‘ನನ್ನ ನಗರ ನನ್ನ ಬಜೆಟ್ ಅಭಿಯಾನ’ ಕ್ಕೆ ಚಾಲನೆ: ಮುಂದಿನ ಬಜೆಟ್‍ಗೆ ಸಾರ್ವಜನಿಕರಿಂದ ಸಲಹೆ ಸಂಗ್ರಹ: ಬಿಬಿಎಂಪಿ

Update: 2022-11-24 16:45 GMT

ಬೆಂಗಳೂರು, ನ.24: ‘ಬಿಬಿಎಂಪಿಯ ಮುಂದಿನ ಹಣಕಾಸು ವರ್ಷದ(2023-24) ಆಯವ್ಯಯಕ್ಕೆ ಸಂಬಂಧಿಸಿದಂತೆ ‘ನನ್ನ ನಗರ ನನ್ನ ಬಜೆಟ್’ ಘೋಷಣೆಯೊಂದಿಗೆ ನಗರದ 243 ವಾರ್ಡ್‍ಗಳಲ್ಲಿ ಜನಾಗ್ರಹ ಸಂಸ್ಥೆಯು ಸಾರ್ವಜನಿಕ ಸಲಹೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.

ಗುರುವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ‘ನನ್ನ ನಗರ ನನ್ನ ಬಜೆಟ್’ ಅಭಿಯಾನದಡಿ ಜನಾಭಿಪ್ರಾಯ ಸಂಗ್ರಹಿಸುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಪಾಲಿಕೆ ಆಯವ್ಯಯದಲ್ಲಿ ನಾಗರಿಕರ ಸಹಭಾಗಿತ್ವ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕೆಂಬ ಉದ್ದೇಶದಿಂದ ಸಂಸ್ಥೆಯು ಅಭಿಯಾನವನ್ನು 7ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಅಭಿಯಾನದ ಅಂಗವಾಗಿ ವಾಹನ ಪಾಲಿಕೆ 243 ವಾರ್ಡ್ ನಿಗದಿತ ಸ್ಥಳ, ಜನ ನಿಬಿಡ ಸ್ಥಳದಲ್ಲಿ ಸಂಚರಿಸಿ, ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ನಾಗರಿಕರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುತ್ತದೆ ಎಂದರು.

‘ಸಂಸ್ಥೆಯು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಯಾವ ಕೆಲಸ ಆಗಬೇಕು ಎಂಬುದರ ಬಗ್ಗೆ ಮುಂದಿನ ಒಂದು ತಿಂಗಳು ಬಜೆಟ್ ವಾಹನದ ಮೂಲಕ ನಗರದಾದ್ಯಂತ ಸಂಚರಿಸಿ ಸಲಹೆಗಳನ್ನು ಸಂಗ್ರಹಿಸಲಿದೆ. ಸಂಸ್ಥೆಯು ನಾಗರಿಕರು ನೀಡಿರುವ ಸಲಹೆಗಳನ್ನು ಒಟ್ಟುಗೂಡಿಸಿ ಪಾಲಿಕೆಗೆ ವರದಿ ಸಲ್ಲಿಸಲಿದೆ. ಅನಂತರ ನಾಗರಿಕರು ನೀಡಿರುವ ಸಲಹೆಗಳನ್ನು ಆಯವ್ಯಯದಲ್ಲಿ ಸೇರ್ಪಡೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. 

2022-23ನೆ ಆಯವ್ಯಯದಲ್ಲಿ 198 ವಾರ್ಡ್‍ಗಳ ಪೈಕಿ ಪ್ರತಿ ವಾರ್ಡ್‍ಗೆ ತಲಾ 1ಕೋಟಿ ರೂ.ಅನ್ನು ನಿಗದಿಪಡಿಸಲಾಗಿತ್ತು. ಅದನ್ನು ವಾರ್ಡ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ವ್ಯಯಿಸಿದ್ದು, ಅದಕ್ಕಾಗಿ ಈಗಾಗಲೇ 70 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಬಾಕಿ 30 ಲಕ್ಷ ರೂ.ಗಳನ್ನು ರಸ್ತೆಗುಂಡಿಗಳನ್ನು ಮುಚ್ಚಲು ವ್ಯಯಿಸಲಾಗುತ್ತಿದೆ ಎಂದರು. 

ಪಾಲಿಕೆ ವ್ಯಾಪ್ತಿಯಲ್ಲಿರುವ ವಾರ್ಡ್‍ಗಳಿಗೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು ಎಂಬ ಬೇಡಿಕೆಗಳು ಬರುತ್ತಿವೆ. ಅದನ್ನು ಪರಿಶೀಲಿಸಲಾಗುತ್ತಿದ್ದು, ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವ ಆಲೋಚನೆ ಇದೆ. ಈ ಕುರಿತು ಸಭೆಯನ್ನು ನಡೆಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಈ ವೇಳೆ ಸಂಸ್ಥೆಯ ಸಂತೋಷ್ ನರಗುಂದ, ಬಿಎಎಫ್, ಬಿಪ್ಯಾಕ್, ವೈಟ್‍ಫೀಲ್ಡ್ ರೈಜರ್ಸ್, ವಾರ್ಡ್ ಸಮಿತಿ ಬಳಗ ಸೇರಿದಂತೆ ಇನ್ನಿತರೆ ಎನ್‍ಜಿಒ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Similar News