ಕತರ್ ಫಿಫಾ ವರ್ಲ್ಡ್ ಕಪ್ ವೈದ್ಯಕೀಯ ತಂಡಕ್ಕೆ ಬಂಟ್ವಾಳದ ಪ್ರತಿಭಾ ಆಯ್ಕೆ

Update: 2022-11-25 14:27 GMT

ಬಂಟ್ವಾಳ, ನ.25: ಕತರ್ ಫಿಫಾ ವರ್ಲ್ಡ್ ಕಪ್ ವೈದ್ಯಕೀಯ ತಂಡದಲ್ಲಿ ಸೇವೆ ಸಲ್ಲಿಸಲು ಬಂಟ್ವಾಳದ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿ ಎಂಬವರ ಪತ್ನಿ ಪ್ರತಿಭಾ ಎನ್.ದರ್ಖಾಸು ಅವರು ಕತರಿನ ಫಿಫಾ ವರ್ಲ್ಡ್ ಕಪ್ ವೈದ್ಯಕೀಯ ತಂಡದಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದಾರೆ.

ಅವರು ಫಿಫಾ ವರ್ಲ್ಡ್ ಕಪ್ ವೈದ್ಯಕೀಯ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸೂರಂಡೆ ನಿವಾಸಿ ನಾರಾಯಣ ಪೂಜಾರಿ ಮತ್ತು ಶ್ರೀಮತಿ ದಂಪತಿಯ ಪುತ್ರಿಯಾದ ಪ್ರತಿಭಾ ಅವರು ವಾಮದಪದವು ಸಮೀಪದ ಕುಡಂಬೆಟ್ಟು ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿ ಅವರನ್ನು ವಿವಾಹವಾಗಿದ್ದು, ಸಂಸಾರ ಸಹಿತ ಕಳೆದ ಕೆಲವು ವರ್ಷಗಳಿಂದ ಕತರಿನ ದೋಹಾದಲ್ಲಿ ನೆಲೆಯಾಗಿದ್ದಾರೆ.

ಪ್ರತಿಭಾ ಎನ್.ದರ್ಖಾಸು ಅವರು ಕತರಿನ ಹಾಮದ್ ಮೆಡಿಕಲ್ ಕಾರ್ಪೊರೇಷನ್ ಸರಕಾರಿ ಅಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕೊರೋನ ಸಹಿತ ಇತರ ಸಂದರ್ಭದಲ್ಲಿ ಇವರ ವಿಶೇಷ ಸೇವೆಯನ್ನು ಗುರುತಿಸಿ ಅಲ್ಲಿನ ಸರಕಾರ ಗೌರವಿಸಿತ್ತು.

ಆರೋಗ್ಯ ಸೇವಾ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಕತರ್ ಫಿಫಾ ವರ್ಲ್ಡ್ ಕಪ್ ಮೆಡಿಕಲ್ ತಂಡದಲ್ಲಿ ನರ್ಸಿಂಗ್ ಇನ್ಚಾರ್ಜ್ ಆಗಿ ಸೇವೆ ಸಲ್ಲಿಸಲು ಆಯ್ಕೆ ಮಾಡಲಾಗಿದೆ.

ಈ ಅಪೂರ್ವ ಸೇವೆಗೆ ಆಯ್ಕೆಯಾದ ಪ್ರತಿಭಾ ಎನ್.ದರ್ಖಾಸು ಅವರಿಗೆ ಕರ್ನಾಟಕದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Similar News