ಖರ್ಗೆ ಟೀಂನ ಸ್ಪೆಷಲ್ ಫೋರ್: ಪ್ರಬಲರ ಹುಬ್ಬೇರಿಸಲಿದೆಯೆ ಈ ನೇಮಕ?

Update: 2022-11-22 05:32 GMT

ನಾಸಿರ್ ಮತ್ತು ಸಪ್ಪಲ್ ಎಐಸಿಸಿ ಸಂಘಟನೆ ಮತ್ತು ಆಡಳಿತದ ವಿಷಯಗಳಲ್ಲಿ ಖರ್ಗೆಯವರ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಝಾ ಮತ್ತು ಪಂಧಿ ಅವರನ್ನು ಕ್ರಮವಾಗಿ ಮುಖ್ಯವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರಬಲವಾಗಿ ಬಿಂಬಿಸುವ ಉದ್ದೇಶದಿಂದ ಆರಿಸಲಾಗಿದೆ. ಈ ನಾಲ್ವರ ಆಯ್ಕೆ ಕಾಂಗ್ರೆಸ್‌ನೊಳಗೆ ಉನ್ನತ ಸ್ಥಾನದಲ್ಲಿರುವವರು ಮತ್ತು ಪ್ರಬಲರ ಅಸಮಾಧಾನಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮದೇ ಛಾಪು ಮೂಡಿಸಲು ಶುರು ಮಾಡಿದ್ದಾರೆ. ದೇಶದ ಅತಿ ಹಳೆಯ ಪಕ್ಷದ 88ನೇ ಅಧ್ಯಕ್ಷರಾಗಿರುವ ಖರ್ಗೆ 2023ರ ಮೊದಲಾರ್ಧದಲ್ಲಿ ನಡೆಯುವ ಎಐಸಿಸಿ ಅಧಿವೇಶನ ಮತ್ತದರ ಬೆನ್ನಲ್ಲೇ ಬರುವ ನಿರ್ಣಾಯಕ ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಲ್ಲಿ ತಮ್ಮ ನಾಯಕತ್ವವನ್ನು ನಿರೂಪಿಸಿಕೊಳ್ಳುವ ಜರೂರು ಅವರಿಗಿರುವಂತೆಯೇ ಆ ವಿಶ್ವಾಸವನ್ನೂ ಅವರು ಹೊಂದಿದ್ದಾರೆ.

ಕರ್ನಾಟಕದಲ್ಲಿ ಚುನಾವಣಾ ಗೆಲುವು ಸಾಧ್ಯವಾದರೆ (ನೇರವಾಗಿ ಅದರ ಶ್ರೇಯಸ್ಸು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಹೋಗುತ್ತದಾದರೂ) ಸಹಜವಾಗಿಯೇ ಖರ್ಗೆ ಮಹತ್ವ ಹೆಚ್ಚಲಿದೆ ಮತ್ತು 'ಖರ್ಗೆ ಯುಗ'ವೆಂದು ದಾಖಲಾಗುವ ಸನ್ನಿವೇಶ ನಿರ್ಮಾಣವಾಗಲಿದೆ. 2024ರ ಮಹಾಚುನಾವಣೆಯು ನಿರ್ಣಾಯಕವಾಗಲಿದೆ. ಅದರ ಫಲಿತಾಂಶವೇ ಪಕ್ಷದಲ್ಲಿ ಖರ್ಗೆ ನಾಯಕತ್ವದ ಏರಿಳಿತವನ್ನು ನಿರ್ಧರಿಸಲಿದೆ. ಕಾಂಗ್ರೆಸ್ ವಿಫಲ ನಾಯಕತ್ವವನ್ನು ತಿರಸ್ಕರಿಸುತ್ತದೆ. ಅದರಲ್ಲೂ ಖರ್ಗೆ ಗಾಂಧಿ ಕುಟುಂಬದವರಲ್ಲದ ಹಿನ್ನೆಲೆಯು ಅವರು ಒಂದು ವೇಳೆ ಸೋತರೆ ಬಹುಬೇಗ ಅವರನ್ನು ಹಿಂದಕ್ಕೆ ಸರಿಸಲಿದೆ.

ಹೀಗೆ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿಕೊಳ್ಳಬೇಕಾದ ಸವಾಲು ಎದುರಿಗಿಟ್ಟುಕೊಂಡಿರುವ ಖರ್ಗೆಯವರು ತಮ್ಮ ಸಮನ್ವಯಕಾರರನ್ನಾಗಿ ನಾಲ್ವರನ್ನು ನೇಮಿಸಿದ್ದಾರೆ. ಇತರ ಸಮಕಾಲೀನ ಮತ್ತು ಅನುಭವಿ ನಾಯಕರ ನಡುವೆ ತಮ್ಮ ಪ್ರಾಬಲ್ಯ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಖರ್ಗೆಯವರು ಪಿ.ವಿ. ನರಸಿಂಹರಾವ್ ಮತ್ತು ಸೀತಾರಾಂ ಕೇಸರಿಯವರಿಗಿಂತಲೂ ತುಸು ಹೆಚ್ಚೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಿರುವಂತೆ ಕಾಣಿಸುತ್ತದೆ.

ಖರ್ಗೆಯವರು ಸಂಯೋಜಕರನ್ನಾಗಿ ಯಾರನ್ನು ನೇಮಿಸಿದ್ದಾರೆ ಎಂಬುದು ಕುತೂಹಲಕಾರಿ. ಸೈಯದ್ ನಾಸಿರ್ ಹುಸೇನ್, ಗುರುದೀಪ್ ಸಿಂಗ್ ಸಪ್ಪಲ್, ಪ್ರಣವ್ ಝಾ ಮತ್ತು ಗೌರವ್ ಪಂಧಿ ಈ ನಾಲ್ಕೂ ಹೆಸರುಗಳು ಬೇರೆ ಬೇರೆ ಕಾರಣದಿಂದ ಮಹತ್ವ ಪಡೆದಿವೆ. ನಾಸಿರ್ ಮತ್ತು ಸಪ್ಪಲ್ ಎಐಸಿಸಿ ಸಂಘಟನೆ ಮತ್ತು ಆಡಳಿತದ ವಿಷಯಗಳಲ್ಲಿ ಖರ್ಗೆಯವರ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಝಾ ಮತ್ತು ಪಂಧಿ ಅವರನ್ನು ಕ್ರಮವಾಗಿ ಮುಖ್ಯವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರಬಲವಾಗಿ ಬಿಂಬಿಸುವ ಉದ್ದೇಶದಿಂದ ಆರಿಸಲಾಗಿದೆ. ಈ ನಾಲ್ವರ ಆಯ್ಕೆ ಕಾಂಗ್ರೆಸ್‌ನೊಳಗೆ ಉನ್ನತ ಸ್ಥಾನದಲ್ಲಿರುವವರು ಮತ್ತು ಪ್ರಬಲರ ಅಸಮಾಧಾನಕ್ಕೆ ಕಾರಣವಾದರೂ ಅಚ್ಚರಿಯಿಲ್ಲ.
ಖರ್ಗೆ ದೃಷ್ಟಿಯಲ್ಲಿ ಈ ನಾಲ್ವರು ಹೇಗೆ ಮಹತ್ವದವರಾದರು ಎಂಬುದನ್ನು ಗಮನಿಸಬೇಕು.

ಸೈಯದ್ ನಾಸಿರ್ ಹುಸೇನ್

 ಇವರು ಬಳ್ಳಾರಿ ಭಾಗದವರಾದ ಕಾರಣ ಖರ್ಗೆ ಅವರಿಗೆ ಆಪ್ತರು.
ಬಳ್ಳಾರಿ ಬೆಲ್ಟ್‌ನಲ್ಲಿ ಮುಸ್ಲಿಮ್ ಮುಖವನ್ನು ಬೆಳೆಸಲು ಖರ್ಗೆಯವರ ಕೋಟಾದಿಂದ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಯಿತು. ಖರ್ಗೆ ಅವರನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದಾಗ ನಾಸಿರ್ ಉಪ ಸಚೇತಕರಾಗಿದ್ದರು. ರೈತರ ಮಸೂದೆಗಳು ಮತ್ತು ಪೆಗಾಸಸ್ ವಿಷಯಗಳ ಕುರಿತು ರಾಜ್ಯಸಭೆಯಲ್ಲಿ ಆಂದೋಲನದ ಆಕ್ರಮಣಕಾರಿ ದನಿಯಾಗಿ ಬೆಳಕಿಗೆ ಬಂದಿದ್ದವರು ಸೈಯದ್ ನಾಸಿರ್ ಹುಸೇನ್. ರಾಜ್ಯಸಭಾ ಪಕ್ಷದ ಸಚೇತಕರ ತಂಡದಲ್ಲಿ ಅವರು ಖರ್ಗೆಯವರ ಕಡೆಯವರಾಗಿದ್ದರು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖರ್ಗೆ ಅವರಿಗೆ ಸೈಯದ್ ನಾಸಿರ್ ಹುಸೇನ್ ಚುನಾವಣಾ ವ್ಯವಸ್ಥಾಪಕರಾಗಿದ್ದರು. ಚುನಾವಣಾ ಪ್ರಚಾರಕ್ಕಾಗಿ ಖರ್ಗೆಯವರೊಂದಿಗೆ ಎಲ್ಲ ರಾಜ್ಯಗಳಿಗೆ ತೆರಳಿದ್ದರು. ಪ್ರಚಾರಕ್ಕಾಗಿ ಶಹಜಹಾನ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ವಾರ್ ರೂಮ್ ಸ್ಥಾಪಿಸಿದ್ದರು. ಟಿವಿ ಚರ್ಚೆಗಳಲ್ಲಿ ಸೈಯದ್ ಹೆಚ್ಚು ಪರಿಚಿತ ಮುಖ. ಕಾಂಗ್ರೆಸ್ ವಿಚಾರವನ್ನು ವರದಿ ಮಾಡುವ ದಿಲ್ಲಿ ಪತ್ರಕರ್ತರೊಂದಿಗೆ ಉತ್ತಮ ಸಂಪರ್ಕವನ್ನೂ ಸೈಯದ್ ಹೊಂದಿದ್ದಾರೆ.

ಗುರುದೀಪ್ ಸಿಂಗ್ ಸಪ್ಪಲ್

 ಇವರು ರಾಜ್ಯಸಭೆಯಲ್ಲಿ ಖರ್ಗೆ ಪ್ರತಿಪಕ್ಷದ ನಾಯಕರಾದಾಗ ಜೊತೆಗಿದ್ದವರು. ಸಪ್ಪಲ್ ಅವರು ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರಿಗೆ ಜಂಟಿ ಕಾರ್ಯದರ್ಶಿ ಶ್ರೇಣಿಯ OSDಯಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದವರು. ರಾಜ್ಯಸಭೆಯ ಆಡಳಿತ ಮತ್ತು ಅಧ್ಯಕ್ಷರ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ನಿರ್ವಹಣೆಯನ್ನು ನಿರ್ವಹಿಸಿದವರು. RSTVಯ ಸ್ಥಾಪಕ ಮತ್ತು ಸಿಇಒ ಆಗಿ ಉತ್ತಮ ಕೆಲಸ ಮಾಡಿದ ಖ್ಯಾತಿಯೂ ಅವರದಾಗಿದೆ. 2009ರಲ್ಲಿ ಗುರುದ್ವಾರ ರಾಕಬ್‌ಗುಂಜ್ ರಸ್ತೆಯ 15ರಲ್ಲಿ ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಕೆಲಸ ಮಾಡಿದಾಗಿನಿಂದಲೂ ಅವರಿಗೆ ಪಕ್ಷದೊಳಗೆ ಒಳ್ಳೆಯ ಹೆಸರಿದೆ. ಕಳೆದ ಎರಡು ವರ್ಷಗಳಲ್ಲಿ, ಅವರ ಸ್ಥಾನಮಾನಗಳಲ್ಲಿ ಸತತ ಬೆಳವಣಿಗೆ ಕಂಡಿದೆ. ಕಳೆದ ವರ್ಷ ಟಿವಿ ಚರ್ಚೆಗಳಲ್ಲಿ ಹೆಚ್ಚು ಕಾಣಿಸಿಕೊಂಡರು ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ಧ್ವನಿಯಾದರು.

ಡೇಟಾ ಮತ್ತು ತರ್ಕದೊಂದಿಗೆ ದೃಢವಾಗಿ ಮಾತನಾಡಬಲ್ಲ ಪ್ರೌಢಿಮೆ ಅವರದು. ಅಸಂಬದ್ಧ ಚರ್ಚೆಯಿಂದ ಸದಾ ದೂರ. ಕಳೆದ ಎರಡು ವರ್ಷಗಳಲ್ಲಿ, ಅವರನ್ನು ಸೋನಿಯಾ ಗಾಂಧಿಯವರು ಕೋವಿಡ್ ಪರಿಹಾರ ಕಾರ್ಯಕ್ಕಾಗಿ ನೇಮಿಸಿದ್ದಾಗ ಅಭಿಯಾನಗಳನ್ನು ಆಯೋಜಿಸಲು ನಿಯಂತ್ರಣ ಕೊಠಡಿಯನ್ನು ನಿರ್ವಹಿಸಿದರು, 'ಭಾರತ್ ಜೋಡೊ' ಯಾತ್ರೆಗಾಗಿ ನಾಗರಿಕ ಸಮಾಜವನ್ನು ಸಂಘಟಿಸಲು ಯೋಗೇಂದ್ರ ಯಾದವ್ ಅವರೊಂದಿಗೆ ಸೇರಿದ್ದರು. ಉದಯಪುರ ಚಿಂತನಾ ಶಿಬಿರದಲ್ಲಿ ಅವರದು ಪ್ರಮುಖ ಪಾತ್ರವಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಗುಂಪನ್ನು ಸಂಘಟಿಸಿದರು. ಕಳೆದ ವರ್ಷದ ಅಸ್ಸಾಂ, ಕೇರಳ, ಪುದುಚೇರಿ ಮತ್ತು ಬಂಗಾಳದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸಾಧನೆಯನ್ನು ವಿಶ್ಲೇಷಿಸಲು ಅಶೋಕ್ ಚವಾಣ್ ಸಮಿತಿಯನ್ನು ಸಪ್ಪಲ್ ನಿರ್ವಹಿಸಿದ್ದರು. ಪಕ್ಷದ ಬೌದ್ಧಿಕ ಧ್ವನಿಯಾಗಿ ತಮ್ಮದೇ ಸ್ಥಾನವನ್ನು ಅವರು ಸ್ಥಾಪಿಸಿಕೊಂಡಿದ್ದಾರೆ. ಸಪ್ಪಲ್ ಅವರ ಆಡಳಿತ ಕೌಶಲ್ಯ, ಉಚ್ಚಾರಣೆ ಮತ್ತು ಭಾಷಣ ಬರವಣಿಗೆ, ವಾರ್ ರೂಮ್‌ನಲ್ಲಿ ಚುನಾವಣಾ ನಿರ್ವಹಣೆ ದಾಖಲೆ ಅಲ್ಲದೆ ಗಾಂಧಿ ಕುಟುಂಬ, ಹಿರಿಯ ನಾಯಕರು ಮತ್ತು ಪ್ರಮುಖ ವಿರೋಧ ಪಕ್ಷದ ನಾಯಕರೊಂದಿಗಿನ ಉತ್ತಮ ಸಂಬಂಧವು ಅವರ ಆಯ್ಕೆಗೆ ಕಾರಣವಾಗಿದೆ.

ಪ್ರಣವ್ ಝಾ 

 ಇವರನ್ನು ಮೊದಲು ಮಾಧ್ಯಮ ನಿರ್ವಹಣೆಗೆ ಪರಿಚಯಿಸಿದವರು ರಣದೀಪ್ ಸುರ್ಜೆವಾಲಾ. ರಣದೀಪ್ ಅಧ್ಯಕ್ಷರಾಗಿದ್ದಾಗ ಪ್ರಣವ್ ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿದ್ದರು. ಜೈರಾಮ್ ರಮೇಶ್ ಅಧಿಕಾರ ವಹಿಸಿಕೊಂಡಾಗಿನಿಂದ ಹಿಂದೆ ಸರಿದಿದ್ದರು. ಹಾಗಾಗಿ, ಖರ್ಗೆಯವರ ತವರು ರಾಜ್ಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ರಣದೀಪ್, ಪ್ರಣವ್ ಝಾ ಅವರನ್ನು ಖರ್ಗೆ ತಂಡದಲ್ಲಿ ಇರಿಸಲು ಕಾರಣರಾಗಿದ್ದಾರೆ ಎನ್ನಲಾಗಿದೆ.

ಗೌರವ್ ಪಂಧಿ

 ಮತ್ತೋರ್ವ ಸಂಯೋಜಕರಾಗಿರುವ ಗೌರವ್ ಪಂಧಿ ಸಾಮಾಜಿಕ ಮಾಧ್ಯಮ ನಿರ್ವಹಣೆಗಾಗಿ ನೇಮಕಗೊಂಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಕರ್ನಾಟಕದ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿರುವುದು, ಪಂಧಿ ಅವರನ್ನು ಖರ್ಗೆ ಹತ್ತಿರಕ್ಕೆ ತಂದಿರಬಹುದು. ಪಂಜಾಬ್‌ನಲ್ಲಿ ಕಾಂಗ್ರೆಸ್ ಪ್ರಚಾರದ ಸಮಯದಲ್ಲಿ ವಿವಾದಕ್ಕೊಳಗಾಗಿದ್ದ ಪಂಧಿ ನೇಮಕವು ಹಲವರ ಹುಬ್ಬೇರುವುದಕ್ಕೂ ಕಾರಣವಾಗಿದೆ.

 (ಕೃಪೆ: indiatoday)

Similar News