ತೆಲಂಗಾಣ ಶಾಸಕರ ಖರೀದಿ ಯತ್ನ ಪ್ರಕರಣ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‍ಗೆ ಸಮನ್ಸ್

Update: 2022-11-19 02:18 GMT

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (Chief Minister K Chandrashekar Rao) ಅವರ ತೆಲಂಗಾಣ ರಾಷ್ಟ್ರೀಯ ಸಮಿತಿಯ ಶಾಸಕರನ್ನು ಖರೀದಿಸಲು ಪ್ರಯತ್ನ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್‍ಗೆ ತೆಲಂಗಾಣ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ndtv.com ವರದಿ ಮಾಡಿದೆ.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)ಯಾಗಿರುವ ಬಿ.ಎಲ್. ಸಂತೋಷ್ (National General Secretary (Organisation) of the BJP, BL Santhosh) ನವೆಂಬರ್ 21ಕ್ಕೆ ವಿಚಾರಣೆಗೆ ಹಾಜರಾಗಬೇಕು. ಇಲ್ಲದಿದ್ದರೆ ಅವರನ್ನು ಬಂಧಿಸಲಾಗುವುದು ಎಂದು ನೋಟಿಸ್ ನೀಡಲಾಗಿದೆ.

ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ ಹೈಕೋರ್ಟ್ ಆದೇಶದ ಅನ್ವಯ ನ್ಯಾಯಾಧೀಶರೊಬ್ಬರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕಾಗುತ್ತದೆ.

ಹೈದರಾಬಾದ್‍ನ ಫಾರ್ಮ್‍ಹೌಸ್ ಒಂದರಲ್ಲಿ ಟಿಆರ್‌ಎಸ್‍ನ ಶಾಸಕರಿಗೆ 100 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಟಿಆರ್‌ಎಸ್ ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ ಎಂದು ಕೆಸಿಆರ್ ಇತ್ತೀಚೆಗೆ ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಪಾತ್ರ ನಿರ್ವಹಿಸುತ್ತಾರೆ ಎಂಬ ವದಂತಿಗಳ ನಡುವೆಯೇ ಶಾಸಕರ ಖರೀದಿ ಯತ್ನದ ಆರೋಪ ಕೇಳಿಬಂದಿತ್ತು ಎಂದು ndtv.com ವರದಿ ಮಾಡಿದೆ. 

Similar News