ಗುಜರಾತ್: ಇದು ‘ಸಂಸ್ಕಾರಿ’ ಸೀಟು ಹಂಚಿಕೆಯೇ?

Update: 2022-11-19 04:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿ ಸಂವಿಧಾನ ಮತ್ತು ಪ್ರಜಾತಂತ್ರ ಯಶಸ್ವಿಯಾಗಬೇಕೆಂದರೆ ಸಮಾಜದಲ್ಲಿ, ಪಕ್ಷಗಳಲ್ಲಿ ಮತ್ತು ಆಡಳಿತದಲ್ಲಿ ಒಂದು ಸಾಂವಿಧಾನಿಕ ನೈತಿಕತೆಯನ್ನು ಪಾಲಿಸಬೇಕು ಎಂದು ನಿರೀಕ್ಷಿಸಿದ್ದರು. ಇದರ ಅರ್ಥ ಆಡಳಿತ, ಸಂಸತ್ತಿನ ಚರ್ಚೆ, ಪಕ್ಷದೊಳಗಿನ ನಿರ್ವಹಣೆ ಇತ್ಯಾದಿಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ನೈತಿಕತೆಯನ್ನು ಪಾಲಿಸಬೇಕು. ಉದಾಹರಣೆಗೆ ಚುನಾವಣೆಯಲ್ಲಿ ಸೀಟುಗಳನ್ನು ನೀಡುವಾಗ ಒಂದು ಪಕ್ಷದ ಅಭ್ಯರ್ಥಿ ಎಷ್ಟೇ ಶ್ರೀಮಂತನಾಗಿದ್ದರೂ, ಗೆಲ್ಲುವ ಸಾಮರ್ಥ್ಯವಿದ್ದರೂ ಆತನ/ಆಕೆಯ ಮೌಲ್ಯ, ಬದುಕು ಮತ್ತು ನಡತೆಗಳು ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ-ಸಮಾ ನತೆ-ಭ್ರಾತೃತ್ವಗಳಿಗೆ ವಿರುದ್ಧವಾಗಿದ್ದರೆ ಅಂತಹ ವ್ಯಕ್ತಿಯು ಪಕ್ಷದ ಪ್ರಭಾವಿ ಸದಸ್ಯರಾಗಿದ್ದರೂ ಆ ಪಕ್ಷವು ಸೀಟು ಕೊಡದಿರುವುದೇ ಅದು ಅನುಸರಿಸಬೇಕಾದ ಸಾಂವಿಧಾನಿಕ ನೈತಿಕತೆ ಅರ್ಥಾತ್ ಸಾಂವಿಧಾನಿಕ ‘ಸಂಸ್ಕಾರಿ’ ನಡವಳಿಕೆ.

ಆದರೆ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸೀಟು ಹಂಚುತ್ತಿರುವ ರೀತಿಯನ್ನು ನೋಡಿದರೆ ಸಾಂವಿಧಾನಿಕ ಸಂಸ್ಕಾರಕ್ಕಿಂತ ಹಿಂದುತ್ವದ ದ್ವೇಷ ಸಂಸ್ಕಾರವೇ ಎದ್ದುಕಾಣುತ್ತಿದೆ. ಮೊರ್ಬಿ ತೂಗು ಸೇತುವೆ ದುರಂತದ ಕ್ಷೇತ್ರದ ಹಾಲಿ ಶಾಸಕನಿಗೆ ಸೀಟು ನಿರಾಕರಿಸಿರುವ ಮತ್ತು 37ಕ್ಕೂ ಹೆಚ್ಚು ಹೊಸ ಮುಖಗಳಿಗೆ ಆವಕಾಶ ಮಾಡಿಕೊಟ್ಟಿರುವ ವಿಷಯವನ್ನು ಮಾತ್ರ ಪ್ರಚಾರ ಮಾಡುತ್ತಿರುವ ಮಾಧ್ಯಮಗಳು ಸೀಟು ಹಂಚಿಕೆಯಲ್ಲೂ ಅದು ಅನುಸರಿಸುತ್ತಿರುವ ‘ಸಾಂವಿಧಾನಿಕ ಅನೈತಿಕ’ ಧೋರಣೆಯನ್ನು ಮುನ್ನೆಲೆಗೆ ತಂದಿಲ್ಲ. ಮೊರ್ಬಿ ದುರಂತಕ್ಕೆ ಹೊಣೆಯಾಗಿಸಿ ಹಾಲಿ ಶಾಸಕನಿಗೆ ಸೀಟು ನಿರಾಕರಿಸಿದ ಬಿಜೆಪಿ, ನೇರವಾಗಿ ನರಮೇಧಗಳಲ್ಲಿ ಪಾಲ್ಗೊಂಡವರಿಗೆ ಹಾಗೂ ಅಂತಹ ನರಮೇಧಗಳನ್ನು ಬಹಿರಂಗವಾಗಿ ಸಮರ್ಥಿಸುವವರಿಗೆ ಟಿಕೆಟ್ ಕೊಡುತ್ತಿರುವುದರ ಹಿಂದೆ ಇರುವುದು ಕೇವಲ ಚುನಾವಣಾ ಉದ್ದೇಶಗಳು ಮಾತ್ರವಲ್ಲ.

2002ರಲ್ಲಿ ನಡೆದ ಗುಜರಾತ್ ನರಸಂಹಾರದಲ್ಲಿ ಅಹಮದಾಬಾದಿನ ನರೋಡಾ ಪಾಟಿಯಾ ಎಂಬಲ್ಲಿ ಮನೋಜ್ ಕುಲಕರ್ಣಿ ಎಂಬ ಹಿಂದುತ್ವ ಸಂಘಟನೆಯ ನಾಯಕನ ನೇತೃತ್ವದಲ್ಲಿ 97 ಅಮಾಯಕ ಮುಸ್ಲಿಮರ ಕಗ್ಗೊಲೆ ನಡೆದಿತ್ತು. 18 ಗಂಟೆಗಳಿಗೂ ಹೆಚ್ಚಿನ ಕಾಲ ಮುಸ್ಲಿಮ್ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆನಂತರ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸಿ ಮುಸ್ಲಿಮರ ಮನೆಗಳನ್ನು ಉಡಾಯಿಸಲಾಯಿತು. ಈ ಎಲ್ಲಾ ಅಪರಾಧಗಳಲ್ಲಿ ಮನೋಜ್ ಕುಲಕರ್ಣಿ ಭಾಗವಹಿಸಿದ್ದರ ಬಗ್ಗೆ 22ಕ್ಕೂ ಹೆಚ್ಚು ಪ್ರತ್ಯಕ್ಷದರ್ಶಿಗಳು ಸಾಕ್ಷ ನುಡಿದಿದ್ದರು. ಸಾಕಷ್ಟು ಸಾಕ್ಷಿ-ಪುರಾವೆ ವಿಚಾರಣೆಗಳು ನಡೆದ ಬಳಿಕ 2012ರಲ್ಲಿ ಅಹಮದಾಬಾದಿನ ಜಿಲ್ಲಾ ನ್ಯಾಯಾಲಯ ಮನೋಜ್ ಕುಲಕರ್ಣಿ ಹಾಗೂ ಇತರ 32 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 2018ರಲ್ಲಿ ಹೈಕೋರ್ಟ್ ಇತರರನ್ನು ಬಿಡುಗಡೆ ಮಾಡಿದರೂ ಮನೋಜ್ ಕುಲಕರ್ಣಿ ಒಳಗೊಂಡಂತೆ ಇತರ 12 ಅಪರಾಧಿಗಳ ಶಿಕ್ಷೆಯನ್ನು ಖಾಯಂಗೊಳಿಸಿತು. ಈ ಮಧ್ಯೆ ಹಾಸಿಗೆಯಿಂದ ಅತ್ತಿತ್ತ ಮಗ್ಗಲು ಬದಲಾಯಿಸಲು ಆಗದಷ್ಟು ತನಗೆ ಭೀಕರ ಕಾಯಿಲೆಗಳಿವೆಯೆಂದೂ, ಕೈಕಾಲು ಆಡಿಸಲಾಗದೆಂದೂ, ಮೆದುಳಿನ ಕ್ಯಾನ್ಸರ್ ಇರುವ ಅನುಮಾನವೂ ಇರುವುದರಿಂದ ಮೆಡಿಕಲ್ ಜಾಮೀನು ಕೊಡಬೇಕೆಂದು ಮಾಡಿದ ಮನವಿಯನ್ನು ಸರಕಾರ ಕೂಡ ಪುರಸ್ಕರಿಸಿದ್ದರಿಂದ ಆತ 2016ರಿಂದ ಜಾಮೀನಿನ ಮೇಲೆ ಹೊರಗಡೆಯೇ ಇದ್ದಾನೆಯೇ ಹೊರತು ಶಿಕ್ಷೆ ಅನುಭವಿಸುತ್ತಿಲ್ಲ. ಅಂತಹ ಹೀನಾಯ ಅಪರಾಧಗಳನ್ನು ಮಾಡಿರುವ ಮನೋಜ್ ಕುಲಕರ್ಣಿಗೆ ಒಂದು ನಾಗರಿಕ ಸಂಸ್ಕಾರವಿರುವ, ಸಾಂವಿಧಾನಿಕ ನೈತಿಕತೆ ಇರುವ ಪಕ್ಷವಾದರೆ ಬಿಜೆಪಿ ಹೊರಗೆ ಹಾಕಬೇಕು. ಆದರೆ, ಬಿಜೆಪಿ ಪಕ್ಷ ನರೋಡಾ ಪಾಟಿಯಾ ಭಾಗದ ಹಾಲಿ ಶಾಸಕನಿಗೆ ಟಿಕೆಟು ನಿರಾಕರಿಸಿ ಮನೋಜ್ ಕುಲಕರ್ಣಿಯ ಮಗಳು ಡಾ. ಪಾಯಲ್‌ಗೆ ಟಿಕೆಟು ನೀಡಿದೆ. ಅಷ್ಟು ಮಾತ್ರವಲ್ಲ. ಹಾಸಿಗೆ ಹಿಡಿದಿರುವ ನೆಪದಲ್ಲಿ ಜಾಮೀನು ಪಡೆದುಕೊಂಡಿರುವ ಅಪರಾಧಿ ಮನೋಜ್ ಕುಲಕರ್ಣಿ ಮಗಳ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದನ್ನು ಟಿವಿ ಮಾಧ್ಯಮಗಳು ದಿನನಿತ್ಯ ತೋರಿಸುತ್ತಿವೆ.

ಅದೇ ರೀತಿ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮೂರು ತಿಂಗಳ ಗರ್ಭಿಣಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ, ಅಕೆಯ ಮತ್ತೊಂದು ಮಗುವನ್ನು ಬಂಡೆಗೆ ಬಡಿದು ಕೊಂದಿದ್ದಲ್ಲದೆ, ಆಕೆಯ ಜೊತೆಗೆ ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದ ಇತರ ಆರು ಜನರನ್ನು ಕೊಂದು ರುಂಡ ಮುಂಡಗಳನ್ನು ಬೇರ್ಪಡಿಸಿದ ಅಪರಾಧಗಳು ಸಾಬೀತಾಗಿ 11 ಜನರಿಗೆ ಜೀವಾವಧಿ ಶಿಕ್ಷೆಯಾಗಿತ್ತಷ್ಟೆ. 2008ರಲ್ಲಿ ಅವರಿಗೆ ಶಿಕ್ಷೆಯಾದರೂ ಆ 11 ಜನರಲ್ಲಿ ಪ್ರತಿಯೊಬ್ಬರೂ ಕಳೆದ 14 ವರ್ಷಗಳಲ್ಲಿ 3-4 ವರ್ಷಗಳಷ್ಟು ಕಾಲ ಪರೋಲ್ ಮೇಲೆ ಜೈಲಿನ ಹೊರಗಡೆಯೇ ಕಳೆದಿದ್ದಾರೆ ಮತ್ತು ಪರೋಲ್ ಅವಧಿಯಲ್ಲಿ ಇಬ್ಬರು ಅಪರಾಧಿಗಳು ಮತ್ತೆ ಕಾನೂನು ಉಲ್ಲಂಘಿಸಿ ನಡೆಸಿದ ಅಪರಾಧಗಳ ಬಗ್ಗೆ ದೂರು ದಾಖಲಾಗಿದೆ. ಆದರೂ ಗುಜರಾತ್ ಸರಕಾರ ಅವರಿಗೆ ಪರೋಲ್ ನಿರಾಕರಿಸಲಿಲ್ಲ. ಇದರ ಜೊತೆಗೆ ಕಳೆದ ಆಗಸ್ಟ್ 15ರಂದು ಇವರೆಲ್ಲರನ್ನು ‘ಸನ್ನಡತೆ’ಯ ಪ್ರಮಾಣಪತ್ರ ಕೊಟ್ಟು ಬಿಡುಗಡೆ ಮಾಡಿದೆ. ಇವರನ್ನು ‘ಸನ್ನಡತೆ’ಯ ಆಧಾರದ ಮೇಲೆ ಬಿಡುಗಡೆ ಮಾಡಬಹುದೇ ಎಂದು ಶಿಫಾರಸು ಮಾಡಲು ರಚಿಸಿದ ಸಮಿತಿಯಲ್ಲಿ ಇದ್ದವರೆಲ್ಲಾ ಬಿಜೆಪಿ ಶಾಸಕರು ಮತ್ತು ಬಿಜೆಪಿಯ ಪಕ್ಷ ಸಂಘಟನೆಯವರೇ.

ಇವರ ಸನ್ನಡತೆಗೆ ಸರ್ಟಿಫಿಕೆಟ್ ನೀಡಿದ ಸಮಿತಿ ಸದಸ್ಯರಾದ ಗೋಧ್ರಾ ವಿಧಾನ ಸಭೆಯ ಬಿಜೆಪಿ ಶಾಸಕ ಸಿ.ಕೆ. ರೌಲ್‌ಜಿ ಎಂಬವರಂತೂ ‘‘ಅವರೆಲ್ಲರೂ ಸಂಸ್ಕಾರಿ ಬ್ರಾಹ್ಮಣರು, ಇಂತಹ ಅಪರಾಧಗಳನ್ನು ಎಸಗಲು ಸಾಧ್ಯವೇ ಇಲ್ಲ. ಯಾರೋ ದುರುದ್ದೇಶದಿಂದ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’’ ಎಂದು ಹೇಳಿಕೆ ನೀಡಿ ಈ ದುಷ್ಟ ಅಪರಾಧಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದರು. ಈ ರೌಲ್‌ಜಿ ಹೇಳಿಕೆಯಲ್ಲಿರುವ ರಾಜಕೀಯ, ಸಂಸ್ಕಾರಗಳೆಲ್ಲವೂ ಎಷ್ಟು ಅನಾಗರಿಕ ಹಾಗೂ ಸಂವಿಧಾನ ವಿರೋಧಿ ಎಂಬುದು ಸಾಕಷ್ಟು ಚರ್ಚೆಯಾಗಿತ್ತು. ಆದರೂ ಬಿಜೆಪಿ ಇಂತಹ ‘ಅಸಂಸ್ಕಾರಿ ಸದಸ್ಯನಿ’ಗೆ ಮತ್ತೆ ಗೋಧ್ರಾ ಕ್ಷೇತ್ರದಿಂದ ಟಿಕೆಟು ಕೊಟ್ಟಿದೆ. ಇದೆಲ್ಲದರ ಹಿಂದಿನ ಉದ್ದೇಶ ಸ್ಪಷ್ಟ. ಇಂಥವರಿಗೆ ಮತ್ತೆಮತ್ತೆ ಟಿಕೆಟ್ ಕೊಡುವ ಮೂಲಕ ಬಿಜೆಪಿ ಜನರಲ್ಲಿ ಮತ್ತಷ್ಟು ದ್ವೇಷ-ಸೇಡು-ನರಮೇಧದ ಭಾವನೆಯನ್ನೇ ಕೆರಳಿಸಿ ರಾಜಕಾರಣ ಮಾಡುವುದನ್ನು ಸ್ಪಷ್ಟವಾಗಿ ಘೋಷಿಸಿದಂತಾಗಿದೆ. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ಮತ್ತು ಇಂತಹ ನರಮೇಧಗಳು ಮತ್ತು ಹೀನಾಯ ಅಪರಾಧಗಳನ್ನು ಮಾಡುವವರನ್ನು ಸನ್ಮಾನಿಸುವುದಾಗಿ ಘೋಷಿಸಿದೆ.

ಸತತ ದ್ವೇಷ ಪ್ರಚಾರಗಳಿಂದ ಕುರುಡಾಗಿರುವ ಬಹುಪಾಲು ಗುಜರಾತ್ ಜನತೆ ಕಳೆದ ಆರು ಚುನಾವಣೆಗಳಿಂದಲೂ ಈ ದ್ವೇಷ ರಾಜಕಾರಣಕ್ಕೆ ಮತ ಕೊಡುತ್ತಿದ್ದಾರೆ. ಅದರೆ ಈ ದ್ವೇಷದ ಕುರುಡಿನಿಂದಾಗಿ ತಮ್ಮದೇ ಬದುಕು ಕುಸಿಯುತ್ತಿರುವುದನ್ನು ಕಾಣದಾಗಿದ್ದಾರೆ. ಕಳೆದ 15 ವರ್ಷಗಳಲ್ಲಿ ಗುಜರಾತ್ ರಾಜ್ಯವು ಎಲ್ಲಾ ಸಾಮಾಜಿಕ ಸೂಚ್ಯಂಕಗಳಲ್ಲೂ ವೇಗವಾಗಿ ಕುಸಿಯುತ್ತಿದೆ. ಶಿಶುಮರಣ, 5 ವರ್ಷದೊಳಗಿನ ಮಕ್ಕಳಲ್ಲಿ ಎತ್ತರಕ್ಕೆ ತಕ್ಕ ತೂಕವಿರದಿರುವ, ವಯಸ್ಸಿಗೆ ತಕ್ಕ ಎತ್ತರವಿರದಿರುವ ಮಕ್ಕಳಿರುವ ರಾಜ್ಯದಲ್ಲಿ ಗುಜರಾತ್ ಮಕ್ಕಳ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಿದೆ. ಹಾಗೆಯೇ ಶಾಲಾ ವಂಚಿತ ಹಾಗೂ ಉನ್ನತ ಶಿಕ್ಷಣ ವಂಚಿತ ಮಕ್ಕಳಲ್ಲಿ ಗುಜರಾತಿನ ಸ್ಥಾನ 30 ರಾಜ್ಯಗಳಲ್ಲಿ 21 ಮತ್ತು 23ನೇ ಸ್ಥಾನಕ್ಕೆ ಕುಸಿದಿದೆ. ಅತ್ಯಂತ ಹೆಚ್ಚು ವಿಷಯುಕ್ತ ಪರಿಸರವನ್ನು ಹೊಂದಿರುವ ರಾಜ್ಯಗಳಲ್ಲಿ ಗುಜರಾತೇ ಪ್ರಥಮ ಸ್ಥಾನ ಪಡೆದಿದೆ. ಮೊರ್ಬಿ ದುರಂತವಂತೂ ಗುಜರಾತ್ ಸರಕಾರದಲ್ಲಿ ಆಳವಾಗಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಬಯಲು ಮಾಡಿದೆ. ಗುಜರಾತಿನ ಹೈಕೋರ್ಟ್ ಅದನ್ನು ಬಯಲು ಮಾಡಿದೆ ಹಾಗೂ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಿದೆ. ಆದರೆ ಜನರಿಗೆ ಈ ಸತ್ಯಗಳು ತಿಳಿಯದಂತೆ, ಕಂಡರೂ ಅಮುಖ್ಯಗೊಳಿಸುವಂತೆ ದ್ವೇಷದ ರಾಜಕಾರಣದ ಮೂಲಕ ಜನರನ್ನು ಕುರುಡು ಮಾಡಿದೆ. ಈ ಚುನಾವಣೆಯಲ್ಲಾದರೂ ಗುಜರಾತಿನ ಜನರ ದ್ವೇಷದ ಕುರುಡು ಕಳೆಯುವುದೇ?

Similar News