ಮಕ್ಕಳಲ್ಲಿ ಏಕಾಗೃತೆ ಮೂಡಿಸಿ,ಕ್ರಿಯಾಶೀಲತೆ ಹೆಚ್ಚಿಸುವ ಉದ್ದೇಶ: ಕುದುರೆ ಏರಿ ಇಬ್ಬರಿಂದ ಕೇರಳ-ಕಾಶ್ಮೀರಕ್ಕೆ ಪಯಣ

ʼಕುದುರೆ ಸವಾರಿ ಮೂಲಕ ಕ್ರೀಡಾಸಕ್ತಿ ಬೆಳೆಸುವ ಗುರಿʼ

Update: 2022-11-24 17:07 GMT

ಕುಂದಾಪುರ, ನ.24: ಮಕ್ಕಳಲ್ಲಿ ಏಕಾಗೃತೆ ಮೂಡಿಸಿ, ಕ್ರಿಯಾಶೀಲತೆ ಹೆಚ್ಚಿಸಿ ಅವರನ್ನು ಆತ್ಮಹತ್ಯೆಯಂತಹ ನಿರ್ಧಾರಗಳಿಂದ ದೂರವಿರುವಂತೆ ಧೈರ್ಯ- ಸ್ಥೈರ್ಯ ನೀಡುವ ಸದುದ್ದೇಶದಿಂದ ಕೈಯಲ್ಲಿ ಕೇವಲ 8 ಸಾವಿರ ರೂ. ಹಣ ಹಿಡಿದು, ಎರಡು ಕುದುರೆ ಏರಿ ಕೇರಳದಿಂದ ಕಾಶ್ಮೀರದತ್ತ ಅಂದಾಜು ಮೂರು ಸಾವಿರ ಕಿ.ಮೀ ಅಧಿಕ ದೂರ ಸ್ನೇಹಿತರಿಬ್ಬರು ಸವಾರಿ ಹೊರಟಿದ್ದಾರೆ.

ಕೇರಳ ಮಲಪ್ಪುರಂ ಮಂಜೇರಿಯ ಮುಹಮ್ಮದ್ ಸುಹೇಲ್ (28) ಹಾಗೂ ಅವರ ಬಾಲ್ಯ ಸ್ನೇಹಿತ ಹೈದರ್ (24) ಕುದುರೆ ಸವಾರಿ ಹೊರಟ ಸಾಹಸಿಗರು.

ಕೇರಳದಿಂದ ಹೊರಟಾಗ ಮೊದಲಿಗೆ ದಿನಕ್ಕೆ 10-15 ಕಿ.ಮೀ. ದೂರ ಕುದುರೆ ಓಡಿಸುತ್ತಿದ್ದು, ಬರುವ ದಾರಿಯಲ್ಲಿ ಸಿಗುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಯಿಂದ ದೂರವಿದ್ದು ಆತ್ಮ ಸ್ಥೈರ್ಯ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂಬುದು ಅವರ ಪ್ರಮುಖ ಉದ್ದೇಶ.

ಇದರೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಕುದುರೆ ಸವಾರಿ ಮಾಡಿಸುವ ಮೂಲಕ ಅದರ ಬಗ್ಗೆ ತಿಳುವಳಿಕೆ ನೀಡಿ ಅವರಲ್ಲಿ ಕ್ರೀಡಾಸಕ್ತಿಯನ್ನು  ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆ ಸಂದರ್ಭ ಸಿಕ್ಕಲ್ಲಿ ಶಾಲೆಗಳಿಗೂ ತೆರಳಿ ಅಲ್ಲಿಯೂ ಇದೇ ಕೆಲಸ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಖಿನ್ನತೆಯಿಂದ ಮಕ್ಕಳು ಬಳಲಬಾರದು. ಏಕಾಗ್ರತೆ ಹೆಚ್ಚಬೇಕು, ಇದಕ್ಕಾಗಿ ಕ್ರಿಯಾಶೀಲವಾಗಿರಲು ಕುದುರೆ ಸವಾರಿ ಸಹಾಯಕ ಎನ್ನುವುದು ಇವರಿಬ್ಬರ ಅಭಿಪ್ರಾಯ.

ತಾವು ತೆರಳಿದೆಡೆ ಇಂಧನ ಉಳಿತಾಯ, ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಬಗ್ಗೆಯೂ ಇವರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಕೇರಳದಿಂದ ಕುಂದಾಪುರ ದತ್ತ ಕುದುರೆ ಏರಿ ಈಗಾಗಲೇ 29 ದಿನ ಪಯಣ ಬೆಳೆಸಿದ್ದು, ಮಾರ್ಗ ಮದ್ಯೆ ಇವರಿಗೆ ಸಾರ್ವಜನಿಕರು, ಪ್ರಾಣಿಪ್ರಿಯರು ಸತ್ಕರಿಸುತ್ತಿದ್ದಾರೆ. ಬಹುತೇಕವಾಗಿ ಕುದುರೆ ಸಾಕಿದೆಡೆಯೇ ಇವರು ತಂಗುವ ಮೂಲಕ ಅವರ ಸಲಹೆ, ಮಾರ್ಗದರ್ಶನದ ಜೊತೆಗೆ ಕುದುರೆಗಳ ಮೇವು, ಆರೋಗ್ಯ ಬಗ್ಗೆ ಕಾಳಜಿ, ನಿಗಾ ವಹಿಸುತ್ತಾರೆ.

ಪ್ರಯಾಣದ ನಡುವೆ ತಾವು ಉಪವಾಸ ಇದ್ದರೂ ಕೂಡ ನೆಚ್ಚಿನ ಸಾರಾ ಹಾಗೂ ಅಬ್ಬು ಎಂಬ ಹೆಸರಿನ ಕುದುರೆಗಳಿಗೆ ಬೇಕಾದ ಆಹಾರ ನೀಡುತ್ತಿದ್ದಾರೆ. ಕೆಲ ವರ್ಷದ ಹಿಂದೆ ಖರೀದಿಸಿದ ಎರಡು ದೇಸಿ (ಪೋನಿ) ಕುದುರೆಯನ್ನು ಇವರ ಸವಾರಿಗೆ ಬಳಸುತ್ತಿದ್ದು ಇವರ ಈ ಪ್ರಯಾಣಕ್ಕೆ ಈ ಕುದುರೆಗಳು ಎಲ್ಲಾ ರೀತಿಯಲ್ಲೂ ಸಹಕಾರಿಯಾಗಿವೆ.

"ಆತ್ಮತೃಪ್ತಿಗಾಗಿ ಈ ರೈಡ್ ಮಾಡುತ್ತಿದ್ದೇವೆ. ಕುದುರೆ ಸವಾರಿ ಮೂಲಕ ಇಡೀ ದೇಶ ಸಂಚಾರ ಸಾಧ್ಯ ಎಂಬುದನ್ನು ತಿಳಿಸುವ ಉದ್ದೇಶವಿದೆ. ಇದರ ಜೊತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ದಾರಿಯಲ್ಲಿ ಸಿಗುವ ಸಾರ್ವಜನಿಕರು, ಸ್ನೇಹಿತರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಕುದುರೆಗೆ ಹೊಟ್ಟೆ ತುಂಬಾ ಆಹಾರ ನೀಡುತ್ತೇವೆ. ನಾವು ಹಸಿವಿನಿಂದ ಇದ್ದರೂ ಚಿಂತೆ ಇಲ್ಲ. ನಮ್ಮ ಸವಾರಿ ವೇಳೆ ಕುದುರೆಯ ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ".

- ಸುಹೇಲ್ (ಕೇರಳ-ಕಾಶ್ಮೀರ ಕುದುರೆ ಸವಾರಿ ಮಾಡುತ್ತಿರುವರು)

"ಈ ಕುದುರೆ ಯಾತ್ರೆಯಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ. ಈ ಯಾತ್ರೆಗೆ ಯಾರದೂ ಸ್ಪಾನ್ಸರ್ ಇಲ್ಲ. ಆತ್ಮತೃಪ್ತಿಗಾಗಿ ಈ ಸವಾರಿ ಮಾಡಿ ನಮ್ಮ ಕೈಲಾದಷ್ಟು ಸಂದೇಶ ನೀಡುತ್ತಿದ್ದೇವೆ. ರೆಕಾರ್ಡ್ ಹಿಂದೆ ಬಿದ್ದಿಲ್ಲ. ಸಫಾರಿಯಲ್ಲಿ ಸಾಧನೆ ಮಾಡಿದ ಸಂತೋಷ್ ಜಾರ್ಜ್ ಎನ್ನುವರು ಈ ಸವಾರಿಗೆ ಸ್ಫೂರ್ತಿ".
-ಹೈದರ್

"ಕೋಡಿಯಲ್ಲಿ ಹೋಟೆಲ್ ನಡೆಸುತ್ತಿರುವ ಶಬರೀಶ್, ಹರೀಶ್ ಪೂಜಾರಿ ಅವರ ಬಳಿಯಿದ್ದ ಕುದುರೆ ಖರೀದಿಗೆ ಬಂದಾಗ ಸುಹೇಲ್ ಹಾಗೂ ಹೈದರ್ ಇಲ್ಲಿ ಎರಡು ದಿನ ಉಳಿದಿರುವುದು ತಿಳಿದು ಬಂದು ಮಾತನಾಡಿಸಿದಾಗ ಇವರ ಸದುದ್ದೇಶ ತಿಳಿದುಬಂತು. ಕಾಶ್ಮೀರ ತಲುಪಲು 3-4 ತಿಂಗಳ ಅಗತ್ಯವಿದೆ ಎಂದು ಸ್ನೇಹಿತರಿಬ್ಬರು ತಿಳಿಸಿದ್ದು ಅಲ್ಲಲ್ಲಿ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಕುದುರೆ ಸವಾರಿ ಬಗ್ಗೆ ಜನರು ಇನ್ನಷ್ಟು ಆಸಕ್ತಿ ಬೆಳೆಸಿಕೊಳ್ಳಬೇಕು".

-ಝಿಯಾದ್ ಸಂತೆಕಟ್ಟೆ (ಪ್ರಾಣಿ ಪ್ರಿಯ)

ಮನೆಯವರ ಸಹಕಾರ, ಯೂಟ್ಯೂಬ್ ಅಪ್ಡೇಟ್
ಸುಹೇಲ್ ಬಿಎ ಪದವೀಧರರಾಗಿದ್ದು ಒಂದಷ್ಟು ಕಾಲ ಶಿಕ್ಷಕರಾಗಿ, ಚಾಲಕರಾಗಿ ದುಡಿದವರು. ಹೈದರ್ ಕಳೆದ ಐದಾರು ವರ್ಷದಿಂದ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದಾರೆ. ಸುಹೇಲ್ ಅವರಿಗೆ ತಂದೆ-ತಾಯಿ ಪತ್ನಿ, ಓರ್ವ ಮಗು, ಇಬ್ಬರು ಸಹೋದರಿಯರು ಹಾಗೂ ಸೋದರ ಇದ್ದಾರೆ. ಹೈದರ್ ಅವರಿಗೆ ತಾಯಿ ಹಾಗೂ ಸೋದರ ಇದ್ದು, ಇಬ್ಬರ ಮನೆಯವರು ಕೂಡ ದಿನನಿತ್ಯ ಫೋನ್ ಕರೆ ಮಾಡಿ ವಿಚಾರಿಸುತ್ತಾರೆ. 
ಮಾತ್ರವಲ್ಲದೆ  ಇವರದ್ದೇ ಆದ ಯೂಟ್ಯೂಬ್ ಮೂಲಕ ತಮ್ಮ ದೈನಂದಿನ ಸಂಚಾರ, ಸಿಕ್ಕ ವ್ಯಕ್ತಿಗಳ ಮಾಹಿತಿ, ಸಹಕರಿಸಿದವರ ಬಗ್ಗೆ ಅದರಲ್ಲಿ ಮಾಹಿತಿ ಅಪ್ಡೇಟ್ ನೀಡುತ್ತಾರೆ. ಮನೆಯವರೂ ಇದನ್ನು ನಿತ್ಯ ವೀಕ್ಷಿಸಿ ಮಾಹಿತಿ ಪಡೆಯುತ್ತಾರೆ.

Similar News