ಸುರತ್ಕಲ್‌ ಟೋಲ್‌ಗೇಟ್‌ ಸಿಬ್ಬಂದಿ - ಬಸ್‌ ಚಾಲಕರ ನಡುವೆ ಮಾತಿನ ಚಕಮಕಿ

Update: 2022-11-20 16:47 GMT

ಸುರತ್ಕಲ್‌, ನ.20: ಶಾಲಾ ಬಸ್‌ ಸಿಬ್ಬಂದಿ ಹಾಗೂ ಸುರತ್ಕಲ್‌ ಟೋಲ್‌ಗೇಟ್‌ ಸಿಬ್ಬಂದಿಯ ನಡುವೆ ಸುಂಕ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದ ಘಟನೆ ಸುರತ್ಕಲ್‌ ಟೋಲ್‌ ಗೇಟ್‌ ಬಳಿ ರವಿವಾರ ವರದಿಯಾಗಿದೆ.

ಶ್ರೀದೇವಿ ವಿದ್ಯಾಸಂಸ್ಥೆಯ ಸುಮಾರು 6 ಬಸ್‌ಗಳು ಶಾಲೆಯೊಂದರ ವಿದ್ಯಾರ್ಥಿಗಳ ಪ್ರವಾಸ ಹೊರಟಿತ್ತು. ಈ ಬಸ್‌ಗಳು ಸುರತ್ಕಲ್‌ ಟೋಲ್‌ಗೇಟ್‌ ಮುಂಭಾಗ ಬರುತ್ತಿದ್ದಂತೆಯೇ ಟೋಲ್‌ ಸಿಬ್ಬಂದಿ ಟೋಲ್‌ ಸುಂಕ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಬಸ್‌ ಸಿಬ್ಬಂದಿ "ಇದು ಅಕ್ರಮ ಟೋಲ್‌ಗೇಟ್‌. ಇದರ ತೆರವಿಗೆ ಕೇಂದ್ರ ಸರಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಹೀಗಿರುವಾಗ ಸುಂಕ ಪಡೆಯುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಸುಂಕ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಟೋಲ್‌ ಸಿಬ್ಬಂದಿ ಮತ್ತು ಬಸ್‌ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಹೊಡೆದಾಟದವರೆಗೂ ತಲುಪಿತ್ತು ಎಂದು ತಿಳಿದುಬಂದಿದೆ.

ಟೋಲ್‌ಗೇಟ್‌ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿರುವ ಧರಣಿಯ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಸ್ಥಳಕ್ಕೆ ಬಂದರೂ ಬಸ್‌ ಸಿಬ್ಬಂದಿ ಟೋಲ್‌ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಸುಮಾರು 6 ಬಸ್‌ಗಳು ಏಕಕಾಲದಲ್ಲಿ ಟೋಲ್‌ ಗೇಟ್‌ ಬಳಿ ಬಂದಿದ್ದ ಕಾರಣ ಸುಮಾರು ಅರ್ಧ ಗಂಟೆಗಳ ಕಾಲ ಟೋಲ್‌ಗೇಟ್‌ ಬಳಿ ಮಂಗಳೂರು ಕಡೆ ತೆರಳುತ್ತಿದ್ದ ವಾಹನಗಳು ಜಾಮ್‌ ಆಗಿದ್ದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಾಲು ಮುಕ್ಕವರೆಗೆ ತಲುಪುವಷ್ಟರಲ್ಲಿ ಯಾರದೋ ಕರೆ ಬಂದು ಬಳಿಕ ಬಸ್‌ಗಳನ್ನು ಬಿಡಲಾಯಿತು ಎಂದು ತಿಳಿದು ಬಂದಿದೆ.

Similar News