ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದ ಕಾಲೇಜು ವಿದ್ಯಾರ್ಥಿಗೆ ಹಲ್ಲೆ; ಪ್ರಕರಣ ದಾಖಲು

Update: 2022-11-25 14:36 GMT

ಮಂಗಳೂರು, ನ.25: ಕಾರ್ಕಳದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಸೈಯದ್ ರಶೀಮ್ ಉಮರ್ (20) ಎಂಬಾತನಿಗೆ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸೈಯದ್ ರಶೀಮ್ ಉಮರ್‌ಗೆ ಗುರುವಾರ ಸಂಜೆ ಸುಮಾರು 4ಕ್ಕೆ ನಗರದ ನಂತೂರು ಜಂಕ್ಷನ್ ಬಳಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಬಸ್ ನಂತೂರು ತಲುಪಿದಾಗ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ 3-4 ಮಂದಿ ಅಪರಿಚಿತರು ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಲ್ಲದೆ ಬಸ್ಸಿನಿಂದ ಕೆಳಗೆ ಇಳಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News