ಕಾಪು, ಪಡುಬಿದ್ರಿ ಆಸ್ಪತ್ರೆ ಮೇಲ್ದರ್ಜೆಗೆ ಪ್ರಸ್ತಾವನೆ: ಲಾಲಾಜಿ ಆರ್. ಮೆಂಡನ್

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೀತಲೀಕೃತ ಶವಾಗಾರ ಉದ್ಘಾಟನೆ

Update: 2022-11-19 14:26 GMT

ಪಡುಬಿದ್ರಿ: ತಾಲ್ಲೂಕು ಕೇಂದ್ರವಾಗಿರುವ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆ ಯಾಗಿ, ಪಡುಬಿದ್ರಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದರು.

69ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿರುವ ಶೀತಲೀಕೃತ ಶವಾಗಾರ ಉದ್ಘಾಟನೆ, ವೈದ್ಯಕೀಯ ಶಿಬಿರ ಹಾಗೂ ಅಭಿನಂದನಾ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಇದರೊಂದಿಗೆ ಆಸ್ಪತ್ರೆಯನ್ನು ಸೌರಚಾಲಿತವಾಗಿಸಲು ಯೋಜನೆ ರೂಪಿಸಲಾಗುತ್ತಿದೆ. ಶಿರ್ವ ಸಮುದಾಯ ಆಸ್ಪತ್ರೆಯನ್ನು ಮಣಿಪಾಲ ಕೆಎಂಸಿ ನಿರ್ವಹಣೆಗೆ ಶೀಘ್ರ ವಹಿಸಲಾಗುವುದು ಎಂದರು.

ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಬಹು ಬೇಡಿಕೆಯ ಶೀತಲೀಕೃತ ಶವಾಗಾರ ಕಟ್ಟಡವನ್ನು ಸರ್ಕಾರದ 20 ಲಕ್ಷ ಅನುದಾನ ಬಳಸಿ ನಿರ್ಮಿಸಲಾಗಿದ್ದು, ಸೊಸೈಟಿ ಮೂಲಕ 5 ಲಕ್ಷ ವೆಚ್ಚದಲ್ಲಿ ಶೀತಲೀಕೃತ ವ್ಯವಸ್ಥೆ ಕಲ್ಪಿಸಲಾಗಿದೆ. ಓರ್ವ ಸಿಬ್ಬಂದಿ ನೇಮಿಸಿ ಅದರ ನಿರ್ವಹಣೆಗೆ ವಾರ್ಷಿಕ 5 ಲಕ್ಷ ಅಗತ್ಯವಿದ್ದು, ಸೊಸೈಟಿ ಹಾಗೂ ಸ್ಥಳೀಯ ದಾನಿಗಳು ಕೈಜೋಡಿಸುವಂತೆ  ಶಾಸಕ ಲಾಲಾಜಿ ಆರ್. ಮೆಂಡನ್ ಮನವಿ ಮಾಡಿದರು. 

ಅಭಿನಂದನೆ ಸ್ವೀಕರಿಸಿದ ಉಡುಪಿ ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ ಎ ಸುವರ್ಣ,  ಕಾಪು ತಾಲೂಕಿನಲ್ಲಿ 2 ಎಕರೆ ಸರ್ಕಾರಿ ಜಮೀನು ಒದಗಿಸಿದಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ಹಾಗೂ ದಾನಿಗಳ ನೆರವಿನಿಂದ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಬದ್ಧರಿರುವುದಾಗಿ ಭರವಸೆ ನೀಡಿಮ ಸರ್ಕಾರ ಮಾಡದಂತಹ ಕೆಲಸಗಳನ್ನು ಸಹಕಾರಿ ಸಂಘಗಳು ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಶೀತಲೀಕೃತ ಶವಾಗಾರ ನಿರ್ವಹಣೆಗೆ ಅಗತ್ಯ ಸಹಕಾರ ನೀಡಲಾಗುವುದು. ಅದರೊಂದಿಗೆ ಪಡುಬಿದ್ರಿ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ 15 ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಸಹಕರಿಸುವಲ್ಲಿ ಶಾಸಕರು ಮುತುವರ್ಜಿವಹಿಸಬೇಕು ಎಂದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್  ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಯಶಪಾಲ್ ಎ ಸುವರ್ಣ, ಅತ್ಯುತ್ತಮ ಸಹಕಾರಿ ಸಹಕಾರ ಸಂಘ ಪ್ರಶಸ್ತಿ ಪಡೆದಿರುವ ಉಡುಪಿ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ್‍ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಅವರನ್ನು ಅಭಿನಂದಿಸಲಾಯಿತು. 

ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಪಡುಬಿದ್ರಿ ಗಣಪತಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘ ಸಹಯೋಗ ದಲ್ಲಿ ವೈದ್ಯಕೀಯ ಶಿಬಿರ ನಡೆಯಿತು. ಸಂಘ ವತಿಯಿಂದ 20 ಸಾವಿರ ರೂ. ಮೌಲ್ಯದ ಔಷಧಿಯನ್ನು ಸಂಘ ಅಧ್ಯಕ್ಷ ಸಂತೋಷ್‍ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.. ರಾಜಶ್ರೀ ಕಿಣಿಯವರಿಗೆ ಹಸ್ತಾಂತರಿಸಲಾಯಿತು.

ಶೀತಲೀಕೃತ ಶವಾಗಾರ ನೀಡಿರುವ ಸೊಸೈಟಿ ಅಧ್ಯಕ್ಷ ಸುಧೀರ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಬೆಳ್ತಂಗಡಿ ಸೇವಾ ಭಾರತಿ ಸಂಸ್ಥೆಗೆ ಸೊಸೈಟಿಯಿಂದ 50 ಸಾವಿರ ರೂ.. ನೆರವಿನ ಚೆಕ್ ಅನ್ನು ಸಂಸ್ಥೆ ಅಧ್ಯಕ್ಷ ವಿನಾಯಕ ರಾವ್ ಅವರಿಗೆ ಹಸ್ತಾಂತರಿಸಲಾಯಿತು.

ಡಿಎಚ್‍ಒ ಡಾ. ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ್ ಉಪಾಧ್ಯಾಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿ ಶೆಟ್ಟಿ ಪಡುಬಿದ್ರಿ, ಗಾಯತ್ರಿ ಪ್ರಭು ಫಲಿಮಾರು, ಪಾಂಡುರಂಗ ಸಿ. ಕರ್ಕೇರ ಹೆಜಮಾಡಿ, ಕಸ್ತೂರಿ ಪ್ರವೀಣ್ ಎರ್ಮಾಳು ತೆಂಕ, ಸೊಸೈಟಿ ಉಪಾಧ್ಯಕ್ಷ ಗುರುರಾಜ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿಎಚ್, ನಿರ್ದೇಶಕರು ಉಪಸ್ಥಿತರಿದ್ದರು. ರಾಜೇಶ್ ಶೇರಿಗಾರ್ ನಿರೂಪಿಸಿದರು.

Similar News