ಮತಾದರರ ಮಾಹಿತಿ ಕದ್ದ ಪ್ರಕರಣ: 'ಚಿಲುಮೆ' ಆಡಳಿತಾಧಿಕಾರಿ ಸೆರೆ

Update: 2022-11-22 15:29 GMT

ಬೆಂಗಳೂರು, ನ.22: ಮತದಾರರ ಮಾಹಿತಿ ಕಳವು ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಂ.ಲೋಕೇಶ್ ಅವರನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 

ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿ ಲೋಕೇಶ್ ಪರಾರಿಯಾಗಿದ್ದ. ಈ ಸಂಬಂಧ ಸತತ ಕಾರ್ಯಾಚರಣೆ ನಡೆಸಿದ ಕೇಂದ್ರ ವಿಭಾಗದ ಪೊಲೀಸರ ತಂಡ ಮಂಗಳವಾರ ಸಂಜೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ, ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು ಎಂದು ಡಿಸಿಪಿ ಶ್ರೀನಿವಾಸ್‍ಗೌಡ ತಿಳಿಸಿದರು.

ಹಲವರಿಗಾಗಿ ಶೋಧ:  ಕೃತ್ಯಕ್ಕೆ ಸಹಕಾರಿ ಆಗುವ ರೀತಿಯಲ್ಲಿ ಮೊಬೈಲ್ ಆ್ಯ ಪ್ ಅಭಿವೃದ್ಧಿಪಡಿಸಿದ್ದ ಸಂಜೀವ್ ಶೆಟ್ಟಿ ಅವರನ್ನು ಈಗಾಗಲೇ ಬಂಧಿಸ ಲಾಗಿದೆ. ಅದೇ ರೀತಿ, ಆರೋಪಿ ದಿವ್ಯಾ, ಸಂಸ್ಥೆಯ ಜಾಲತಾಣ ಅಭಿವೃದ್ಧಿಪಡಿಸಿದ್ದು, ಆಕೆಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೂ, ಸಂಸ್ಥೆಯ ಸಂಸ್ಥಾಪಕ ರವಿಕುಮಾರ್, ಅವರ ಸಹೋದರ ಕೆಂಪೇಗೌಡ ಹಾಗೂ ಇತರರನ್ನು ಈಗಾಗಲೇ ಪೆÇಲೀಸರು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

ಆಯುಕ್ತರ ಭೇಟಿ

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಭೇಟಿ ನೀಡಿದರು.
ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ, ಚರ್ಚೆ ನಂತರ ಪೊಲೀಸ್ ಆಯುಕ್ತರು ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡಿದೆ ತೆರಳಿದರು.

Similar News