ಭಾರತ್‌ ಜೋಡೊ ಯಾತ್ರೆಗೆ ಬಾಂಬ್‌ ದಾಳಿ ಬೆದರಿಕೆ: ತನಿಖೆ ಪ್ರಾರಂಭ

Update: 2022-11-18 09:45 GMT

ಇಂಧೋರ್: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವವರು ನವೆಂಬರ್ 28 ರಂದು ಸ್ಥಳೀಯ ಕ್ರೀಡಾಂಗಣದಲ್ಲಿ ರಾತ್ರಿ ತಂಗಿದರೆ ನಗರದಲ್ಲಿ ಬಾಂಬ್ ಸ್ಫೋಟ ನಡೆಸಲಾಗುವುದು ಎಂದು ಮಧ್ಯಪ್ರದೇಶದ ಇಂದೋರ್‌ನ ಅಂಗಡಿಯೊಂದಕ್ಕೆ ಬೆದರಿಕೆ ಪತ್ರ ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದೊಂದು ಹುಸಿ ಬೆದರಿಕೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಇಂದೋರ್ ಪೊಲೀಸ್ ಕಮಿಷನರ್ ಎಚ್ ಸಿ ಮಿಶ್ರಾ, “ನಗರದ ಜುನಿ ಪ್ರದೇಶದ ಸಿಹಿ ತಿಂಡಿ ಅಂಗಡಿಯೊಂದಕ್ಕೆ ಗುರುವಾರ ಸಂಜೆ ಪತ್ರ ಬಂದಿದೆ, ಅದರಲ್ಲಿ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯಲ್ಲಿ ಭಾಗವಹಿಸುವವರು ಖಾಲ್ಸಾ ಕ್ರೀಡಾಂಗಣದಲ್ಲಿ ಉಳಿದುಕೊಂಡರೆ, ನಗರದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲಾಗುವುದು ಎಂದು ಉಲ್ಲೇಖಿಸಿದೆ. ಈ ಅನಾಮಧೇಯ ಪತ್ರವು ರಾಹುಲ್ ಗಾಂಧಿಯನ್ನು ಗುರಿಯಾಗಿಸುವ ಬಗ್ಗೆ ನೇರವಾಗಿ ಏನೂ ಉಲ್ಲೇಖಿಸಿಲ್ಲ ಎಂದು ಅವರು ಹೇಳಿದರು.

ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 507 (ಅಪರಿಚಿತ ವ್ಯಕ್ತಿಯಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.

Similar News