ದಡಾರ ಲಸಿಕೆಯ ಹೆಚ್ಚುವರಿ ಡೋಸ್ ನೀಡಲು ಪರಿಶೀಲನೆ ನಡೆಸಿ : ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ

Update: 2022-11-24 15:25 GMT

ಹೊಸದಿಲ್ಲಿ, ನ. 24:ದಡಾರ (Measles)ಹಾಗೂ ರುಬೆಲ್ಲಾ( Rubella) ರೋಗ ಹರಡುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ 9 ತಿಂಗಳಿಂದ 5 ವರ್ಷದ ವರೆಗಿನ ಮಕ್ಕಳಿಗೆ ದಡಾರ ಹಾಗೂ ರುಬೆಲ್ಲಾ ಲಸಿಕೆಯ ಹೆಚ್ಚುವರಿ ಡೋಸ್ ಗಳನ್ನು ನೀಡುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರಕಾರ ಬುಧವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾದ ಪತ್ರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ. ಅಶೋಕ್ ಬಾಬು(P. Ashok Babu) ಈ ಹೇಳಿಕೆ ನೀಡಿದ್ದಾರೆ. 

ಮುಂಬೈಯಲ್ಲಿ ದಡಾರದ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ನಡುವೆ ಸಚಿವಾಲಯ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಪತ್ರವನ್ನು ರವಾನಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಿ. ಅಶೋಕ್ ಬಾಬು, ನೀತಿ ಆಯೋಗದ ಸದಸ್ಯ (ಆರೋಗ್ಯ)ರ ಅಧ್ಯಕ್ಷತೆಯಲ್ಲಿ ಬುಧವಾರ ತಜ್ಞರ ಸಭೆ ಏರ್ಪಡಿಸಲಾಗಿತ್ತು. ಸಭೆಯ ನಿರ್ಧಾರದಂತೆ ಲಸಿಕೆಯ ಹೆಚ್ಚುವರಿ ಡೋಸ್ ನೀಡುವ ಬಗ್ಗೆ ಪರಿಶೀಲಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಸಲಹೆ ನೀಡಿದೆ ಎಂದಿದ್ದಾರೆ.

ಮುಂಬೈಯಲ್ಲಿ ಈ ವರ್ಷ ಬುಧವಾರದ ವರೆಗೆ 233 ದಡಾರದ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಈ ರೋಗದಿಂದ ನಗರದಲ್ಲಿ 9 ಮಕ್ಕಳು ಸಾವನ್ನಪ್ಪಿದ್ದಾರೆ.

Similar News