ಡೆಹ್ರಾಡೂನ್: ವಾಹನ ಕಂದಕಕ್ಕೆ ಉರುಳಿ ಇಬ್ಬರು ಮಹಿಳೆಯರು ಸೇರಿ 12 ಮಂದಿ ಮೃತ್ಯು

Update: 2022-11-19 02:45 GMT

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು ಶುಕ್ರವಾರ ಸಂಜೆ ಆಳವಾದ ಕಂದಕಕ್ಕೆ ಉರಳಿ ಬಿದ್ದು ಸಂಭವಿಸಿದ ದುರಂತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

17 ಮಂದಿ ಪ್ರಯಾಣಿಕರಿದ್ದ ಟಾಟಾ ಸುಮೊ ವಾಹನ ಜೋಶಿಮಠ ಪ್ರದೇಶದ ಉರ್ಗಾಂ ಎಂಬಲ್ಲಿ ಶುಕ್ರವಾರ ಸಂಜೆ ಆಳವಾದ ಪ್ರಪಾತಕ್ಕೆ ಉರುಳಿತು ಎಂದು ರಾಜ್ಯ ವಿಕೋಪ ಸ್ಪಂದನೆ ಪಡೆ ಹೇಳಿದೆ. ಘಟನೆ ತಿಳಿದ ತಕ್ಷಣ ಎಸ್‍ಡಿಆರ್‌ಎಫ್ ಪರಿಹಾರ ಕಾರ್ಯಕ್ಕೆ ಧುಮುಕಿದೆ.

ಪ್ರಯಾಣಿಕರು ಜೋಶಿಮಠ್‍ನಿಂದ ಪಲ್ಲಾ ಜಖೋಲ್ ಗ್ರಾಮಕ್ಕೆ ತೆರಳುತ್ತಿದ್ದರು ಎಂದು ಚಮೋಲಿ ಎಸ್ಪಿ ಪ್ರಮೇಂದ್ರ ದೊಭಾಲ್ ಹೇಳಿದ್ದಾರೆ.

ವಾಹನ ಪ್ರಪಾತಕ್ಕೆ ಬೀಳುವ ಸೂಚನೆ ಕಂಡ ಇಬ್ಬರು ಪ್ರಯಾಣಿಕರು ವಾಹನದಿಂದ ಕೆಳಕ್ಕೆ ಹಾರಿದ್ದಾರೆ. 12 ಮೃತದೇಹಗಳನ್ನು ಎಸ್‍ಡಿಆರ್‌ಎಫ್ ಪತ್ತೆ ಮಾಡಿದೆ. ಈ ಕಂದಕ ಸುಮಾರು 300 ಮೀಟರ್‌ಗಳಷ್ಟು ಆಳ ಇದೆ. ವಾಹನದ ಅವಶೇಷಗಳನ್ನು ಮೇಲೆತ್ತುವುದು ಕಷ್ಟ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಾಹನದಲ್ಲಿ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದ್ದು ಕೆಲವರು ಟಾಪ್‍ನ ಮೇಲೆ ಕುಳಿತಿದ್ದರು ಎಂದು ತಿಳಿದುಬಂದಿದೆ.

ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ. 

Similar News