ಮಣಿಪಾಲ ಮಾಹೆಯ ಡಾ.ಎಲ್ಸಾ ಸನತೋಂಬಿ ದೇವಿಗೆ ರಾಷ್ಟ್ರೀಯ ಫ್ಲೋರೆನ್ಸ್ ನೈಂಟಿಗೇಲ್ ಪ್ರಶಸ್ತಿ ಪ್ರದಾನ

ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಸ್ವೀಕಾರ

Update: 2022-11-25 14:20 GMT

ಮಣಿಪಾಲ, ನ.25: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಪ್ರಾಧ್ಯಾಪಕಿಯಾಗಿ ರುವ ಡಾ.ಎಲ್ಸಾ ಸನತೋಂಬಿ ದೇವಿ ಅವರನ್ನು 2021ನೇ ಸಾಲಿನ ರಾಷ್ಟ್ರೀಯ ಫ್ಲೋರೆನ್ಸ್ ನೈಂಟಿಗೇಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ.ಎಲ್ಲಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 2021ನೇ ಸಾಲಿನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಮಹಿಳೆ ಡಾ.ಎಲ್ಸಾ ಆಗಿದ್ದಾರೆ.

ನರ್ಸಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರ ಪ್ರತಿಭೆಯನ್ನು ಗುರುತಿಸಿ  ಪ್ರತಿಷ್ಠಿತ ರಾಷ್ಟ್ರೀಯ ಫ್ಲೋರೆನ್ಸ್ ನೈಂಟಿಗೇಲ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. 1973ರಲ್ಲಿ ಪ್ರಾರಂಭಿಸಲಾದ ಈ ಪ್ರಶಸ್ತಿಯನ್ನು, ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರ ವೈಯಕ್ತಿಕ ಸಾಧನೆಯನ್ನು ಗುರುತಿಸಿ ನೀಡಲಾಗುತ್ತದೆ.

‘ಪ್ರಶಸ್ತಿ ಸ್ವೀಕರಿಸಿರುವುದು ವೈಯಕ್ತಿಕವಾಗಿ ಅತ್ಯಂತ ಸಂತೃಪ್ತಿ ನೀಡಿದೆ. ಈ ಪ್ರಶಸ್ತಿ ಗೆದ್ದ ಪ್ರಮುಖ ವಿಜೇತರೊಂದಿಗೆ ನನ್ನನ್ನು ಸೇರಿಸಿರುವುದು ನನ್ನ ವೃತ್ತಿಪರ ಜೀವನದ ಹೆಮ್ಮೆಯ ಕ್ಷಣವಾಗಿದೆ. ಈ ಪ್ರಶಸ್ತಿ ಗೆಲುವಿನಲ್ಲಿ ಹಲವರನ್ನು ನಾನು ಸ್ಮರಿಸಬೇಕಿದೆ. ಇದರಲ್ಲಿ ಮುಂಚೂಣಿಯಲ್ಲಿರುವವರು ನನ್ನ ವಿದ್ಯಾರ್ಥಿಗಳು. ಇವರು ನನಗೆ ಸ್ಪೂರ್ತಿ ಹಾಗೂ ಸ್ಮರಣೀಯ ಅನುಭವ ನೀಡಿದವರು. ಇವರೊಂದಿಗೆ ಮಾಹೆಯು ನನಗೆ ನೀಡಿದ ಬೆಂಬಲಕ್ಕೆ ಹಾಗೂ ವೃತ್ತಿಬದುಕಿನಲ್ಲಿ ಮಿಂಚಲು ಸೂಕ್ತ ವಾತಾವರಣ ನೀಡಿರುವುದು ಕಾರಣ’ ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ಎಲ್ಸಾ ನುಡಿದರು.

ಡಾ.ಎಲ್ಸಾ ಅವರು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಅವರ ಕಾರ್ಯ ಪ್ರಶಂಸಾರ್ಹವಾಗಿತ್ತು. ಕೇಂದ್ರ ಸರಕಾರದ ಐಸಿಎಂಆರ್ ಯೋಜನೆಗಳಲ್ಲಿ ಹಾಗೂ ಸ್ಟೆಪ್‌ಓನ್ ಅಡಿ ಕೌನ್ಸಿಲಿಂಗ್‌ನಲ್ಲಿ ಅವರು ತೊಡಗಿಸಿಕೊಂಡಿದ್ದರು.

ಅಮೆರಿಕ ಫಿಲೆಡೆಲ್ಫಿಯಾದ ಇಂಟರ್‌ನೇಷನಲ್ ಫೆಮಿರ್ ಇನ್‌ಸ್ಟಿಟ್ಯೂಟ್‌ನ ಫೆಮಿರ್ ಫೆಲೋಶಿಪ್ ಪಡೆದ ಭಾರತದ ಮೊದಲ ನರ್ಸ್ ಇವರಾಗಿದ್ದಾರೆ. ಇದೀಗ ಅವರು ‘ಮಣಿಪಾಲ ಕೋಲೋಪ್ಲಾಸ್ಟ್ ಹೀಲ್ ಅಕಾಡೆಮಿ’ಯೊಂದನ್ನು ಪ್ರಾರಂಭಿಸಿದ್ದು, ಇಲ್ಲಿ ಎಂಬಿಬಿಎಸ್ ಹಾಗೂ ನಸಿಂಗ್ ಪದವೀಧರಿಗೆ ಗಾಯದ ನಿರ್ವಹಣೆಯಲ್ಲಿ ತರಬೇತಿ ನೀಡಲಾಗುತ್ತದೆ.

ಇದರೊಂದಿಗೆ ಡಾ.ಎಲ್ಸಾ ಅವರು ತನ್ನ ಕನಸಿನ ಯೋಜನೆಯಾದ ಉಡುಪಿಯಲ್ಲಿ ಬುದ್ಧಿಮಾಂದ್ಯರ ಪಾಲನೆ ಮಾಡುವವರಿಗೆ ತರಬೇತಿ ನೀಡುವ  ಯೋಜನೆಯನ್ನು ಸಾಕಾರಗೊಳಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

Similar News