ಡಾಟಾ ಸುರಕ್ಷತಾ ವಿಧೇಯಕ ಮಂಡನೆಗೆ ಕೇಂದ್ರ ಸಿದ್ಧತೆ: ವೈಯಕ್ತಿಕ ಮಾಹಿತಿ ಸೋರಿಕೆಗೆ 250 ಕೋಟಿ ರೂ. ದಂಡ

Update: 2022-11-18 15:59 GMT

ಹೊಸದಿಲ್ಲಿ, ನ.18: ವೈಯಕ್ತಿಕ ಮಾಹಿತಿ ಸೋರಿಕೆಗೆ ಭಾರೀ ದಂಡವನ್ನು ವಿಧಿಸಲು ಅವಕಾಶವಿರುವ ನೂತನ ದತ್ತಾಂಶ ಸುರಕ್ಷತಾ ವಿಧೇಯಕವನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ.  ‘ದತ್ತಾಂಶ ಸಂಸ್ಕರಣೆಗಾರರು’ ಅಥವಾ ಸಾಮಾಜಿಕ ಜಾಲತಾಣಗಳು’  ಖಾಸಗಿ ದತ್ತಾಂಶಗಳ  ಸೋರಿಕೆಯನ್ನು ತಡೆಯಲು  ಯೋಗ್ಯವಾದ ಭದ್ರತಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾದಲ್ಲಿ ಅವುಗಳಿಗೆ 250 ಕೋಟಿ ರೂ.ವರೆಗೂ ದಂಡವನ್ನು ಈ ವಿಧೇಯಕದಡಿ ವಿಧಿಸಬಹುದಾಗಿದೆ.

ಕೇಂದ್ರ ಸರಕಾರವು ಈ ವರ್ಷದ ಮುಂಗಾರು ಅಧಿವೇಶನದಲ್ಲಿ  ಈ ಹಿಂದಿನ ಖಾಸಗಿ ದತ್ತಾಂಶ ಸುರಕ್ಷತಾ ವಿಧೇಯಕ 2019ನ್ನು  ಹಿಂತೆಗೆದುಕೊಂಡ ಬಳಿಕ  ನೂತನ ಕರಡು ವಿಧೇಯಕವನ್ನು ರೂಪಿಸಿದೆ. ಪ್ರಸ್ತಾವಿತ  ಕರಡು ವಿಧೇಯಕದಲ್ಲಿ  ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವುದಕ್ಕಾಗಿ ಕಠಿಣವಾದ ದಂಡಗಳನ್ನು ವಿಧಿಸುವ ಬಗ್ಗೆಯೂ ಸರಕಾರವು ಚಿಂತನೆ ನಡೆಸಿದೆ.

ಈ ಕರಡು ವಿಧೇಯಕವನ್ನು  ಬಹಿರಂಗವಾಗಿ ಪ್ರಕಟಿಸಲಾಗಿದ್ದು, ಡಿಸೆಂಬರ್ 17ರವರೆಗೂ ಅದನ್ನು ಸಾರ್ವಜನಿಕರ ಅಭಿಪ್ರಾಯಗಳಿಗಾಗಿ ಮುಕ್ತವಾಗಿಡಲಾಗಿದೆ.
ಪ್ರಸ್ತಾವಿತ ದತ್ತಾಂಶ ಸುರಕ್ಷತಾ ವಿಧೇಯಕವು ಗ್ರಾಹಕರ ದತ್ತಾಂಶಗಳ ದುರ್ಬಳಕೆಗೆ ಅಂತ್ಯ ಹಾಡಲಿದೆ ಹಾಗೂ  ಅದನ್ನು ಉಲ್ಲಂಘಿಸಿದವರು ನಿಯಮದ ಪ್ರಕಾರ  ದಂನಾತ್ಮಕ ಕ್ರಮವನ್ನು ಎದುರಿಸಲಿದ್ದಾರೆಂದು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಕೇಂದ್ರ ಸರಕಾರವು ಆಗಸ್ಟ್ನಲ್ಲಿ  ಖಾಸಗಿ ದತ್ತಾಂಶ ಸುರಕ್ಷತಾ ವಿಧೇಯಕವನ್ನು ಹಿಂತೆಗೆದುಕೊಂಡಿತ್ತು ಹಾಗೂ ಸಮಗ್ರ ಕಾನೂನಿನ ಚೌಕಟ್ಟಿಗೆ ಹೊಂದಿಕೊಳ್ಳುವ ಹಾಗೆ ನೂತನ ಶಾಸನವನ್ನು ಜಾರಿಗೊಳಿಸುವುದಾಗಿ ತಿಳಿಸಿತ್ತು.

ನೂತನ ದತ್ತಾಂಶ ಸುರಕ್ಷತಾ ವಿಧೇಯಕವನ್ನು ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದೆಂದು   ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.

ವಿಧೇಯಕದ ಮುಖ್ಯಾಂಶಗಳು

ವಿಧೇಯಕದ ನಿಯಮಗಳ ಉಲ್ಲಂಘನೆಯಾದಲ್ಲಿ ಆಯಾ ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ 10 ಸಾವಿರ ರೂ.ಗಳಿಂದ ಹಿಡಿದು 200 ಕೋಟಿ ರೂ. ವರೆಗೂ ದಂಡವಿಧಿಸಬಹುದಾಗಿದೆ.

ಪ್ರಸ್ತಾವಿತ ನೂತನ ಕಾಯ್ದೆಯ ನಿಯಮಾವಳಿಗಳ ಜಾರಿ ಹಾಗೂ ನಿರ್ವಹಣೆಗೆ  ಭಾರತೀಯ ದತ್ತಾಂಶ ಸುರಕ್ಷತಾ ಮಂಡಳಿಯನ್ನು ಸ್ಥಾಪಿಸುವಂತೆಯೂ ನೂತನ ಕರಡು ವಿಧೇಯಕವು ಶಿಫಾರಸು ಮಾಡಿದೆ. ವ್ಯಕ್ತಿಯು ವಿಧೇಯಕದ ಉಲ್ಲಂಘನೆಯು ಗಂಭೀರ ಸ್ವರೂಪದ್ದಾಗಿದ್ದರೆ  ಕಾಯ್ದೆಯ ಒಂದನೇ ಪರಿಚ್ಛೇದದ ಪ್ರಕಾರ 500 ಕೋಟಿ ರೂ.ವರೆಗೂ ದಂಡವನ್ನು ವಿಧಿಸಬಹುದಾಗಿದೆ.ಜೊತೆಗೆ ಆ ವ್ಯಕ್ತಿಗೆ ತನ್ನ ಸಮರ್ಥಿಸಿಕೊಳ್ಳಲು ವಾದ ಮಂಡನೆಗೆ ಅವಕಾಶ ನೀಡಲಾಗುತ್ತದೆ.

ವಿಧೇಯಕದಲ್ಲಿ ‘ಅವನಲ್ಲ ’ ‘ಅವಳು’

ಖಾಸಗಿ ದತ್ತಾಂಶ ಸುರಕ್ಷತಾ ವಿಧೇಯಕ 2022ರ ಕರಡು ವಿಧೇಯಕದಲ್ಲಿ  ಎಲ್ಲಾ ಲಿಂಗಗನ್ನು ಪ್ರಸ್ತಾವಿಸುವಾಗಲೂ  ‘ಅವಳು, ‘ ಆಕೆಯ’  ಎಂಬ ಸರ್ವನಾಮಪದಗಳನ್ನು  ಬಳಸಲಾಗಿದೆ. ಭಾರತದ ಶಾಸಕಾಂಗದ ಇತಿಹಾಸದಲ್ಲೇ  ಸ್ತ್ರೀಲಿಂಗ ರೂಪದಲ್ಲಿ  ಸರ್ವನಾಮಪದವನ್ನು ಬಳಸಿರುವುದು ಇದೇ  ಮೊದಲ ಸಲವಾಗಿದೆ. 

ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು ಇಡೀ ವಿಧೇಯಕದಲ್ಲಿ  ‘ಅವನು, ‘ಅವನಿಗೆ’, ಹಾಗೂ ಆತನ ಪದಗಳ ಬದಲಿಗೆ ‘ ಅವಳು, ‘ಆಕೆ’ ಪದಗಳನ್ನು  ಬಳಸಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಧೇಯಕದಲ್ಲಿ ಈ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೆಣ್ಣು ಮಗುವಿನ ಸಬಲೀಕರಣವನ್ನು ಪ್ರತಿಪಾದಿಸುವ ಪ್ರಧಾನಿ ಮೋದಿಯವರ ‘ ಬೇಟಿ ಬಚಾವೋ ಬೇಟಿ ಪಢಾವೊ’ ಆಂದೋಲನಕ್ಕೆ  ಪೂರಕವಾಗಿ ಈ ಹೆಜ್ಜೆಯನ್ನಿಡಲಾಗಿದೆ ಎಂದು ಅವರು ಹೇಳಿದ್ದಾರೆ.

Similar News