ಕುಮಾರಸ್ವಾಮಿಯವರ ದಾರಿ ತಪ್ಪಿದ ಮನಸ್ಥಿತಿ

Update: 2024-04-16 06:53 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View
ಸಂವಿಧಾನ ಜಾತಿ, ಮತ, ಲಿಂಗ ಭೇದವಿಲ್ಲದೆ ಸರ್ವರಿಗೂ ಸಮಾನತೆ ನೀಡಿದೆ.ಆದರೆ ಇನ್ನೂ ಪಾಳೇಗಾರಿಕೆ ಮನುವಾದದ ಕೊಚ್ಚೆಯಲ್ಲಿ ಉರುಳಾಡುತ್ತಿರುವವರ ಸಂಖ್ಯೆ ನಮ್ಮ ಸಮಾಜದಲ್ಲಿ ಸಾಕಷ್ಟಿದೆ. ಸಾಮಾನ್ಯ ಜನ ಹೇಗೇ ಇರಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು, ಉನ್ನತ ಅಧಿಕಾರ ಸ್ಥಾನಗಳನ್ನು ಅಲಂಕರಿಸಿದವರು ಆಗಾಗ ಆಡುತ್ತಿರುವ ಮಾತುಗಳನ್ನು ಗಮನಿಸಿದರೆ ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಸವಿಯುಂಡ ಎಚ್.ಡಿ. ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಇತ್ತೀಚೆಗೆ ಆಡಿದ ಮಾತು ಸಹಜವಾಗಿ ವಿವಾದಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಹಳ್ಳಿಗಾಡಿನ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲೋ ಹೇಳಿರಬಹುದು.ಆದರೆ ಅವರ ‘ದಾರಿ ತಪ್ಪಿದ್ದಾರೆ’ ಎಂಬ ಮಾತು ಅತ್ಯಂತ ಕೀಳು ಮಟ್ಟದ ಅಭಿರುಚಿಯಿಂದ ಕೂಡಿದೆ. ಮಾಜಿ ಮುಖ್ಯಮಂತ್ರಿಯ ಬಾಯಿಯಿಂದ ಇಂಥ ಮಾತು ಬರಬಾರದಾಗಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೆ ಕೆಲವಷ್ಟು ಸ್ಥಾನಗಳನ್ನು ಗೆದ್ದು ಹಿಂದಿನಂತೆ ಮತ್ತೆ ತಾನೇ ಮುಖ್ಯಮಂತ್ರಿಯಾಗಬೇಕೆಂಬ ಕುಮಾರಸ್ವಾಮಿ ಅವರ ಲೆಕ್ಕಾಚಾರ ತಪ್ಪಿತು. ಮತದಾರರು ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿದರು. ಇದರಿಂದ ಹತಾಶರಾದ ಕುಮಾರಸ್ವಾಮಿ ಮತ್ತು ಇತರ ಬಿಜೆಪಿ ಮುಖಂಡರು ಇದಕ್ಕೆಲ್ಲ ಗ್ಯಾರಂಟಿ ಯೋಜನೆ ಕಾರಣವೆಂದು ಅವುಗಳ ವಿರುದ್ಧ ನಿರಂತರ ದಾಳಿಯನ್ನು ಆರಂಭಿಸಿದ್ದಾರೆ. ಹೆಣ್ಣು ಮಕ್ಕಳು ತಿಂಗಳಿಗೆ 2 ಸಾವಿರ ರೂಪಾಯಿ ಪಡೆಯುವುದು, ಸರಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವುದನ್ನು ಕಂಡು ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.

ಕುಮಾರಸ್ವಾಮಿ ಮಾತ್ರವಲ್ಲ ಬೆಳಗಾವಿಯ ಬಿಜೆಪಿ ಶಾಸಕ ಸಂಜಯ ಪಾಟೀಲ್ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಅತ್ಯಂತ ಅಸಭ್ಯವಾಗಿ ಮಾತನಾಡಿದ್ದಾರೆ. ಆತನ ಹೇಳಿಕೆಯನ್ನು ಯಾವ ಬಿಜೆಪಿ ನಾಯಕನೂ ಖಂಡಿಸಿಲ್ಲ. ಹೆಣ್ಣು ಮಕ್ಕಳು ರಾಜಕೀಯಕ್ಕೆ ಬಂದು ಬೆಳೆಯುವುದನ್ನು ಇಷ್ಟ ಪಡದ ಪುರುಷಾಧಿಪತ್ಯದ ಮನೋಭಾವ ಇವರ ಹೇಳಿಕೆಗಳಲ್ಲಿ ಕಂಡು ಬರುತ್ತಿದೆ.ಮನುವಾದವನ್ನು ಜಾರಿಗೆ ತರಲು ಹೊರಟಿರುವ ಬಿಜೆಪಿಯಂಥ ಪಕ್ಷದವರಿಂದ ಇಂಥ ಮಾತುಗಳು ಮಹಿಳೆಯರ ಬಗ್ಗೆ ಬರುವುದು ಸಹಜ. ಆದರೆ ಜಾತ್ಯತೀತ ಜನತಾದಳ ಎಂದು ಹೇಳಿಕೊಂಡು ಅದಕ್ಕೆ ಎಳ್ಳು ನೀರು ಬಿಟ್ಟ ಕುಮಾರಸ್ವಾಮಿ ಬಾಯಿಯಿಂದ ಇಂತಹ ಮಾತು ಬರಬಾರದಿತ್ತು.

ನಮ್ಮ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಹೆಣ್ಣು ಮಕ್ಕಳಿಗೆ ಕೊಡಬೇಕಾದ ನ್ಯಾಯವಾದ ಸ್ಥಾನ ಮಾನ ಮತ್ತು ಅವಕಾಶಗಳನ್ನು ನಮ್ಮ ಸಮಾಜ ಈವರೆಗೆ ಕೊಟ್ಟಿಲ್ಲ. ಅಧಿಕಾರ ಹಂಚಿಕೆಯೂ ತಾರತಮ್ಯದಿಂದ ಕೂಡಿದೆ. ಅದರಲ್ಲೂ ಬಡ ಮತ್ತು ಕೆಳ ಮಧ್ಯಮ ವರ್ಗಗಳ ಮಹಿಳೆಯರ ಪರಿಸ್ಥಿತಿ ದಾರುಣವಾಗಿದೆ. ಪತಿಗೆ ಬರುವ ಕಡಿಮೆ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತ ಕುಟುಂಬದ ಎಲ್ಲರ ಹಸಿವನ್ನು ಇಂಗಿಸುವ ತಾಯಂದಿರಿಗೆ ಸರಕಾರ ಕೊಡುವ ಕನಿಷ್ಠ ಸೌಕರ್ಯಗಳು ಒಂದಿಷ್ಟು ಉಸಿರಾಡಲು ನೆರವಾಗುತ್ತವೆ.

ಹಳ್ಳಿಗಾಡಿನ ಅಮಾಯಕ ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ಟೀಕಿಸುವ ಮೊದಲು ಕುಮಾರಸ್ವಾಮಿ ಅವರು ತಾವೆಷ್ಟು ಪರಿಶುದ್ಧರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಅವರ ವೈಯಕ್ತಿಕ ಸಂಬಂಧಗಳ ಬಗ್ಗೆ ಆಕ್ಷೇಪವಿಲ್ಲ. ಆದರೆ ಎಲ್ಲಾ ರಾಜಕೀಯ ಅಧಿಕಾರವೂ ತಮ್ಮ ಕುಟುಂಬದಲ್ಲೇ ಕಾಲುಮುರಿದುಕೊಂಡು ಬೀಳಬೇಕೆಂದು ಬಯಸುವುದು ಪ್ರಜಾಪ್ರಭುತ್ವದಲ್ಲಿ ನ್ಯಾಯ ಸಮ್ಮತವೇ? ತನ್ನ ಮಗ ನಿಖಿಲ್ ಕುಮಾರಸ್ವಾಮಿಯವರನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಜನ ಸೋಲಿಸಿದರೆಂಬ ಅಸಮಾಧಾನ ಅವರನ್ನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿದೆೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರಣವೆಂದು ಅವರ ಮೇಲೆ ಕೆಂಡ ಕಾರುತ್ತಿದ್ದಾರೆ. ಇದೇ ಅಸಹನೆ ಗ್ಯಾರಂಟಿ ಯೋಜನೆಯ ಫಲಾನುಭವಿ ಮಹಿಳೆಯರ ಮೇಲೂ ವ್ಯಕ್ತವಾಗುತ್ತಿದೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅವರ ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಬಗ್ಗೆ ಯಾರಿಗೂ ಆಕ್ಷೇಪವಿರಲಿಲ್ಲ. ರಾಜಕಾರಣದಲ್ಲಿ ಸೋಲು ಮತ್ತು ಗೆಲುವುಗಳು ಸಹಜ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದರೆ ಬಹುದೊಡ್ಡ ನಾಯಕರಾಗಿ ಬೆಳೆಯುತ್ತಾರೆ.

ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಅವರು ಈ ಹಿಂದೆಯೂ ಕೆಲವು ಸಲ ಅತ್ಯಂತ ಅಸಭ್ಯ ಭಾಷೆಯಲ್ಲಿ ಮಾತನಾಡಿದ ಉದಾಹರಣೆಗಳಿವೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಲತಾ ಅವರ ಬಗ್ಗೆ ಇಂಥದೇ ಭಾಷೆಯಲ್ಲಿ ಮಾತಾಡಿದ ಪರಿಣಾಮವಾಗಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋಲುವ ಪರಿಸ್ಥಿತಿ ನಿರ್ಮಾಣವಾಯಿತು. ಬೆಳಗಾವಿಯಲ್ಲಿ ತನ್ನ ಅಹವಾಲುಗಳನ್ನು ಹೊತ್ತು ತಂದ ಹಳ್ಳಿಯ ರೈತ ಮಹಿಳೆಗೆ ‘‘ಇಷ್ಟು ದಿನ ಎಲ್ಲಿ ಮಲಗಿದ್ದಿಯಮ್ಮ?’’ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದರು.ಆಗಲೂ ಅವರ ವಿರುದ್ಧ ರಾಜ್ಯದಲ್ಲಿ ಮಹಿಳಾ ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದವು. ಆದರೆ ಕುಮಾರಸ್ವಾಮಿಯವರ ಪುರುಷಾಧಿಪತ್ಯದ ಫ್ಯೂಡಲ್ ಭಾಷೆ ಬದಲಾಗಲೇ ಇಲ್ಲ. ಕುಮಾರಸ್ವಾಮಿ ಏನೇ ಸಮರ್ಥಿಸಿಕೊಳ್ಳಲಿ, ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎನ್ನುವ ಮಾತು ಆಡು ಭಾಷೆಯಲ್ಲಿ ಅವರ ನಡತೆಯ ಬಗ್ಗೆ ಮಾಡಿದ ಟೀಕೆಯಾಗುತ್ತದೆ. ಇಂಥ ಭಾಷೆಯಲ್ಲಿ ಮಾತಾಡುವುದು ಕುಮಾರಸ್ವಾಮಿ ಅಂತಹವರಿಗೆ ಶೋಭೆ ತರುವುದಿಲ್ಲ.

ನಮ್ಮ ಹಳ್ಳಿಗಾಡಿನ ಹೆಣ್ಣು ಮಕ್ಕಳು ಮಾನ ಮರ್ಯಾದೆಯಿಂದ ಬದುಕುತ್ತಾ ಬಂದವರು. ಎಷ್ಟೇ ಕಡು ಬಡತನವಿರಲಿ ಉಪವಾಸವಿದ್ದರೂ ದಾರಿ ತಪ್ಪಿದವರಲ್ಲ.ಅವರಿವರ ಮನೆಯ ಪಾತ್ರೆ ತೊಳೆದು, ಹೊಲ, ಗದ್ದೆಗಳಲ್ಲಿ ಕೆಲಸ ಮಾಡಿ ಕುಟುಂಬವನ್ನು ಸಾಕುವವರು. ದಾರಿ ತಪ್ಪುವ ಅಭ್ಯಾಸ ಕುಮಾರಸ್ವಾಮಿ ಅವರಂಥ ಕೋಟ್ಯಧೀಶರಿಗೆ ಇರಬಹುದು. ಇಂತಹ ಮಾತಿನಿಂದ ಕುಮಾರಸ್ವಾಮಿ ಮುಖವಾಡ ಕಳಚಿ ಬಿದ್ದಿದೆ.

ಮಹಿಳೆಯರ ಬಗ್ಗೆ ಆಡಿದ ಮಾತಿಗೆ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರೆ ಸಾಲದು. ರಾಜ್ಯ ಮಹಿಳಾ ಆಯೋಗ ಮತ್ತು ಚುನಾವಣಾ ಆಯೋಗಗಳು ಕುಮಾರಸ್ವಾಮಿ ಅವರ ಮೇಲೆ ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News