ಅಗ್ರಸ್ಥಾನ ಕಾಯ್ದುಕೊಂಡ ಸೂರ್ಯಕುಮಾರ್

ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್

Update: 2022-11-23 18:17 GMT

ದುಬೈ, ನ.23: ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟ್ವೆಂಟಿ-20 ಬ್ಯಾಟಿಂಗ್ ರ‍್ಯಾಂಕಿಂಗ್(ranking)ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ Hardik Pandya)ಜಂಟಿ 50ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಔಟಾಗದೆ 111 ರನ್ ಗಳಿಸಿರುವ ಸೂರ್ಯಕುಮಾರ್ Suryakumar)ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕಿವೀಸ್ ವಿರುದ್ಧ ಸರಣಿಯಿಂದ ಸೂರ್ಯಕುಮಾರ್ 31 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ಒಟ್ಟು 890 ಪಾಯಿಂಟ್ಸ್ ನೊಂದಿಗೆ ದ್ವಿತೀಯ ಸ್ಥಾನದಲ್ಲಿರುವ ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್‌ಗಿಂತ ಕುಮಾರ್ 54 ಪಾಯಿಂಟ್ಸ್ ಮುನ್ನಡೆಯಲ್ಲಿದ್ದಾರೆ.

 ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಭಾರತವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಹಾರ್ದಿಕ್ ಅಂತಿಮ ಪಂದ್ಯದಲ್ಲಿ ಔಟಾಗದೆ 30 ರನ್ ಗಳಿಸಿದ ಕಾರಣ  ಜಂಟಿ 50ನೇ ಸ್ಥಾನ ತಲುಪಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಹಿರಿಯ ವೇಗದ ಬೌಲರ್ ಭುವನೇಶ್ವರ ಕುಮಾರ್ 2 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ. ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ 21ನೇ ಸ್ಥಾನ ತಲುಪಿದ್ದಾರೆ. ಸ್ಪಿನ್ನರ್ ಯಜುವೇಂದ್ರ ಚಹಾಲ್ 8 ಸ್ಥಾನ ಜಿಗಿದು 40ನೇ ಸ್ಥಾನದಲ್ಲಿದ್ದಾರೆ. 

ಏಕದಿನ ರ‍್ಯಾಂಕಿಂಗ್: ಕೊಹ್ಲಿಗೆ ಆರನೇ ಸ್ಥಾನ

ಏಕದಿನ ರ‍್ಯಾಂಕಿಂಗ್ ನಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ನಾಯಕ ರೋಹಿತ್ ಶರ್ಮಾ 8ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಸದ್ಯ ಗಾಯಗೊಂಡಿರುವ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ 11ನೇ ಸ್ಥಾನದಲ್ಲಿದ್ದು, ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಅಗ್ರ ರ್ಯಾಂಕಿನ ಆಟಗಾರನಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಸ್ವದೇಶಿ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸ್ಟೀವ್ ಸ್ಮಿತ್ ಏಳನೇ ಸ್ಥಾನ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದರು. ಆಸ್ಟ್ರೇಲಿಯದ ಓಪನರ್‌ಗಳಾದ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಕ್ರಮವಾಗಿ ಐದನೇ ಸ್ಥಾನ ಹಾಗೂ 30ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

Similar News