×
Ad

ಪಿಎಫ್‌ಐ ನಿಷೇಧದ ಬಳಿಕ ಸಮಾಜದಲ್ಲಿ ಭಯ ನಿರ್ಮಾಣದ ಪ್ರಯತ್ನ: ಸುನಿಲ್ ಕುಮಾರ್

ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಗೆ ಕೇಂದ್ರ ಸರಕಾರ ಸ್ಪಂದನೆ

Update: 2022-11-25 14:51 IST

ಮಂಗಳೂರು, ನ. 25: ಪಿಎಫ್ಐ ನಿಷೇಧ ಮಾಡಿದ ಬಳಿಕ ಸಮಾಜಘಾತುಕ ಶಕ್ತಿಗಳು ಸಮಾಜದಲ್ಲಿ ಭಯ ಉಂಟು ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಇಂತಹ ದುಷ್ಟಶಕ್ತಿಗಳ ಬಗ್ಗೆ ನಮ್ಮ ಸರಕಾರ ಮೃದು ಧೋರಣೆ ತೆಗೆದುಕೊಳ್ಳುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ರಿಕ್ಷಾದಲ್ಲಿ ಸ್ಫೋಟ ನಡೆದ ನಾಗುರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಸ್ಪೋಟ ಪ್ರಕರಣವನ್ನು ಎನ್‌ಐಎ ಹಸ್ತಾಂತರಿಸುವ ಮೂಲಕ ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುವುದನ್ನು ಪತ್ತೆಹಚ್ಚಲಾಗುವುದು. ಸಮಾಜಘಾತುಕ ಶಕ್ತಿಗಳು ದುಷ್ಕೃತ್ಯ ಎಸಗುವ ಮೂಲಕ ಭಯದ ವಾತಾವರಣ ಸೃಷ್ಟಿಸಿ ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಷಡ್ಯಂತ್ರ ನಡೆಸುತ್ತಿರುವುದು ಮಂಗಳೂರಿನಲ್ಲಿ ನಡೆದ ಸ್ಫೋಟದ ಮೂಲಕ ಸ್ಪಷ್ಟವಾಗಿದೆ. ಇಂತಹ ಕೃತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಪ್ರವೀಣ್ ನೆಟ್ಟಾರು ಪ್ರಕರಣ, ಶಿವಮೊಗ್ಗದ ಪ್ರಕರಣಗಳು ಸಮಾಜದಲ್ಲಿ ಭಯದ ವಾತಾವಣರದ ಸೃಷ್ಟಿಸಿದ್ದು, ಅದನ್ನು ವಿಫಲಗೊಳಿಸುವ ಪ್ರಯತ್ನ ಎಲ್ಲ ದಿಟ್ಟ ಕ್ರಮವನ್ನು ಸರಕಾರ ಮಾಡಿದೆ. ಈ ಕೃತ್ಯ ಯಾವುದೇ ವ್ಯಕ್ತಿ ಮಾಡಿದ್ದಾನೆ ಎನ್ನುವುದಕ್ಕಿಂತಲೂ ಈ ಮಾನಸಿಕತೆಯ ಚಿಂತನೆಯನ್ನು ದೂರಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಬೇಕು ಎಂದರು.

ದುಷ್ಕರ್ಮಿಗಳು ದೇವಸ್ಥಾನಗಳನ್ನು ಟಾರ್ಗೆಟ್ ಮಾಡುವ ಯತ್ನ ವಿಫಲವಾಗಿದೆ. ಈ ರೀತಿಯ ಕೃತ್ಯದ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರವಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ರಾಷ್ಟ್ರೀಯ ತನಿಖಾದಳ ಹಾಗೂ ನಮ್ಮ ಪೊಲೀಸರು ಮಟ್ಟಹಾಕುವ ವಿಶ್ವಾಸವಿದೆ ಎಂದರು.

ಎನ್‌ಐಎ ಘಟಕ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ಎನ್‌ಐಎ ಘಟಕ ಸ್ಥಾಪನೆಗೆ ನಾವು ಮನವಿ ಮಾಡಿದ್ದು, ಕೇಂದ್ರ ಇದಕ್ಕೆ ಪೂರಕ ಸ್ಪಂದನೆ ನೀಡಿದೆ ಎಂದರು.

ಈ ಸಂದರ್ಭ ಮಂಗಳೂರು ಮೇಯರ್ ಜಯಾನಂದ ಅಂಚನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗುರುಚರಣ್ ಉಪಸ್ಥಿತರಿದ್ದರು.

Similar News