ಅತಿಗಣ್ಯರ ಭೇಟಿ; ಜನಸಾಮಾನ್ಯರಿಗೆ ತೊಂದರೆ ಬೇಡ

Update: 2022-11-22 04:26 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಬೃಹತ್ ಸಭೆ, ಸಮಾವೇಶಗಳ ಜಾತ್ರೆ ಆರಂಭವಾಗಿದೆ. ಈವರೆಗೆ ಕಣ್ಣೆತ್ತಿಯೂ ನೋಡದ ದಲಿತ, ಹಿಂದುಳಿದ ಸಮುದಾಯಗಳ ಬಗ್ಗೆ ದಿಢೀರ್ ಅನುಕಂಪ ಮೂಡುತ್ತಿದೆ.ಇದಕ್ಕೆ ಅಭ್ಯಂತರವಿಲ್ಲ. ಆದರೆ ಈ ಸಭೆ, ಸಮಾರಂಭಗಳಿಗೆ ಪ್ರಧಾನಮಂತ್ರಿ ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡಿದಾಗ ಜನಸಾಮಾನ್ಯರ ಪರದಾಟದ ಬಗ್ಗೆ ಅಧಿಕಾರದಲ್ಲಿರುವವರು ಯೋಚಿಸಬೇಕಾಗಿದೆ. ಇತ್ತೀಚೆಗೆ ಕೆಂಪೇಗೌಡರ ಪ್ರತಿಮೆಯ ಅನಾವರಣಕ್ಕೆ ಪ್ರಧಾನಿ ಬಂದಾಗ ಜನಸಾಮಾನ್ಯರಿಗೆ ಇದರ ಅನುಭವವಾಯಿತು. ಪ್ರಧಾನಿ ಮಾತ್ರವಲ್ಲ ಯಾರೇ ಅತಿ ಗಣ್ಯರು ಬಂದಾಗ ಎಚ್.ಎ.ಎಲ್. ವಿಮಾನ ನಿಲ್ದಾಣ ಹಾಗೂ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಅವರು ಸಂಚರಿಸುವ ಮಾರ್ಗದಲ್ಲಿ ಜನಸಾಮಾನ್ಯರ ಓಡಾಟಕ್ಕೆ ತೊಂದರೆ ಯಾಗುತ್ತದೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಾಗ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು. ಆಗ ಮೆಜೆಸ್ಟಿಕ್ ಸೇರಿದಂತೆ ಕೆಲವೆಡೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರವನ್ನು ಸುಮಾರು ನಾಲ್ಕು ತಾಸುಗಳ ಕಾಲ ಸ್ಥಗಿತ ಗೊಳಿಸಲಾಗಿತ್ತು.ಸಾರಿಗೆ ಸಂಸ್ಥೆಯ ಸುಮಾರು 1,600 ಬಸ್‌ಗಳನ್ನು ಸಮಾವೇಶಕ್ಕೆ ಜನರನ್ನು ಸೇರಿಸಲು ಬಳಸಿಕೊಳ್ಳಲಾಗಿತ್ತು. ಇದರಿಂದಾಗಿ ಸಮಾವೇಶಕ್ಕೆ ಜನರೇನೋ ಸಹಸ್ರಾರು ಸಂಖ್ಯೆಯಲ್ಲಿ ಬಂದು ಸೇರಿದರು. ಆದರೆ ತಮ್ಮ ನಿತ್ಯದ ಓಡಾಟಕ್ಕೆ ಸರಕಾರಿ ಸಾರಿಗೆ ವಾಹನಗಳನ್ನೇ ಅವಲಂಬಿಸಿದ ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಯಿತು.
ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಲಕ್ಷಾಂತರ ಜನಸಾಮಾನ್ಯರ ಜೀವನ ನಿರ್ವಹಣೆಯ ನಗರವಾಗಿದೆ. ಇಲ್ಲಿ ಸಂಚಾರ ಸೇರಿದಂತೆ ಯಾವುದೇ ವ್ಯವಸ್ಥೆಯಲ್ಲಿ ವ್ಯತ್ಯಯವಾದರೆ ಇದರ ಬಿಸಿ ನೇರ ಜನರಿಗೆ ತಟ್ಟುತ್ತದೆ. ನಿತ್ಯದ ದುಡಿಮೆ ಕೈತಪ್ಪಿ ಇಡೀ ಕುಟುಂಬ ಯಾತನೆ ಪಡಬೇಕಾಗುತ್ತದೆ. ಸಭೆ, ಸಮಾವೇಶ ನಡೆಸುವವರು ಯಾವುದೇ ಪಕ್ಷ ಇಲ್ಲವೇ ಸಂಘಟನೆಗಳಿಗೆ ಸೇರಿರಲಿ ಜನಸಾಮಾನ್ಯರ ತೊಂದರೆಗಳ ಬಗ್ಗೆ ಯೋಚಿಸಬೇಕಾಗಿದೆ.

ಇಂತಹ ಸಮಾವೇಶಗಳು ನಡೆಯುವ ಜಾಗದಲ್ಲಿ ಕೆಲವರ ವ್ಯಾಪಾರ, ವಹಿವಾಟುಗಳಿಗೆ ಅನುಕೂಲ ಆಗಬಹುದು. ಆದರೆ ತೊಂದರೆ ಅನುಭವಿಸುವವರೇ ಜಾಸ್ತಿ. ಕರ್ನಾಟಕದ ಬೇರೆ, ಬೇರೆ ಭಾಗಗಳಿಂದ ಹಾಗೂ ಬೆಂಗಳೂರಿನ ಇತರ ಕಡೆಗಳಿಂದ ಸಭೆಗಳಿಗೆ ಜನರನ್ನು ಕರೆತರುವ ಸಂಘಟಕರಿಗೆ ಸೇರಿದ ಜನರನ್ನು ಅವರವರ ತಾಣಗಳಿಗೆ ವಾಪಸ್ ಕಳಿಸುವ ಬಗ್ಗೆ ಅಷ್ಟು ಆಸಕ್ತಿ ಇರುವುದಿಲ್ಲ. ಹೀಗಾಗಿ ಸಭೆಗಳಿಗೆ ಬಂದವರೂ ತೊಂದರೆ ಅನುಭವಿಸುತ್ತಾರೆ. ಇತ್ತೀಚೆಗೆ ಸಮಾವೇಶವೊಂದಕ್ಕೆ ಕರೆ ತರಲು ಭರವಸೆ ನೀಡಿದಂತೆ ತಲಾ 500 ರೂ. ಕೊಡಲಿಲ್ಲ ಎಂದು ಕರೆ ತಂದವರು ಪ್ರತಿಭಟಿಸಿದ ಘಟನೆ ವರದಿಯಾಗಿತ್ತು.

ರಾಷ್ಟ್ರಪತಿಯಾಗಲಿ, ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಅಥವಾ ಯಾರೇ ಅತಿ ಗಣ್ಯರಾಗಲಿ ಬೆಂಗಳೂರು ಮಾತ್ರವಲ್ಲ ಯಾವುದೇ ನಗರಕ್ಕೆ ಬಂದರೂ ಅವರು ಬಂದಾಗ ಹದಗೆಟ್ಟ ರಸ್ತೆಗಳು ರಿಪೇರಿಯನ್ನು ಕಾಣುತ್ತವೆ.ಅದೂ ಅವರು ಸಂಚರಿಸುವ ಮಾರ್ಗದಲ್ಲಿ ಮಾತ್ರ ತರಾತುರಿಯಲ್ಲಿ ರಸ್ತೆ ರಿಪೇರಿ ಕಾರ್ಯ ನಡೆಯುತ್ತದೆ. ಇದರಲ್ಲಿ ನಾಯಕರನ್ನು ಮೆಚ್ಚಿಸುವ ಮನೋಭಾವ ಇರುತ್ತದೆಯೇ ಹೊರತು ಯಾವುದೇ ಸುಧಾರಣೆ ಬಗ್ಗೆ ಕನಿಷ್ಠ ಕಾಳಜಿಯೂ ಇರುವುದಿಲ್ಲ. ಈ ರಿಪೇರಿ ಕಾರ್ಯವೂ ತಾತ್ಕಾಲಿಕ ವಾಗಿರುತ್ತದೆ. ಅತಿ ಗಣ್ಯರು ಬಂದು ಹೋದ ಒಂದೆರಡು ದಿನಗಳಲ್ಲಿ ರಸ್ತೆಗಳು ಹದಗೆಟ್ಟು ಗಬ್ಬೆದ್ದ ಉದಾಹರಣೆಗಳು ಸಾಕಷ್ಟಿವೆ.
ಯಾರೇ ಅತಿ ಗಣ್ಯರು ರಾಜ್ಯದ ಯಾವುದೇ ಊರಿಗೆ ಬರಲಿ ಯಾವುದೇ ಕಾರಣಕ್ಕೂ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅವರು ಸಂಚರಿಸುವ ಮಾರ್ಗದಲ್ಲಿ ಅನವಶ್ಯಕವಾಗಿ ವಾಹನ ಸಂಚಾರವನ್ನು, ಜನರ ಓಡಾಟವನ್ನು ನಿರ್ಬಂಧಿಸುವುದು ಸರಿಯಲ್ಲ. ಗಣ್ಯರ ಭದ್ರತಾ ವ್ಯವಸ್ಥೆಯ ಬಗ್ಗೆ ಆಕ್ಷೇಪವಿಲ್ಲ. ಆದರೆ ಭದ್ರತೆಯ ಹೆಸರಿನಲ್ಲಿ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುವುದು ಸರಕಾರದಲ್ಲಿ ಇರುವವರಿಗೆ ಶೋಭೆ ತರುವುದಿಲ್ಲ.

ಅತಿ ಗಣ್ಯರು ಭಾಗವಹಿಸುವ ಯಾವುದೇ ಸಭೆ, ಸಮಾವೇಶಗಳಲ್ಲಿ ಸಹಸ್ರಾರು ಜನ ಒಂದೇ ಕಡೆ ಸೇರುವುದರಿಂದ, ಆ ಪ್ರದೇಶದ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಆದ್ಯತೆ ನೀಡಬೇಕು. ಇಂತಹ ಬಹುತೇಕ ಕಡೆ ತಿಂಡಿ ಪದಾರ್ಥಗಳನ್ನು ತಿಂದು ಎಲ್ಲಿ ಬೇಕಾದಲ್ಲಿ ಬಿಸಾಡಿರುತ್ತಾರೆ.ಸಮಾವೇಶ ಮುಗಿದ ನಂತರ ಆ ಜಾಗವನ್ನು ಸ್ವಚ್ಛ ಮಾಡಬೇಕೆಂಬ ಕನಿಷ್ಠ ಹೊಣೆಗಾರಿಕೆ ಕೂಡ ಸಂಘಟಕರಿಗೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಹೊಲಸು, ಕಸದ ರಾಶಿ ಬಿದ್ದ ಜಾಗದಲ್ಲಿ ಶುದ್ಧೀಕರಣ ಮಾಡಲು ಸಂಘಟಕರಿಂದ ಶುಲ್ಕ ವಸೂಲಿ ಮಾಡುವುದು ಸೂಕ್ತ.

ಇಂತಹ ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಅತಿ ಗಣ್ಯರು ಕೂಡ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಕಾರ್ಯಕ್ರಮವನ್ನು ರೂಪಿಸಬೇಕೆಂದು ಸಂಬಂಧಿಸಿದ ಸಂಘಟಕರಿಗೆ ತಾಕೀತು ಮಾಡಬೇಕು. ಗಣ್ಯರು ಬಂದಾಗ ಮಾತ್ರ ತಾತ್ಕಾಲಿಕ ರಸ್ತೆ ರಿಪೇರಿ ಮಾಡದೆ ಜನಸಾಮಾನ್ಯರ ಅನುಕೂಲಕ್ಕಾಗಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಸುಸಜ್ಜಿತ ರಸ್ತೆಗಳು ನಿರ್ಮಾಣವಾಗಬೇಕು. ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟು ಹೋಗಿವೆ. ರಸ್ತೆಗಳ ನಡುವೆ ಗುಂಡಿಗಳ ಬದಲಾಗಿ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕಬೇಕಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಗುಂಡಿಗೆ ಬಿದ್ದು 17 ಮಂದಿ ಅಸು ನೀಗಿದ್ದಾರೆ. ಸರಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಪ್ರಧಾನಿ ಸೇರಿದಂತೆ ಅತಿ ಗಣ್ಯರು ಬಂದಾಗ ರಸ್ತೆ ರಿಪೇರಿ ಇತ್ಯಾದಿಗಳ ಬಗ್ಗೆ ತೋರಿಸುವ ಆಸಕ್ತಿಯನ್ನು, ಶಾಶ್ವತವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ತೋರಿಸಲಿ.

Similar News