ಮಂಪರು ಪರೀಕ್ಷೆ ನಡೆಸಲು ಕೂಡ ನ್ಯಾಯಾಲಯ ಅನುಮತಿ ನೀಡಿದೆ. ಈ ಪ್ರಕರಣದ ಕುರಿತ ಪೊಲೀಸರ ಅರ್ಜಿಯನ್ನು ಪರಿಗಣಿಸಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಈ ಆದೇಶ ನೀಡಿದರು. ಅಫ್ತಾಬ್‌ನನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ಸಂಜೆ 4 ಗಂಟೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಶ್ರದ್ಧಾ ವಾಲ್ಕರ್‌ಳನ್ನು ಹತ್ಯೆಗೈದು, ಆಕೆಯ ಮೃತದೇಹವನ್ನು ತುಂಡು ತುಂಡಾಗಿ ಎಸೆದಿರುವ ಆರೋಪಕ್ಕೆ ಅಫ್ತಾಬ್ ಒಳಗಾಗಿದ್ದಾನೆ. ಇದರಿಂದ ಕೆಲವರು ಆಕ್ರೋಶಗೊಂಡ ನ್ಯಾಯಾಲಯದ ಕ್ಯಾಂಪಸ್ ಅಥವಾ ನ್ಯಾಯಾಲಯದ ಒಳಗೆ ಆತನ ಮೇಲೆ ಹಲ್ಲೆ ನಡೆಸಬಹುದು. ಆದುದರಿಂದ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ‘‘ಆತನನ್ನು ಗಲ್ಲಿಗೇರಿಸಿ, ಆತನನ್ನು ಗಲ್ಲಿಗೇರಿಸಿ’’ಎಂದು ನ್ಯಾಯವಾದಿಗಳ ದೊಡ್ಡ ಗುಂಪೊಂದು ನ್ಯಾಯಾಲಯದ ಹೊರಗೆ ಕೂಗುತ್ತಿರುವುದು ಕಂಡು ಬಂತು.