ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನಾಚರಣೆ

Update: 2022-11-19 14:20 GMT

ಮಂಗಳೂರು: ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಇಂದಿರಾ ಗಾಂಧಿ ಅವರು ಹಲವಾರು ಕ್ರಾಂತಿಕಾರಕ ಯೋಜನೆಗಳು, ದಿಟ್ಟ ನಿರ್ಧಾರಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಡಿಗಲ್ಲು ಹಾಕಿದವರು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.

ಶನಿವಾರ ಇಂದಿರಾ ಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬಡಜನರ ಬಗೆಗಿನ ಕಾಳಜಿ, ಅವರ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ. ಭೂಮಸೂದೆ ಕಾಯ್ದೆ ಅತ್ಯಂತ ಪರಿಣಾಮಕಾರಿಯಾಗಿ ದ.ಕ. ಜಿಲ್ಲೆಯಲ್ಲಿ ಜಾರಿಯಾಗಿದೆ. ಆದರೆ, ಇಂದಿರಾ ಗಾಂಧಿ ಅವರ ಕಾರ್ಯಕ್ರಮದ ಫಲಾನುಭವಿಗಳು ಇಂದು ಅವರ ವಿರುದ್ಧವೇ ಧಿಕ್ಕಾರ ಕೂಗುವಷ್ಟು ದುರಂಹಕಾರಿಗಳಾಗಿದ್ದಾರೆ ಎಂದು  ಹೇಳಿದರು.

ಇಂದಿರಾ ಗಾಂಧಿ ದೇಶದ ಆಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು. ಹಸಿರು ಕ್ರಾಂತಿ, ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಅವರ ದೂರದೃಷ್ಟಿಯ ಆಲೋಚನೆ, ವಿದೇಶಿ ನೀತಿಗಳು ಹೆಚ್ಚಿನ ಇಳುವರಿಯ ಬೀಜಗಳು, ನೀರಾವರಿ ಯೋಜನೆ, ಆರ್ಥಿಕತೆಗೆ ಉತ್ತೇಜನ, ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ಮತ್ತು ಪರಮಾಣು ಕಾರ್ಯಕ್ರಮಗಳ ನೇತೃತ್ವ ವಹಿಸಿದರು. 1974ರಲ್ಲಿ ಪರಮಾಣು ಸ್ಪೋಟ ನಡೆಸಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ಮೊದಲ ಬಾರಿಗೆ ಪರಿಚಯಿಸಿದರು ಎಂದು ಸ್ಮರಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿ, ಬಲಿಷ್ಠ ನಾಯಕತ್ವ, ದೂರದೃಷ್ಟಿಗೆ ಮತ್ತೊಂದು ಹೆಸರೇ ಇಂದಿರಾಗಾಂಧಿ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಮೊಯ್ದೀನ್ ಬಾವ, ಜೆ.ಆರ್.ಲೋಬೊ, ಕೆಪಿಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಕೃಪಾ ಆಳ್ವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಲುಕ್ಮಾನ್ ಬಂಟ್ವಾಳ, ಬಿ.ಎಂ.ಅಬ್ಬಾಸ್ ಅಲಿ, ಶುಭಾಷ್ ಕೊಲ್ನಾಡ್, ನವೀನ್ ಡಿಸೋಜಾ, ಅಬ್ದುಲ್ ರವೂಫ್, ಪುರುಷೋತ್ತಮ ಚಿತ್ರಾಪುರ, ಜಯಶೀಲ ಅಡ್ಯಂತಯ, ಕೇಶವ ಮರೋಳಿ, ಅಬ್ದುಲ್ ಲತೀಫ್ ಕಂದಕ್, ಲಾರೆನ್ಸ್ ಡಿಸೋಜಾ, ಮಲಾರ್ ಮೋನು, ನೀರಜ್ ಚಂದ್ರ ಪಾಲ್, ಶಬ್ಬೀರ್ ಎಸ್., ಸಿ.ಎಂ.ಮುಸ್ತಫಾ, ಪ್ರೇಮ್ ಬಳ್ಳಾಲ್ ಭಾಗ್, ಜೆಸಿಂತಾ ವಿಜಯ್ ಆಲ್ಫ್ರೆಡ್, ಸಬಿತಾ ಮಿಸ್ಕಿತ್, ಮಲ್ಲಿಕ ಪಕ್ಕಳ, ಸುರೇಖ ಚಂದ್ರಹಾಸ, ಚಂದ್ರಕಲಾ ಜೋಗಿ, ಗೀತಾ ಅತ್ತಾವರ, ಶಶಿಕಲಾ ಪದ್ಮನಾಭ, ಮಂಜುಲಾ ನಾಯ್ಕ್, ಚಂದ್ರಿಕಾ ರೈ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವಾಸ್ ಕುಮಾರ್ ದಾಸ್, ಜೋಕ್ಕಿಂ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ ವಂದಿಸಿದರು.

Similar News