ರಾಣಿ ಅಬ್ಬಕ್ಕನ ಆದರ್ಶ ವಿಚಾರಗಳು ದೇಶದೆಲ್ಲೆಡೆ ಪಸರಿಸಬೇಕು: ದಿನಕರ ಉಳ್ಳಾಲ್

Update: 2022-11-22 17:16 GMT

ಕೊಣಾಜೆ: ರಾಣಿ ಅಬ್ಬಕ್ಕ ಕಿರೀಟವಿಟ್ಟು ಮೆರೆದವಳಲ್ಲ , ಎಲ್ಲಾ ಸಮುದಾಯದವರನ್ನು ಜತೆಗೂಡಿಕೊಂಡು ಅನೇಕ ವರ್ಷಗಳ ಕಾಲ ಆಡಳಿತ ನಡೆಸಿದ್ದಾಳೆ. ಇಂತಹ ದೇಶಪ್ರೇಮಿ ರಾಣಿಯ ವಿಚಾರಧಾರೆ, ಆಕೆಯ ಹೋರಾಟ, ಸೌಹಾರ್ದತೆಯ ವಿಚಾರಗಳು ದೇಶದೆಲ್ಲೆಡೆ ಪಸರಿಸುವ ಕೆಲಸ ಮಾಡಬೇಕಿದೆ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ  ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಹೇಳಿದರು.

ಅವರು ನಿಟ್ಟೆ ಸಮೂಹ ಸಂವಹನ ವಿಭಾಗ,  ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ  ಸಮಿತಿ ಸಂಯುಕ್ತಾಶ್ರಯ ದಲ್ಲಿ  ದೇರಳಕಟ್ಟೆಯ ನಿಟ್ಟೆ  ಪರಿಗಣಿತ ವಿ.ವಿಯ ಪಾನೀರು ಕ್ಯಾಂಪಸ್ ನಲ್ಲಿ  ಜರಗಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರಗಳ ಕುರಿತ  ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜಿ ಶಾಸಕ ಜಯರಾಮ ಶೆಟ್ಟಿ ಅವರು ಮಾತನಾಡಿ, ತೌಳವರಾಣಿ ಅಬ್ಬಕ್ಕಳನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಯುವಸಮುದಾಯದಿಂದ ಆಗಬೇಕಿದೆ. ವಿದ್ಯಾರ್ಥಿಗಳು 80 ರಿಂದ 90 ವರ್ಷಗಳ ಕಾಲ ಉಳ್ಳಾಲದಲ್ಲಿ ಆಡಳಿತ ನಡೆಸಿದ ಅಬ್ಬಕ್ಕೆಯರ ಕುರಿತು ಸಂಶೋಧನಾ ವರದಿಯತ್ತ ಹೆಚ್ಚಿನ ಗಮನಹರಿಸುವ ಅವಶ್ಯಕತೆಯಿದೆ ಎಂದು  ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ  ವಿ.ವಿ ಯ ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ,  ಸುತ್ತಮುತಲಿನ ಪ್ರದೇಶವನ್ನು ಗಮನಿಸದೆ ಸಂಸ್ಕೃತಿ ಗಳನ್ನು ಮರೆಯುತ್ತಿದ್ದೇವೆ.  ಚಿನ್ನದಂತೆ ಕಾಳುಗಳ ಬೆಲೆ ಆಗಿನದ್ದಾಗಿತ್ತು.  ವ್ಯಾಪಾರಕ್ಕಾಗಿ ಉಳ್ಳಾಲ ಹೆಸರುವಾಸಿಯಾಗಿತ್ತು.  ನಿಜಾಂಶದ ವಿಚಾರಗಳು ಎಂದಿಗೂ ಸ್ಪೂರ್ತಿದಾಯಕ ಅನ್ನುವ ಉದ್ದೇಶದಿಂದ ರಾಣಿ ಅಬ್ಬಕ್ಕಳ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೇವೆ. ಉಳ್ಳಾಲದ ಪ್ರದೇಶಗಳ, ಅಬ್ಬಕ್ಕಳ ಆದರ್ಶಗಳ ಸಂಶೋಧನೆಗೆ ವಿದ್ಯಾರ್ಥಿಗಳು ಗಮನಹ ರಿಸಿರಿ. ಸಮಾಜ, ಪ್ರಕೃತಿಯನ್ನು ಗಮನಿಸಿ ಮಾಧ್ಯಮ ಲೋಕದಲ್ಲಿ ವರದಿ ನಡೆಸಿ. ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಮಾಧ್ಯಮ ಮಾತ್ರ ಬಲಿಷ್ಠವಾಗಿದೆ ಎಂದರು.

ಮುಖ್ಯ ಅತಿಥಿಗಳಾದ ಜಿ.ಪಂ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಉಪಸ್ಥಿತರಿದ್ದರು. ಸಮೂಹ ಸಂವಹನ ವಿಭಾಗದ ಪ್ರೊ.ರವಿರಾಜ್ ಸ್ವಾಗತಿಸಿದರು. ಆನಂದ್ ಅಸೈಗೋಳಿ ವಂದಿಸಿದರು.

Similar News