×
Ad

ಶಾಲೆಗಳಲ್ಲಿ ಸಂವಿಧಾನ ದಿನವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಂತೆ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ. ಒತ್ತಾಯ

Update: 2022-11-22 20:15 IST

ಬೆಂಗಳೂರು, ನ.22: ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಲ್ಲಿ ನ.26ರಂದು ಸಂವಿಧಾನ ದಿನವನ್ನು ಆಚಾರಣೆ ಮಾಡಲಾಗುತ್ತಿದ್ದು, ಸಂವಿಧಾನದ ಪ್ರಸ್ತಾವನೆಯನ್ನು ಓದುವ ಜೊತೆಗೆ ಭಾರತದ ಪ್ರಜೆಯಾಗಿ ಅದನ್ನು ಪೂರ್ಣವಾಗಿ ಜಾರಿಗೊಳಿಸುವ ಪ್ರತಿಜ್ಞೆಯನ್ನು ಮಾಡಿಸಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ. ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಸಂವಿಧಾನದ ಪ್ರಸ್ತಾವನೆಯ ಜೊತೆಗೆ  ನೇರವಾಗಿ ಮಕ್ಕಳಿಗೆ ಬದುಕಿಗೆ ಸಂಬಂಧಿಸಿದ ಪರಿಚ್ಛೇಧಗಳಾದ  15, 21, 21ಎ, 24, 39ಇ ಮತ್ತು ಎಫ್, 46 ಹಾಗು 47ನ್ನು ಶಿಕ್ಷಕರು ಓದಿ ವಿವರಿಸಲು ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ತಾವೇ ಕೈಯಾರೆ ಬರೆದುಕೊಂಡ ಸಂವಿಧಾನದ ಪ್ರಸ್ತಾವನೆಯನ್ನು  ಶಾಲೆ ಮುಗಿದ ನಂತರ ಮನೆಗೆ ಕೊಂಡೊಯ್ದು, ಕುಟುಂಬದ  ಎಲ್ಲಾ ಸದಸ್ಯರ  ಮುಂದೆ ಒಮ್ಮೆ ಜೋರಾಗಿ ಓದಿ ಹೇಳುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಸಂವಿಧಾನದ ಪ್ರಸ್ತಾವನೆಗೆ ಒಂದು ಫೋಟೊ ಫ್ರೇಂ ಹಾಕಿಸಿ ಪ್ರತಿ ಮನೆಯಲ್ಲೂ ಸಂವಿಧಾನದ ಪ್ರಸ್ತಾವನೆ ಫೋಟೋವನ್ನು ತೂಗು ಹಾಕಲು ಉತ್ತೇಜಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕಾರ್ಯಕ್ರಮದ ನಂತರವೂ ಮಕ್ಕಳು ಪ್ರತಿನಿತ್ಯ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಅರ್ಥೈಸಿಕೊಳ್ಳಲು  ಅನುವಾಗುವಂತೆ ಶಾಲೆಗಳ ಎಲ್ಲಾ ತರಗತಿ ಕೋಣೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಮುದ್ರಿತವಾದ  ಹಾಗು ಎಲ್ಲರಿಗೂ ಸುಲಭವಾಗಿ ಕಾಣಬಹುದಾದ ರೀತಿಯಲ್ಲಿ  ಒಂದು ಚಾರ್ಟ್ ಮಾದರಿಯ ಸಂವಿಧಾನದ ಪ್ರಸ್ತಾವನೆಯ ಫೋಟೋವನ್ನು ಒದಗಿಸಲು ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

Similar News