ಭೀಮಾ ಕೋರೆಗಾಂವ್ ಪ್ರಕರಣ: ಆನಂದ್ ತೇಲ್ತುಂಬ್ಡೆ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಎನ್ಐಎ ಮೇಲ್ಮನವಿ

Update: 2022-11-22 16:27 GMT

ಹೊಸದಿಲ್ಲಿ, ನ. 22:  ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಆನಂದ್ ತೇಲ್ತುಂಬ್ಡೆ(Teltumbde)ಗೆ ಬಾಂಬೆ ಉಚ್ಚ ನ್ಯಾಯಾಲಯ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಸುಪ್ರೀಂ ಕೋರ್ಟ್(Supreme Court) ಗೆ ಅರ್ಜಿ ಸಲ್ಲಿಸಿದೆ.

ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್(D.Y. Chandrachud) ಅವರ ಮುಂದೆ ಪ್ರಸ್ತಾವಿಸಲಾಯಿತು. ಅವರು ನವೆಂಬರ್ 25ರಂದು ಪ್ರಕರಣದ ವಿಚಾರಣೆ ನಡೆಸಲು ಒಪ್ಪಿಕೊಂಡರು.

ಬಾಂಬೆ ಉಚ್ಚ ನ್ಯಾಯಾಲಯ ನವೆಂಬರ್ 18ರಂದು ತೇಲ್ತುಂಬ್ಡೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಸುಪ್ರೀಂ ಕೋಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಬಾಂಬೆ ಉಚ್ಚ ನ್ಯಾಯಾಲಯ ತೇಲ್ತುಂಬ್ಡೆ ಅವರ ಜಾಮೀನಿಗೆ 1 ವಾರ ತಡೆ ನೀಡಿತ್ತು.

ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ (A.S. Gadkari)ಹಾಗೂ ಮಿಲಿಂದ್ ಜಾದವ್ (Milind Jadav)ಅವರನ್ನು ಒಳಗೊಂಡ ಬಾಂಬೆ ಉಚ್ಚ ನ್ಯಾಯಾಲಯದ ಪೀಠ ಜಾಮೀನು ಆದೇಶದಲ್ಲಿ ತೇಲ್ತುಂಬ್ಡೆ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 13 (ಕಾನೂನು ಬಾಹಿರ ಚಟುವಟಿಕೆ), 16 (ಭಯೋತ್ಪಾದನೆ ಚಟುವಟಿಕೆ) ಹಾಗೂ 16 (ಪಿತೂರಿ) ಅಡಿಯಲ್ಲಿ ಆರೋಪ ಹೊರಿಸಲಾಗಿಲ್ಲ ಎಂದು ಅಭಿಪ್ರಾಯಿಸಿತ್ತು.

ಕಾನೂನಿನ ಸೆಕ್ಷನ್ 38 (ಭಯೋತ್ಪಾದನೆ ಸಂಘಟನೆಯ ಸದಸ್ಯತ್ವ) ಹಾಗೂ 39 (ಭಯೋತ್ಪಾದನೆ ಸಂಘಟನೆಗೆ ಬೆಂಬಲ)ರ ಅಡಿಯಲ್ಲಿ ಅಪರಾಧವನ್ನು ಸಾಬೀತುಪಡಿಸಬಹುದಿತ್ತು ಎಂದು ಜಾಮೀನು ಆದೇಶದಲ್ಲಿ ಅದು ಹೇಳಿತ್ತು.

2018ರಲ್ಲಿ ಪುಣೆ ಸಮೀಪದ ಗ್ರಾಮದಲ್ಲಿ ನಡೆದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ತೇಲ್ತುಂಬ್ಡೆ ಅವರನ್ನು ಬಂಧಿಸಲಾಗಿತ್ತು.

Similar News