ವಿಶೇಷ ಸಾಮರ್ಥ್ಯದ ಮಕ್ಕಳು ಹೊರೆಯಲ್ಲ, ಸಮಾಜದ ಆಸ್ತಿ: ಬಿಷಪ್ ಜೆರಾಲ್ಡ್ ಲೋಬೊ

Update: 2022-11-25 14:24 GMT

ಉಡುಪಿ: ವಿಶೇಷ ಸಾಮರ್ಥ್ಯದ ಮಕ್ಕಳು ಹೊರೆಯಲ್ಲ ಬದಲಾಗಿ ಅವರುಗಳಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡಿದಾಗ ಸಮಾಜದ ಆಸ್ತಿಯಾಗಲು ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಬಂಟಕಲ್ ಸಮೀಪ ಮಾನಸ ವಿಶೇಷ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿ ಕೂಡ ವಿಶೇಷ ಪ್ರತಿಭೆ ಇದ್ದು ಅವುಗಳಿಗೆ ಸೂಕ್ತವಾದ ಪ್ರೋತ್ಸಾಹ ನೀಡಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಸಮಾಜದ ಪ್ರೋತ್ಸಾಹ ಅಂತಹ ಮಕ್ಕಳ ಬಾಳು ಬೆಳಗಲು ಕಾರಣವಾಗುತ್ತದೆ ಎಂದರು.

ಎಲ್ಲಿ ಪ್ರೀತಿ ಇದೆಯೋ ಅಲ್ಲಿ ದೇವರಿದ್ದಾನೆ ಮತ್ತು ಶಾಂತಿ ಇರುತ್ತದೆ. ಇದರಿಂದ ಆ ಪರಿಸರದಲ್ಲಿ ಸೌಹಾರ್ದತೆ ಯಿಂದ ಬದಕಲು ಸಾಧ್ಯವಾಗುತ್ತದೆ. ಇಂದು ಈ ನಿಟ್ಟಿನಲ್ಲಿ ಮಾನಸ ವಿಶೇಷ ಮಕ್ಕಳ ಸಂಸ್ಥೆ ತನ್ನ ಸಾಧನೆಯ ಮೂಲಕ ಇಡೀ ದೇಶದ ಗಮನ ಸೆಳೆದಿದೆ. ವಿಶೇಷ ಸಾಮರ್ಥ್ಯದ ಮಕ್ಕಳನ್ನು ತರಬೇತಿಗೊಳಿಸುವ ಮೂಲಕ ಅವರ ಜೀವನದಲ್ಲಿ ಬೆಳಕು ಕಾಣಲು ಸಾಧ್ಯ ವಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಾಪಕ ವಿಶ್ವಸ್ಥರುಗಳನ್ನು, ಟ್ರಸ್ಟಿಗಳನ್ನು, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್‌ಗಳನ್ನು ಗೌರವಿಸಲಾಯಿತು. ಮಾನಸ ಸಂಸ್ಥೆಯ ೨೫ ವರ್ಷಗಳ ಸಾರ್ಥಕ ಸೇವೆಯ ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರವನ್ನು, ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷತೆ ಯನ್ನು ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜರ್ಮನಿಯ ವಂ.ಜೆಫ್ರಿನ್ ಮೊನಿಸ್, ಮರ್ಕ್ಯೂರಿ ಫಿನುಮೆಟಿಕ್ಸ್ ಮುಂಬೈ ಇದರ ನೊಯೆಲ್ ರಸ್ಕಿನ್ಹಾ, ಓನ್ ಶೋರ್ ಸಂಸ್ಥೆಯ ಹರೀಶ್ ಶೆಟ್ಟಿ, ಜರ್ಮನಿಯ ರುಡರ್ಸ್ ಬರ್ಗ್ ಲಾರ್ಡ್ ಸಿಟಿಯ ಮಾಜಿ ಮೇಯರ್ ಹಾರ್ಸ್ಟ್ ಸ್ನೈಡರ್, ಮಾರ್ಗರೆಟ್ ಸ್ನೈಡರ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ, ಸರ್ವೆಂಟ್ಸ್ ಆಫ್ ಹೋಲಿ ಸ್ಪಿರಿತ್ ಸಂಸ್ಥೆಯ ಪ್ರೋ.ಸಿಸ್ಟರ್ ಐಡಾ ಲೋಬೊ, ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಧರ್ಮಗುರು ವಂ.ಹೆನ್ರಿ ಮಸ್ಕರೇನ್ಹಸ್, ಮಾನಸ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ.ಎಡ್ವರ್ಡ್ ಲೋಬೊ, ಮಾಜಿ ಅಧ್ಯಕ್ಷ ರೆಮಿಡಿಯಾ ಡಿಸೋಜ ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶದ ಅಧ್ಯಕ್ಷ ಮೇರಿ ಡಿಸೋಜ, ರಜತ ಮಹೋತ್ಸವದ ಸಂಚಾಲಕ ಎಲ್ ರೋಯ್ ಕಿರಣ್ ಕ್ರಾಸ್ತಾ, ಮಾನಸ ಸಂಸ್ಥೆಯ ಕಾರ್ಯದರ್ಶಿ ಜೊಸೇಫ್ ನೊರೊನ್ಹಾ, ಕೋಶಾಧಿಕಾರಿ ವಲೇರಿಯನ್ ಫೆರ್ನಾಂಡಿಸ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ವನಿತಾ ಶೆಟ್ಟಿಗಾರ್ ಉಪಸ್ಥಿತರಿದ್ದರು.

Similar News