ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹುದ್ದೆ ಬಹಿರಂಗ: ಚುನಾವಣಾ ಕರ್ತವ್ಯದಿಂದ ಐಎಎಸ್ ಅಧಿಕಾರಿ ವಜಾ

Update: 2022-11-18 17:06 GMT

ಹೊಸದಿಲ್ಲಿ, ನ. 18:  ಇನ್ಸ್ಟಾಗ್ರಾಂನಲ್ಲಿ (Instagram post) ತನ್ನ ಹುದ್ದೆಯನ್ನು ಬಹಿರಂಗಪಡಿಸಿರುವುದಕ್ಕಾಗಿ ಐಎಎಸ್ (IAS) ಅಧಿಕಾರಿ ಅಭಿಷೇಕ್ ಸಿಂಗ್‍ ನನ್ನು ಚುನಾಣಾ ಆಯೋಗ ಕರ್ತವ್ಯದಿಂದ ವಜಾಗೊಳಿಸಿದೆ. ಅಭಿಷೇಕ್ ಸಿಂಗ್ (Abhishek Singh) ತನ್ನ ಹುದ್ದೆ/ಚುನಾವಣಾ ವೀಕ್ಷಕನಾಗಿ ಸೇರಿರುವುದನ್ನು ಹಂಚಿಕೊಳ್ಳಲು ಇನ್ಸ್ಟಾಗ್ರಾಂ ಅನ್ನು ಬಳಸಿದ್ದಾರೆ ಹಾಗೂ ಸಾರ್ವಜನಿಕ ಪ್ರಚಾರಕ್ಕಾಗಿ ತನ್ನ ಅಧಿಕೃತ ಹುದ್ದೆಯನ್ನು ಬಳಸಿದ್ದಾರೆ ಎಂದು ಚುನಾವಣಾ ಆಯೋಗದ ಆದೇಶ ಹೇಳಿದೆ.

ಮುಂದಿನ ತಿಂಗಳು ಗುಜರಾತ್ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಕೇಡರ್ನ ಅಧಿಕಾರಿ ಅಭಿಷೇಕ್ ಸಿಂಗ್ ಅವರನ್ನು ಅಹ್ಮದಾಬಾದ್-ಬಾಪುನಗರ ಹಾಗೂ ಅಸರ್ವಾ ವಿಧಾನ ಸಭಾ ಕ್ಷೇತ್ರಗಳ ಚುನಾವಣಾ ವೀಕ್ಷರನ್ನಾಗಿ ನಿಯೋಜಿಸಲಾಗಿತ್ತು. 
ಇನ್ಸ್ಟಾಗ್ರಾಂನಲ್ಲಿ ತನ್ನನ್ನು ಅಭಿಷೇಕ್ ಎಸ್ ಐಎಎಸ್ ಎಂದು ಕರೆದುಕೊಂಡಿರುವ ಅಭಿಷೇಕ್ ಸಿಂಗ್ ಎರಡು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಒಂದು ಫೋಟೊದಲ್ಲಿ ಅವರು ತನ್ನ ಕಚೇರಿಯ ಕೆಂಪು ದೀಪದ ಕಾರಿನೊಂದಿಗೆ ನಿಂತಿದ್ದಾರೆ. ಆ ಕಾರಿನ ಮುಂಭಾಗ ‘ಚುನಾವಣಾ ವೀಕ್ಷಕರು ಎಂದು ಬರೆಯಲಾಗಿದೆ. ಅದಕ್ಕೆ ‘‘ಗುಜರಾತ್ ಚುನಾವಣಾ ವೀಕ್ಷಕನಾಗಿ ಸೇರಿದ್ದೇನೆ’’ ಎಂದು ಶೀರ್ಷಿಕೆ ನೀಡಿದ್ದಾರೆ.

ಇನ್ನೊಂದು ಫೋಟೊದಲ್ಲಿ ಅವರೊಂದಿಗೆ ಮತ್ತೆ ಮೂವರು ಅಧಿಕಾರಿಗಳು ಹಾಗೂ ಶಸಸ್ತ್ರ ಭದ್ರತಾ ಸಿಬ್ಬಂದಿ ನಿಂತಿರುವುದು ಹಾಗೂ ಅವರೆಲ್ಲ ನಸುನಗುತ್ತಿರುವುದು ಕಂಡು ಬಂದಿದೆ.

Similar News