×
Ad

ಇರಾನ್ ಪ್ರತಿಭಟನೆಯ ದಮನ: ಅಂತರಾಷ್ಟ್ರೀಯ ತನಿಖೆಗೆ ವಿಶ್ವಸಂಸ್ಥೆ ಆದೇಶ

Update: 2022-11-25 21:53 IST

ವಿಶ್ವಸಂಸ್ಥೆ, ನ.25: ಇರಾನ್ ನಲ್ಲಿ ಶಾಂತರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಸಾತ್ಮಕ ರೀತಿಯಲ್ಲಿ ದಮನಿಸಿರುವ ಆರೋಪದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಸತ್ಯಶೋಧನಾ ಆಯೋಗವನ್ನು ರಚಿಸುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಘೋಷಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ನಡೆದಿರುವ ದೌರ್ಜನ್ಯ, ನಿರ್ದಿಷ್ಟವಾಗಿ ಮಹಿಳೆಯರು ಹಾಗೂ  ಮಕ್ಕಳ ವಿರುದ್ಧದ ದೌರ್ಜನ್ಯದ ವರದಿಯನ್ನು ಖಂಡಿಸುವ ನಿರ್ಣಯವನ್ನು ಮಾನವ ಹಕ್ಕು ಸಮಿತಿ ಅಂಗೀಕರಿಸಿದೆ.

ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಜರ್ಮನಿ ಹಾಗೂ ಐಸ್ಲ್ಯಾಂಡ್ ಮಂಡಿಸಿದ ನಿರ್ಣಯವನ್ನು ಅಮೆರಿಕ ಹಾಗೂ ಏಶ್ಯಾ, ಆಫ್ರಿಕಾದ ಹಲವು ದೇಶಗಳ ಸಹಿತ 25 ಸದಸ್ಯರು ಬೆಂಬಲಿಸಿದರೆ, ಚೀನಾ, ಪಾಕಿಸ್ತಾನ, ಕ್ಯೂಬಾ, ಎರಿಟ್ರಿಯಾ, ವೆನೆಝುವೆಲಾ ಮತ್ತು ಅರ್ಮೇನಿಯಾ ದೇಶಗಳು  ವಿರೋಧಿಸಿವೆ. 16 ದೇಶಗಳು ಮತದಾನದಿಂದ ದೂರ ಉಳಿದಿವೆ. ಪ್ರತಿಭಟನಾಕಾರರ ವಿರುದ್ಧದ ದಮನ ಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಮಾನವ ಹಕ್ಕುಗಳ ಮಂಡಳಿ ಇರಾನ್ ಸರಕಾರವನ್ನು ಆಗ್ರಹಿಸಿದೆ. ಆದರೆ ಈ ನಿರ್ಣಯ ರಾಜಕೀಯ ಪ್ರೇರಿತವಾಗಿದ್ದು, ಇರಾನ್ ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಡುತ್ತಿದೆ ಎಂಬ ವಾದವನ್ನು ಧಿಕ್ಕರಿಸುವುದಾಗಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಇರಾನ್ನ ವಿಶೇಷ ಪ್ರತಿನಿಧಿ ಪ್ರತಿಕ್ರಿಯಿಸಿದ್ದಾರೆ.

ಪ್ರತಿಭಟನೆಯನ್ನು ಹಿಂಸಾತ್ಮಕ ರೀತಿಯಲ್ಲಿ ದಮನಿಸುವುದರ ವಿರುದ್ಧ ಇರಾನ್ ಮೇಲೆ ಅಂತರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ. ನಿರ್ಣಯ ಮಂಡನೆಗೂ ಮುನ್ನ ಸಭೆಯಲ್ಲಿ ಮಾತನಾಡಿದ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲಿನಾ ಬೇರ್ಬಾಕ್ ʼಎಲ್ಲಾ ದೇಶಗಳ ಸಾರ್ವಭೌಮತೆಯ ರಕ್ಷಣೆಗೆ ವಿಶ್ವಸಂಸ್ಥೆಯ ಸ್ಥಾಪನೆಯಾಗಿದೆ. ಆದರೆ ಆಡಳಿತವೊಂದು ಈ ಅಧಿಕಾರವನ್ನು ತನ್ನದೇ ಜನರ ಹಕ್ಕುಗಳ ಉಲ್ಲಂಘನೆಗೆ ಬಳಸುತ್ತಿರುವುದು ನಮ್ಮ ವಿಶ್ವಸಂಸ್ಥೆ(WHO)ಯ ಸಿದ್ಧಾಂತದ ಉಲ್ಲಂಘನೆಯಾಗಿದೆ' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ಪ್ರತಿನಿಧಿ ಖದೀಜಾ ಕರೀಮಿ ʼಮಾನವ ಹಕ್ಕುಗಳ ಬಗ್ಗೆ ಬೋಧಿಸಲು ಹಾಗೂ ಇರಾನ್ ಕುರಿತು ವಿಶ್ವಸಂಸ್ಥೆಯಲ್ಲಿ ವಿಶೇಷ ಅಧಿವೇಶನಕ್ಕೆ ಕೋರಲು ಅಮೆರಿಕ ಮತ್ತು ಯುರೋಪ್ ನೈತಿಕ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಮಾನವ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ತನ್ನ ಬಾಧ್ಯತೆಗೆ ಸಂಪೂರ್ಣ ಬದ್ಧವಾಗಿರುವ ವಿಶ್ವಸಂಸ್ಥೆಯ ಸಾರ್ವಭೌಮ ಸದಸ್ಯ ದೇಶವನ್ನು ವಿರೋಧಿಸಲು ಕೆಲವು ಸೊಕ್ಕಿನ ದೇಶಗಳು ಮಾನವ ಹಕ್ಕುಗಳ ಮಂಡಳಿಯನ್ನು ಮತ್ತೊಮ್ಮೆ ದುರುಪಯೋಗ ಪಡಿಸಿಕೊಂಡಿದೆ' ಎಂದಿದ್ದಾರೆ.

ಖಂಡನಾ ನಿರ್ಣಯದಿಂದ ಅಂತರಾಷ್ಟ್ರೀಯ ತನಿಖೆಗೆ ಆದೇಶಿಸುವ ಅಂಶವನ್ನು ರದ್ದುಗೊಳಿಸಲು ಚೀನಾ ಕಡೆಯ ಕ್ಷಣದವರೆಗೂ ಪ್ರಯತ್ನಿಸಿತು. ಸತ್ಯಶೋಧನಾ ಆಯೋಗ ರಚನೆಯಿಂದ ಸಮಸ್ಯೆ ಪರಿಹಾರಕ್ಕೆ ನೆರವಾಗುವ ಬದಲು, ಇರಾನ್ನ ಆಂತರಿಕ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಲಿದೆ ಎಂದು ಚೀನಾದ ಪ್ರತಿನಿಧಿ ಪಟ್ಟು ಹಿಡಿದರು. ಆದರೆ ಕೇವಲ 5 ದೇಶಗಳ ಬೆಂಬಲ ಮಾತ್ರ ದೊರೆತ ಕಾರಣ ಚೀನಾದ ಆಕ್ಷೇಪಣೆ ಬಿದ್ದುಹೋಯಿತು.

ಸತ್ಯಶೋಧನಾ ಆಯೋಗ ಸೆಪ್ಟಂಬರ್ 16ರಂದು ದೇಶದೆಲ್ಲೆಡೆ ಭುಗಿಲೆದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮಾನವ ಹಕ್ಕುಗಳ ವ್ಯಾಪಕ   ಉಲ್ಲಂಘನೆಯಾಗಿರುವ ಆರೋಪದ ಬಗ್ಗೆ ಸತ್ಯಶೋಧನಾ ಆಯೋಗ ಪರಿಶೀಲನೆ ನಡೆಸಲಿದ್ದು ಇದಕ್ಕೆ ಇರಾನ್ ಸಹಕರಿಸಬೇಕು. ಬಂಧನ ಕೇಂದ್ರಗಳ ಸಹಿತ ಇರಾನ್ನ ಪ್ರದೇಶಗಳಿಗೆ ಆಯೋಗದ ಸದಸ್ಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಆಯೋಗವು 2023ರ ಮಧ್ಯಭಾಗದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ.

Similar News