ಮುಖವಾಡದ ಮರೆಯಲ್ಲಿ ಸ್ತ್ರೀ ಶೋಷಣೆಯ ಚಹರೆಗಳು

Update: 2022-11-25 05:30 GMT

ಶೋಷಣೆಯ ಮುಖಗಳು ತಮ್ಮ ಚಹರೆಯನ್ನು ಬದಲಾಯಿಸಿ ಅಟ್ಟಹಾಸ ಮೆರೆಯುತ್ತಿವೆ. ಅದಿಂದು ಲೈಂಗಿಕ ನೆಲೆಯಲ್ಲಿ ವಿಜೃಂಭಿಸುತ್ತಿವೆ. ಅದು ಧಾರ್ಮಿಕ ಸ್ಥಳಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳು, ಹಾಗೂ ಸ್ತ್ರೀಯರ ಸ್ವಗೃಹದಲ್ಲೂ ಮೊದಲಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ.

ನಮ್ಮೂರಿನ ಪುಟ್ಟ ಪಟ್ಟಣದಲ್ಲಿ ಅನೇಕ ತಾಯಂದಿರು ದಿನವೂ ತಮ್ಮ ಹೆಣ್ಣುಮಕ್ಕಳನ್ನು ತಾವೇ ಖುದ್ದಾಗಿ ಬಂದು ಶಾಲೆಯವೆರಗೂ ಮುಟ್ಟಿಸಿ ಹೋಗುತ್ತಾರೆ. ಕೇಳಿದರೆ ‘‘ಕಾಲ ಸರಿಯಿಲ್ಲ ಯಾವಾಗ ಏನಾಗುತ್ತೋ ಗೊತ್ತಾಗಲ್ಲ. ಎಲ್ಲೂ ಹೆಣ್ಣುಮಕ್ಕಳಿಗೆ ಸುರಕ್ಷತೆ ಕಾಣ್ತಿಲ್ಲ. ಆದಕ್ಕೆ...’’ ಎಂಬ ಉತ್ತರ ಬರುತ್ತದೆ. ನಾವೆಲ್ಲ ಶಾಲೆಗಳಿಗೆ ಹೋಗುವಾಗ ಇಲ್ಲದ ಈ ಪರಿಯ ಕಾಳಜಿ ಆತಂಕ ಇಂದು ಹೆಣ್ಣುಮಕ್ಕಳ ಸುರಕ್ಷತೆಯ ಕುರಿತಾಗಿ ಹೆತ್ತವರಲ್ಲಿ ಬರಲು ಕಾರಣ ಇಂದು ದಿನವೂ ನಡೆಯುತ್ತಿರುವ ಸ್ತ್ರೀ ದೌರ್ಜನ್ಯಗಳು, ಲೈಂಗಿಕ ಶೋಷಣೆಗಳು.

ಹೆಣ್ಣುಮಕ್ಕಳನ್ನು ಅನ್ಯಾಯವಾಗಿ, ಅನೈತಿಕವಾಗಿ ಬಳಸಿಕೊಳ್ಳುವ ನೂರಾರು ಶಿಕ್ಷಕರು ನಿತ್ಯವೂ ನಮ್ಮ ಕಣ್ಣಮುಂದೆಯೇ ಓಡಾಡುತ್ತಿರುತ್ತಾರೆ. ಟ್ಯೂಷನ್‌ಗೆಂದು ಹೋದ ಕಂದಮ್ಮ ಹೆಣವಾಗಿ ನೀರಿನ ಸಂಪಿನಲ್ಲಿ ಸಿಗುತ್ತಾಳೆ. ದೇಶದ ಭಾವೀ ಪ್ರಜೆಗಳನ್ನು ರೂಪಿಸಬೇಕಾದ ಶಿಕ್ಷಕರು ರಾಕ್ಷಸರಾಗಿ ತಮ್ಮ ತೆವಲುಗಳಿಗೆ ಮುಗ್ಧ ಮಕ್ಕಳನ್ನು ಬಲಿಪಡೆಯುತ್ತಾರೆ. ಭವಿಷ್ಯ ರೂಪಿಸುವ ಕೈಗಳೇ ಕುತ್ತಿಗೆ ಹಿಸುಕುತ್ತಿವೆ. ಇಂದು ಸ್ತ್ರೀ ಸುರಕ್ಷಿತವಾಗಿದ್ದಾಳೆಯೇ? ಶಾಲೆ ಕಾಲೇಜುಗಳು ಕೂಡಾ ಮಹಿಳೆಗೆ ಅಸುರಕ್ಷತೆಯ ಕೇಂದ್ರಗಳಾಗುತ್ತಿವೆಯೇ?

ಸರಕಾರದಿಂದ ಕೋಟಿ ಕೋಟಿ ಅನುದಾನ ಪಡೆಯುತ್ತಿರುವ ಮಠಗಳಲ್ಲಿ ಬಡ ಅಸಹಾಯಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಅಂತಹ ಬಡ ಕುಟುಂಬದ, ದೀನದಲಿತರ ನೂರಾರು ಹೆಣ್ಣುಮಕ್ಕಳು, ಆ ಮಠದೊಳಗಿನ ಬೆಕ್ಕುಗಳಿಗೆ ನಿತ್ಯವೂ ಆಹಾರವಾಗುತ್ತಿರುವುದು ಎಂತಹ ದುರ್ದೆಸೆ. ಹೆಣ್ಣುಮಕ್ಕಳನ್ನು ಗೌರವಿಸಬೇಕಾದ ಧರ್ಮ ಪಾಲಿಸುವ, ಸಾಂಸ್ಕೃತಿಕ ಜ್ಞಾನವನ್ನು ಬಿತ್ತಬೇಕಾದ ಸ್ಥಳದಲ್ಲಿಯೇ ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯ ಏನನ್ನು ಬಿಂಬಿಸುತ್ತಿದೆ?

ಇವುಗಳಿಗೆ ಕಾರಣಗಳೇನು? ಅದಿಷ್ಟೇ!

ಸಂಪ್ರದಾಯಶೀಲ ಭಾರತದಲ್ಲಿ ಸ್ತ್ರೀತ್ವವನ್ನು ಜೈವಿಕ ಲಿಂಗದ ಪರಿಕಲ್ಪನೆಯಲ್ಲಿಯೇ ಗ್ರಹಿಸುವ ಪರಿಪಾಠವಿದೆ. ಲಿಂಗ ಜೈವಿಕವಾಗಿ ನಿರ್ಧರಿತವಾಗುವ ಸಂಗತಿಯಾದರೆ, ಲಿಂಗತ್ವ ಸಾಮಾಜಿಕ ಮತ್ತು ಮಾನಸಿಕವಾಗಿ ಗ್ರಹಿಸಲ್ಪಡುವಂತಹದ್ದು. ಆದರೆ ಭಾರತದಲ್ಲಿ ಅವು ಏಕರೂಪದಲ್ಲೇ ಪರಿಗಣಿಸಲ್ಪಡುತ್ತವೆ, ಇದರಿಂದ ಭಾರತೀಯ ಸಾಮಾಜಿಕ ಸಿದ್ಧಾಂತಗಳಲ್ಲಿ ಸ್ತ್ರೀ ಸದಾ ಶೋಷಣೆಯ ಬಲಿಪಶು.

ಭಾರತದ ಮಹಿಳೆಯರು ವಿವಾಹ, ವಿವಾಹ ವಿಚ್ಛೇದನ, ಸತಿಸಹಗಮನ, ಬಾಲ್ಯವಿವಾಹ, ವೈಧವ್ಯ, ವರದಕ್ಷಿಣೆ, ಆಸ್ತಿಯ ಉತ್ತರದಾಯಿತ್ವ ಇತ್ಯಾದಿ ವಿಚಾರಗಳಲ್ಲಿ ಅತಿಯಾದ ತಾರತಮ್ಯಗಳನ್ನು ಈ ಹಿಂದೆ ಅನುಭವಿಸುತ್ತಿದ್ದರು. ಅದರ ಪ್ರಮಾಣ ಇಂದು ಕಡಿಮೆಯಾಗಿದೆಯಾದರೂ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಶಿಕ್ಷಣ, ಉದ್ಯೋಗಾವಕಾಶಗಳು, ಸ್ವಾವಲಂಬಿ ಜೀವನ, ಬದಲಾದ ಜೀವನ ವಿಧಾನಗಳು, ಆಧುನಿಕತೆ, ಪರದೇಶಗಳ ಜೀವನ ಶೈಲಿಯ ಪ್ರಭಾವ ಹೀಗೆ ಹಲವು ಕಾರಣಗಳಿಂದ ಸ್ತ್ರೀಯರು ಅಂದಿಗಿಂತ ಕೊಂಚ ಮಟ್ಟಿಗೆ ನೆಟ್ಟಗೆ ಉಸಿರಾಡುತ್ತಿದ್ದಾರೆ.

ಆದರೆ ಶೋಷಣೆಯ ಮುಖಗಳು ತಮ್ಮ ಚಹರೆಯನ್ನು ಬದಲಾಯಿಸಿ ಅಟ್ಟಹಾಸ ಮೆರೆಯುತ್ತಿವೆ. ಅದಿಂದು ಲೈಂಗಿಕ ನೆಲೆಯಲ್ಲಿ ವಿಜೃಂಭಿಸುತ್ತಿವೆ. ಅದು ಧಾರ್ಮಿಕ ಸ್ಥಳಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳು ಹಾಗೂ ಸ್ತ್ರೀಯರ ಸ್ವಗೃಹದಲ್ಲೂ ಮೊದಲಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ. ಮಹಿಳೆಯರ ಸ್ಥಿತಿಗತಿಗಳು ಇಂದಿನ ಕಾಲಕ್ಕೂ ಅಂತಹ ಬದಲಾವಣೆಗಳಿಂದ ಉತ್ತಮ ಸ್ಥಿತಿಗೆ ಏರಿಲ್ಲ. ಹಾಗಾಗಿ ವಿದ್ಯಾವಂತ ಜಗತ್ತು ಕಾಮುಕತೆ ಮತ್ತು ಕ್ರೌರ್ಯದಲ್ಲಿ ಹಿಂದಿನ ಅವಿದ್ಯಾವಂತ ಜಗತ್ತಿಗಿಂತ ಮುಂದಿದೆ. ಅಂಕಿ-ಸಂಖ್ಯೆಗಳನ್ನು ನೋಡಿದರೆ ಪ್ರತಿವರ್ಷ ಮಹಿಳೆಯರ ಮೇಲಿನ ದೌರ್ಜನ್ಯದ ಸಂಖ್ಯೆಗಳು ಹೆಚ್ಚುತ್ತಲೇ ಹೋಗುತ್ತಿವೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳಿಗೆ ಸರಿಯಾದ ಪರಿಹಾರ ಸಿಗುವಂತೆ ಮಾಡುವ ಸಾಮಾಜಿಕ ಭದ್ರತೆ ಕೊಡುವ ಸಮರ್ಪಕ ವ್ಯವಸ್ಥೆಗಳಿಲ್ಲ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳಲ್ಲಿ ದಾಳಿಯಿಂದ ಪ್ರಾಣ ಕಳೆದುಕೊಳ್ಳುವ, ಇಲ್ಲವೇ ಮಾನಸಿಕವಾಗಿ ಮುದುಡಿಹೋಗುವ ಮನಸ್ಸುಗಳು ಮತ್ತೆ ಚಿಗುರುವುದೇ ಇಲ್ಲ. ಹಣದ ಬಲದಿಂದ, ಅಧಿಕಾರದ ಬಲದಿಂದ ಮುಗ್ಧ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಬಹಳ ಸಂದರ್ಭಗಳಲ್ಲಿ ಮುಚ್ಚಿಹೋಗುತ್ತವೆ. ಇಲ್ಲ ಮರ್ಯಾದೆಗೆ ಅಂಜಿ ಸಹಿಸಿಕೊಳ್ಳಲ್ಪಡುತ್ತದೆ.

ನಮ್ಮ ಮನೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳನ್ನು ಬೆಳೆಸುವ ಕ್ರಮಗಳಲ್ಲಿ ವ್ಯತ್ಯಾಸಗಳಿವೆ. ಸಮೂಹ ಮಾಧ್ಯಮಗಳಾದ ಸಿನೆಮಾ, ಟಿವಿ ಸಿರಿಯಲ್‌ಗಳು, ಹೆಸರಾಂತ ಲೇಖಕರು ಬರೆಯುವ ಕತೆ ಕಾದಂಬರಿಗಳು ಎಲ್ಲವೂ ಸ್ತ್ರೀ ಶೋಷಣೆಯನ್ನು ಬೇರೆ ಬೇರೆ ನೆಲೆಗಳಲ್ಲಿಯೇ ಚಿತ್ರಿಸುತ್ತವೆ. ಗಂಡಿಗೆ ಅಧೀನಳಾಗಿ, ಪುರುಷನ ಅಸ್ತಿತ್ವದಡಿಯಲ್ಲಿಯ ಪೂರಕ ಪಾತ್ರವಾಗಿಯೇ ಬಿಂಬಿಸಲ್ಪಡುತ್ತಾಳೆ. ಇಂತಹ ಚಿತ್ರಗಳನ್ನು ಎಳೆಯ ವಯಸ್ಸಿಗೆ ನೋಡುತ್ತಾ ಬೆಳೆಯುವ ಗಂಡುಮಗು ಅದೇ ಪುರುಷಾಧಿಕಾರದ ಮುಂದಿನ ಪೀಳಿಗೆಯ ಯಜಮಾನನಾಗುತ್ತಾನಲ್ಲವೇ? ಇಂತಹ ಸೂಕ್ಷ್ಮಗಳನ್ನು, ಮನಸ್ಥಿತಿಯನ್ನು ಬದಲಾಯಿಸುವ ಅನಿವಾರ್ಯತೆ ಇದೆಯೇ ಹೊರತು ಅಪರಾಧ ನಡೆದಾಗ ಶಿಕ್ಷೆಗಳನ್ನು ನೀಡಿ ಸಮಾಜವನ್ನು ಸುಧಾರಿಸುವ ಪ್ರಯತ್ನ ಸಫಲವಾಗದು.

ಪಂಜಾಬಿ ಲೇಖಕಿ ಅಜಿತ್ ಕೌರ್ ತಮ್ಮ ‘ಖಾನ್ಬದೋಶ್’ ಆತ್ಮಕಥೆಯಲ್ಲಿ ಒಂದೆಡೆ ಹೇಳುತ್ತಾರೆ. ‘‘ಜಗತ್ತಿನಲ್ಲಿ ಮುಖ್ಯ ಅಪರಾಧವೆಂದರೆ ಹೆಣ್ಣಾಗಿರುವುದು. ಅದರಲ್ಲೂ ಆಕೆ ತನ್ನ ಅನ್ನವನ್ನೂ ತಾನೇ ಗಳಿಸಿಕೊಳ್ಳಬಲ್ಲ ಸ್ವಾವಲಂಬಿಯಾಗಿದ್ದರಂತೂ ಬಹುದೊಡ್ಡ ಅಪರಾಧ.’’ ಆಧುನಿಕತೆಯಲ್ಲೂ ಹೆಣ್ಣು ಸಮಾಧಾನದಿಂದ ಗೌರವದಿಂದ ಬಾಳಲು ಕಷ್ಟಪಡುತ್ತಿದ್ದಾಳೆ. ಶಿಕ್ಷಿತ ಸಮುದಾಯವೇ ಆಕೆಯ ಬದುಕನ್ನು ನರಕ ಮಾಡುತ್ತಿದೆ.

ಲಿಂಗ ಸಂಬಂಧ ತಾರತಮ್ಯವನ್ನು ಮಾಡಬಾರದೆಂದು ನಮ್ಮ ಸಂವಿಧಾನದ ಅನುಚ್ಛೇದ-151ರಲ್ಲಿ ಉಲ್ಲೇಖಿಸಲಾಗಿದೆ. ಆಕೆಯ ಹಿತಾಸಕ್ತಿಯನ್ನು ಕಾಯುವ ನಿಟ್ಟಿನಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ತಡೆ ಕಾಯ್ದೆಗಳು ರೂಪಿಸಲ್ಪಟ್ಟಿವೆ. ಭಾರತ ಹೊಳೆಯುತ್ತಿದೆ. ವಾಗ್ಮಿಗಳ ಜಗತ್ತಾಗುತ್ತಿದೆ. ಉದ್ಘೋಷಗಳಲ್ಲಿ ಅರಳುತ್ತಿದೆ. ಆದರೆ ಸಾಮಾನ್ಯರ ಬದುಕು ಅದರಲ್ಲೂ ಮಹಿಳೆಯರ ಬದುಕು ದುರ್ಬರವಾಗುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ನೀಡಿದ ಹಕ್ಕುಗಳನ್ನು ಅನುಭವಿಸಲು ಈ ಧರ್ಮ ರಕ್ಷಕರ, ಸಂಸ್ಕೃತಿ ರಕ್ಷಕರ ಪರವಾನಿಗೆ ಪಡೆಯಬೇಕಾದಂತೆ ತೋರುತ್ತಿದೆ. ಭಾರತೀಯ ನೆಲೆಯಲ್ಲಿ ಸಾಮಾಜಿಕ ನೈತಿಕತೆಯ ರಕ್ಷಣೆಯ ಹೊಣೆಯನ್ನು ಧಾರ್ಮಿಕ ಗುಂಪುಗಳು, ಸಂಸ್ಕೃತಿ ಪೋಷಕ ಸಂಘಟನೆಗಳು ಹೊತ್ತುಕೊಂಡಂತೆ ವ್ಯವಹರಿಸುತ್ತವೆ. ಸಂಸ್ಕೃತಿಯ ಹೆಸರಿನಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹರಣವನ್ನು ಅದರಲ್ಲೂ ಮುಖ್ಯವಾಗಿ ಸ್ತ್ರೀ ಸ್ವಾತಂತ್ರ್ಯದ ಹರಣ ಮಾಡಲಾಗುತ್ತಿದೆ. ಇದಕ್ಕೆ ಪ್ರಭುತ್ವದ ಸಹಕಾರ ಮತ್ತು ಅಧಿಕಾರದ ಬೆಂಬಲ ಸಿಗುತ್ತಿದೆ.

ಪಟ್ಟಭದ್ರ ಹಿತಾಸಕ್ತಿಯನ್ನೇ ಕಾಯುವ ಭಾರತದಲ್ಲಿ ಸ್ವಾತಂತ್ರ ಬಂದು 75 ವರ್ಷಗಳಾದರೂ, ಸಂವಿಧಾನ ರಚನೆಯಾಗಿ ಇಷ್ಟು ವರ್ಷಗಳು ಸವೆದರೂ ಬಾಬಾಸಾಹೇಬ್ ಅಂಬೇಡ್ಕರ್‌ರ ನಿಲುವು ಸಿದ್ಧಾಂತಗಳಲ್ಲಿ ರಚನೆಯಾದ ಸಾಂವಿಧಾನಿಕ ಪರಿಕಲ್ಪನೆಯ ಭಾರತ ಕೇವಲ ಕನಸಾಗಿಯೇ ಉಳಿದಿರುವುದು ವಿಪರ್ಯಾಸ. ಸ್ತ್ರೀ ಪುರುಷನಿಗೆ ಸಮಾನ ಎಂಬುದು ಆಧುನಿಕ ಗ್ರಹಿಕೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿಯ ಸಮಾನತೆಯ ಹಂದರಗಳು ನಮ್ಮಲ್ಲಿ ಕಾಣಲು ಸಾಧ್ಯವೇ? ಆ ಮನಸ್ಥಿತಿಗೆ ನಮ್ಮ ಮನದ ನೆಲ ಸಿದ್ಧವಿದೆಯೇ? ಖುದ್ದು ಪ್ರಶ್ನಿಸಿಕೊಳ್ಳಬೇಕಾದ ಸಮಯವಿದು.

Similar News