ಸುಂಕ ವಸೂಲಿ ಮಾಡುವುದು ಸಂಪೂರ್ಣ ನಿಲ್ಲುವ ತನಕ ಅಹೋರಾತ್ರಿ ಧರಣಿ ಮುಂದುವರಿಯಲಿದೆ: ರಮಾನಾಥ ರೈ

Update: 2022-11-18 17:23 GMT

ಸುರತ್ಕಲ್: ಇಲ್ಲಿನ ಟೋಲ್ ಗೇಟ್ ತೆರವಿಗೆ ಕೆಂದ್ರ ಸರಕಾರ  ಆದೇಶ ಹೊರಡಿಸಿದ್ದರೂ ಟೋಲ್ ಗೇಟ್ ನಲ್ಲಿ ಸುಂಕ ಪಡೆದುಕೊಳ್ಳುತ್ತಿದ್ದು ಅದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಧರಣಿ ಪ್ರತಿಭಟನೆ ಬೆಂಬಲಿಸಿ ಸಮಾನ ಮನಸ್ಕ ಸಂಘಟನೆಗಳು ಶುಕ್ರವಾರ ಸಂಜೆ ತಡಂಬೈಲ್ ಜಂಕ್ಷನ್ ನಿಂದ ಧರಣಿ ಸ್ಥಳಕ್ಕೆ ಕಾಲ್ನಡಿಗೆ ಜಾಥಾ ನಡೆಸಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ‌ ಮಾಜಿ ಸಚಿವ ರಮಾನಾಥ ರೈ, ಸುರತ್ಕಲ್ ಟೋಲ್ ಹೋರಾಟ ನಿರಂತರವಾಗಿ 22 ದಿನಗಳಿಂದ ನಡೆಯುತ್ತಿದ್ದು ಜನರಿಂದ ಸುಂಕ ವಸೂಲಿ ಮಾಡುವುದು ಸಂಪೂರ್ಣ ನಿಲ್ಲುವ ತನಕ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದರು.

ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಹೋರಾಟದ ಬಿಸಿ ಮುಟ್ಟಿದ್ದು,  ಸಮಾನಮನಸ್ಕರು ಒಂದೇ ವೇದಿಕೆಯಲ್ಲಿ ಸೇರಿರುವುದು ದೊಡ್ಡ ಸಾಧನೆಯಾಗಿದೆ. ಟೋಲ್ ತೆರವುಗೊಳಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ. ಹೋರಾಟಕ್ಕೆ ನೈತಿಕ ಬೆಂಬಲ ನೀಡಿರುವ ಜಿಲ್ಲೆಯ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ವಿವಿಧ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಹೋರಾಟ ತಾರ್ಕಿಕ ಅಂತ್ಯದತ್ತ ಸಾಗಿದೆ. ಮುಂದೆ ಇನ್ನಷ್ಟು ಕಠಿಣ ಸಮಸ್ಯೆಗಳು ಎದುರಾಗಬಹುದು. ಆಗಲೂ ಇದೇ ರೀತಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಹೋರಾಟ ಮುಂದುವರಿಸಬೇಕು ಎಂದರು.

ಬಳಿಕ ಮಾತಾಡಿದ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ “ಇದು ಜಾತಿ ಧರ್ಮ ಪಕ್ಷ ಮೀರಿ ಬೆಳೆದಿರುವ ಹೋರಾಟ. ಇಲ್ಲಿ ಬಿಜೆಪಿ ನಾಯಕರು ಮಾತ್ರ ಇಲ್ಲ, ಮತದಾರರಿದ್ದಾರೆ. ನಾನಾ ಪಕ್ಷ, ಸಂಘಟನೆಗಳ ಸಾವಿರಾರು ಕಾರ್ಯಕರ್ತರು, ಮುಖಂಡರು ಜೊತೆಯಾಗಿದ್ದಾರೆ. ಹೀಗಿರುವಾಗ ಜನರಿಗೆ ಬೇಡವಾದ ಟೋಲ್ ಗೇಟ್ ಖಂಡಿತ ಬೇಡ. ಸರಕಾರ ಆದೇಶ ಜಾರಿಗೊಳಿಸಿಯೂ ಟೋಲ್ ತೆರವು ಮಾಡದೇ ಇರುವುದು ಯಾಕೆ? ಸುಂಕ ವಸೂಲಿ ನಿಂತಿಲ್ಲ ಯಾಕೆ? ಒಂದೊಮ್ಮೆ ಇಲ್ಲಿಂದ ಟೋಲ್ ಹೆಜಮಾಡಿಯಲ್ಲಿ ವಿಲೀನಗೊಂಡ ಬಳಿಕ ಅಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಇದೇ ಹೋರಾಟ ಮುಂದಿನ ದಿನಗಳಲ್ಲಿ ಹೆಜಮಾಡಿಗೆ ಸ್ಥಳಾಂತರಗೊಳ್ಳುವುದು ನಿಶ್ಚಿತ” ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮೊಯ್ದೀನ್ ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಮೇಯರ್ ಕೆ.ಅಶ್ರಫ್, ಸುನಿಲ್ ಕುಮಾರ್ ಬಜಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಸುರತ್ಕಲ್ ಬ್ಲಾಕ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮುಹಮ್ಮದ್ ಸಮೀರ್ ಕಾಟಿಪಳ್ಳ, ಶಾಲೆಟ್ ಪಿಂಟೋ, ಕೃಪಾ ಆಳ್ವ,  ಸುಮತಿ ಹೆಗ್ಡೆ, ವಿಶ್ವಾಸ್ ದಾಸ್, ರಾಜೇಶ್ ಕುಳಾಯಿ, ಬಿ.ಕೆ. ಇಮ್ತಿಯಾಜ್, ಎಂ.ಜಿ. ಹೆಗಡೆ, ರಾಘವೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

Similar News