ಶಾಲೆಯಲ್ಲಿ ಧ್ಯಾನ, ಯೋಗ ಕೈಗೊಳ್ಳಲು ತೀರ್ಮಾನಿಸಲಾಗಿದೆ: ಸಚಿವ ಬಿ.ಸಿ.ನಾಗೇಶ್

Update: 2022-11-19 15:21 GMT

ಮಂಗಳೂರು, ನ. 19: ರಾಜ್ಯದಲ್ಲಿ ಮಕ್ಕಳ ಶೈಕ್ಷಣಿಕ ಅಧ್ಯಯನ ಉತ್ತಮಗೊಳಿಸಲು ಶಾಲೆಯಲ್ಲಿ ಧ್ಯಾನ, ಯೋಗ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಖಾತೆ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು,ಈ ಕ್ಷೇತ್ರದಲ್ಲಿ ಸಾಧಕರಾಗಿರುವವರಿಂದ ಅಭಿಪ್ರಾಯ ಪಡೆದು ಶೀಘ್ರದಲ್ಲಿ ಅನುಷ್ಠಾನ ನಡೆಯಲಿದೆ ಎಂದರು.

ಧ್ಯಾನ ಹೇಗಿರಬೇಕು. ಎಲ್ಲಿ ಮಾಡಬೇಕು ಹಾಗೂ ಒಂದನೇ ತರಗತಿ ಮಕ್ಕಳು ಅಥವಾ 10ನೇ ತರಗತಿಗೆ ಹೇಗೆ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹ ನಡೆಯಲಿದೆ ಎಂದವರು ಹೇಳಿದರು.

ಕಾಂಗ್ರೆಸ್ ಈ ವಿಚಾರದಲ್ಲಿ ವಿರೋಧ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯವನ್ನು ನೀಡಲಿಲ್ಲ. ಆದರೆ ಬಿಜೆಪಿ ಆಡಳಿತವು ಕೊಠಡಿ, ಶಿಕ್ಷಕರ ಸಹಿತ ವಿವಿಧ ನೆಲೆಯಲ್ಲಿ ಮೂಲಭೂತ ಸೌಕರ್ಯ ಮಾಡಿದೆ. ಆದರೆ, ಈಗ ಧ್ಯಾನ ಮಾಡಬೇಡಿ ಎಂದು ಕಾಂಗ್ರೆಸ್‌ನವರು ನಮಗೆ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಆರಂಭ ಮಾಡುವ ಕುರಿತು ಒಂದು ವಿಚಾರ ಸಂಕಿರಣವನ್ನು ಡಿ.15ರೊಳಗೆ ನಡೆಸಲು ತೀರ್ಮಾನಿಸಲಾಗಿದೆ. ಶಿಕ್ಷಣ ತಜ್ಞರ, ಸನ್ಯಾಸಿಗಳನ್ನು ಸೇರಿಸಿ ಅವರ ಅಭಿಪ್ರಾಯ ಪಡೆದು ತಿಂಗಳಲ್ಲಿ ಒಂದು ದಿನ ಬ್ಯಾಗ್ ರಹಿತ ದಿನವನ್ನು ಆಚರಿಸುವ ಸಮಯದಲ್ಲಿ ನೈತಿಕ ಶಿಕ್ಷಣವನ್ನು ಬೋಧಿಸುವ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ. ಬ್ಯಾಗ್‌ ರಹಿತ ದಿನ ಈಗಾಗಲೇ ಆರಂಭವಾಗಿದ್ದು, ಆಗ ಧ್ಯಾನ, ಯೋಗ ಜತೆಯಲ್ಲಿ  ನೈತಿಕ ಶಿಕ್ಷಣ ವಿಚಾರಗಳನ್ನು ನೀಡುವ ಕೆಲಸ ಮಾಡಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ವಿವೇಕಾನಂದರ ಹೆಸರಿನಲ್ಲಿ ವಿವೇಕ ಕೊಠಡಿಗಳ ನಿರ್ಮಾಣದ ಸಮಯದಲ್ಲಿ ಅರ್ಕಿಟೆಕ್ಟ್ ಎಂಜಿನಿಯರ್ ಅವರು ಕೇಸರಿ ಬಣ್ಣ ಧ್ಯಾನದ ಸಂಕೇತ, ತ್ಯಾಗ ಮತ್ತು ಸೂರ್ಯನ ಬೆಳಕಿನ ಬಣ್ಣ ಎಂಬ ರೀತಿಯಲ್ಲಿ ತಿಳಿಸಿದ್ದರು. ಹೀಗಾಗಿ ಕೇಸರಿ ಬಣ್ಣದ ಬಗ್ಗೆ ಮಾತುಕತೆ ನಡೆದಿತ್ತು. ಅಂತಿಮವಾಗಿ ಆರ್ಕಿಟೆಕ್ಟ್ ಅವರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ನಡೆಸಲಾಗುವುದು ಎಂದು ಹೇಳಿದರು.

20 ಸಾವಿರ ಅಂಗನವಾಡಿಗಳಲ್ಲಿ ಎನ್‌ಇಪಿ

ರಾಜ್ಯದ 20 ಸಾವಿರ ಅಂಗನವಾಡಿ ಹಾಗೂ 6 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಡಿ.25ರಂದು ಎನ್‌ಇಪಿಯನ್ನು ಜಾರಿಗೆ ತರುವ ಕುರಿತು ಈಗಾಗಲೇ ಚಿಂತನೆ ಮಾಡಲಾಗಿದೆ. ಒಂದನೇ, ಎರಡನೇ ತರಗತಿಗೆ ಎರಡೆರಡು ಪುಸ್ತಕ ಇರುತ್ತದೆ. ಒಂದು ಸಂಖ್ಯಾ ಶಾಸ್ತ್ರ ವಿಚಾರಗಳನ್ನು ತಿಳಿಸಿದರೆ ಮತ್ತೊಂದು ಅಕ್ಷರ ಜ್ಞಾನವನ್ನು ನೀಡಲಿದೆ. ರಾಜ್ಯದ ಶಾಲೆಗಳಲ್ಲಿ ಚಿಲಿಪಿಲಿ, ನಲಿಕಲಿಯ ಮೂಲಕ ಎನ್‌ಇಪಿಯ ಆಶಯಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿಗಳ ಶಿಕ್ಷಕರಿಗೂ ಎನ್‌ಇಪಿಯ ತರಬೇತಿಯನ್ನು ನೀಡಲಾಗಿದೆ ಎಂದು ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದರು.

Similar News