ತಾಂತ್ರಿಕ ದೋಷ: ಸಂಚಾರ ಆರಂಭಿಸಿದ 10 ನಿಮಿಷಗಳಲ್ಲೇ ಮುಂಬೈಗೆ ಹಿಂದಿರುಗಿದ ಏರ್ ಇಂಡಿಯಾ ವಿಮಾನ

Update: 2022-11-20 17:56 GMT

ಮುಂಬೈ, ನ. 20:  ಕೋಝಿಕ್ಕೋಡ್‌ಗೆ ತೆರಳುತ್ತಿದ್ದ 114 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ (ಎಐ 581) ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸಂಚಾರ ಆರಂಭಿಸಿದ ಹತ್ತೇ ನಿಮಿಷಗಳಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ.

‘‘ರವಿವಾರ ಮುಂಬೈಯಿಂದ ಕೋಝಿಕೋಡ್‌ಗೆ ತೆರಳುತ್ತಿದ್ದ ಎಐ 581 ವಿಮಾನದಲ್ಲಿ ಬೆಳಗ್ಗೆ 6.13ಕ್ಕೆ ತಾಂತ್ರಿಕ ದೋಷ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಅದು  ಬೆಳಗ್ಗೆ 6.25ಕ್ಕೆ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು. ಅನಂತರ ಎಂಜಿನಿಯರ್‌ಗಳು ತಪಾಸಣೆ ನಡೆಸಿ ವಿಮಾನವನ್ನು ಹಾರಾಟಕ್ಕೆ ಸಿದ್ಧಗೊಳಿಸಿದರು’’ ಎಂದು ಏರ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.

‘‘ಇದರಿಂದ ವಿಮಾನ ಸಂಚಾರ 3 ಗಂಟೆ ವಿಳಂಬವಾಯಿತು.  ಏರ್ ಇಂಡಿಯಾ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಆದುದರಿಂದ ವಿಮಾನ ಮತ್ತೆ ಕಾರ್ಯಾಚರಣೆ ಆರಂಭಿಸುವ ಮುನ್ನ ಕೂಲಕಂಷವಾಗಿ ತಪಾಸಣೆ ನಡೆಸಲಾಯಿತು’’ ಎಂದು ಅವರು ತಿಳಿಸಿದ್ದಾರೆ.

Similar News