ನೀನಾರಿಗಾದೆಯೋ ಎಲೆ ಮಾನವಾ?

Update: 2022-11-26 10:11 GMT

ಸಸಿಗಳನ್ನು ನೆಡುವುದು ಮುಖ್ಯವಲ್ಲ; ಅವುಗಳಿಗೆ ಟ್ರೀಗಾರ್ಡ್ ಇಟ್ಟು ನೀರು ಹಾಕಿ ಬೆಳೆಸುವುದೂ ಮುಖ್ಯ. ಶಾಲಾ ಕಾಲೇಜುಗಳನ್ನು ಸ್ಥಾಪಿಸುವುದು ಮುಖ್ಯವಲ್ಲ; ಅವುಗಳನ್ನು ಸಕಲ ಸೌಲಭ್ಯಗಳಿಂದ ನೋಡಿಕೊಳ್ಳುವುದು ಮುಖ್ಯ. ಪ್ರಸಕ್ತ ಗೋವಧೆ ನಿಷೇಧ ಕಾನೂನು ಜಾರಿಗೊಳಿಸಿದ್ದು ಮುಖ್ಯವಲ್ಲ; ಅವುಗಳ ಪಾಲನೆ-ಪೋಷಣೆಯ ಗೋಶಾಲೆಗಳನ್ನು ನಿರ್ವಹಿಸುವುದು ಮುಖ್ಯ. ಆದರೆ ಕೆಲವು ಗೋಶಾಲೆಗಳು ತೀರ ಹೀನಾಯ ಸ್ಥಿತಿಯಲ್ಲಿವೆ. ಕಳೆದ ಎರಡು ವರ್ಷಗಳಲ್ಲಿ ಅಲ್ಲಿ ತಂದು ಬಿಟ್ಟ ಜೀವಗಳನ್ನು ಸಾಕಲು ಸರಕಾರ ತಿಣುಕಾಡುತ್ತಿದೆ. ಪುಣ್ಯಕೋಟಿ ದತ್ತು ಯೋಜನೆಯನ್ನು ಜಾರಿಗೊಳಿಸಿದರೂ ಸಮಸ್ಯೆ ನೀಗುತ್ತಿಲ್ಲ. ಅತ್ತ ಗೋವುಗಳಿಗೂ ಕ್ಷೇಮವಿಲ್ಲ; ಇತ್ತ ಆ ದನದ ಉಸ್ತುವಾರಿ ನೋಡಿಕೊಳ್ಳುವವರಿಗೂ ಸಂಬಳವಿಲ್ಲ. ಇದೆಲ್ಲ ಹಿಂದು ಮುಂದು ನೋಡದೆ ಗೋವಧೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಪರಿಣಾಮ. ಅತ್ತ ಈಶಾನ್ಯ ರಾಜ್ಯಗಳಲ್ಲಿ ಈ ಸಮಸ್ಯೆ ಇಲ್ಲ.

 ಯಾವಾಗ ರಾಜ್ಯ ಸರಕಾರ ಕೆಲವರ (ಶೇ.4) ಅಪೇಕ್ಷೆಯಂತೆ ಗೋವಧೆ ನಿಷೇಧ ಕಾನೂನು ಜಾರಿಗೆ ತಂದಿತೋ ಆಗಲೇ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದೆ. ವೋಟಿನ ಬೇಟೆಯ ಹುನ್ನಾರಕ್ಕೆ ಹೊರಟ ಆಳುವ ಪಕ್ಷ ಈಗ ಗೋಸಾಕಣೆ ಮಾಡಲಾರದೆ ‘ಪುಣ್ಯಕೋಟಿ ದತ್ತು ಯೋಜನೆ’ ಎಂದು ಭಿಕ್ಷೆಗೆ ಹೊರಟಿದೆ. ಹಾಗೆ ಸರಕಾರಿ ಶಾಲೆಗಳ ನಿರ್ವಹಣೆಗೂ ಭಿಕ್ಷಾಟನೆ ಆರಂಭವಾಗಿದೆ. ಯಾವಾಗ ರೈತನ ಬೆಚ್ಚನೆ ಕೊಟ್ಟಿಗೆಯಿಂದ ಅನುಪಯುಕ್ತ ಜಾನುವಾರುಗಳು ಬೀದಿಗೆ ಬಿದ್ದವೋ ಆಗಲೇ ಅತ್ತ ರೈತನ ಆರ್ಥಿಕ ಸಂಪನ್ಮೂಲವೂ ಬತ್ತಿ ಹೋಯಿತು; ಇತ್ತ ಉಸ್ತುವಾರಿಯಿಲ್ಲದೆ ದನಗಳೂ ಬಿಡಾಡಿ ಆದವು. ಈಗ ಮಂದೆ ಮಂದೆಯಾಗಿ ರೋಗ ರುಜಿನಗಳಿಗೆ ತುತ್ತಾಗುತ್ತಿವೆ. ಉದಾಹರಣೆಗೆ ಚರ್ಮಗಂಟು ರೋಗದಿಂದ ಲಕ್ಷಾಂತರ ಪಶುಗಳು ದೇಶಾದ್ಯಂತ ನರಳಿ ಸಾಯುತ್ತಿವೆ. ಆ ಮೂಕಪ್ರಾಣಿಗಳ ಶೋಕ ಕೇಳುವವರಾರು? ಅಂಟು ಜಾಢ್ಯದ ವೈರಾಣುವಿಗೆ ಸೂಕ್ತ ಔಷಧೋಪಚಾರ ಮಾಡುವವರಾರು? ಕೆಲದಿನಗಳ ಹಿಂದೆ ರೈತರಿಬ್ಬರು ನಾಲ್ಕಾರು ರೋಗ ಪೀಡಿತ ದನಗಳನ್ನು ಟ್ರಕ್ ಹತ್ತಿಸಿಕೊಂಡು ಪಶುವೈದ್ಯ ಶಾಲೆಗೆ ಹೊರಟಿದ್ದಾಗ ಅವುಗಳಿಗೆ ಪರವಾನಿಗೆ ಪತ್ರ, ಅದು ಇದು ಎಲ್ಲಿ ಎಂದು ಸ್ವಘೋಷಿತ ಗೋರಕ್ಷಕ ಪಡೆಯವರು ದಿನಗಟ್ಟಲೆ ದಾರಿಯಲ್ಲಿ ತಡೆದರು. ಆ ರೈತರು ಸಂಬಂಧಪಟ್ಟವರಿಂದ ಪರವಾನಿಗೆ ಪತ್ರ ಪಡೆದು ಪಶುವೈದ್ಯಶಾಲೆ ಮುಟ್ಟುವಷ್ಟರಲ್ಲಿ ರೋಗ ಉಲ್ಬಣಿಸಿ ಎರಡು ಹಸುಗಳು ಟ್ರಕ್ಕಿನಲ್ಲೇ ಪ್ರಾಣ ಬಿಟ್ಟವು. ಈ ಪಾಪ ಯಾರಿಗೆ ತಟ್ಟುವುದು? ದಾರಿಯ ರಾದ್ಧಾಂತ ಇಲ್ಲವಾಗಿ ತುರ್ತು ಚಿಕಿತ್ಸೆ ಪಡೆದಿದ್ದರೆ ಸಹಸ್ರಾರು ಬೆಲೆಯ ಹಸುಗಳು ಉಳಿಯುತ್ತಿದ್ದವು. ಪರಿಸ್ಥಿತಿ ಹೀಗೆ ಕೈಮೀರುತ್ತಿರುವಾಗ ಬಡ ರೈತರು ಇನ್ನಾವ ಆಶೆಯಿಂದ ದನಗಳ ಸಾಕಣೆ ಮಾಡುತ್ತಾರೆ? ಇದಕ್ಕಿಂತ ಕೂಲಿ ಕೆಲಸವೇ ಲೇಸೆಂದು ಸುಮ್ಮನಾಗುತ್ತಾರೆ.

 ಮೊದಲೆಲ್ಲ ಬರಡುಬಿದ್ದ, ಮುದಿಯಾದ ಎತ್ತು ಹಸುಗಳನ್ನು ವಿಲೇವಾರಿ ಮಾಡಿ, ಹೋರಿ ಕರುಗಳನ್ನು ಚೆನ್ನಾಗಿ ಮೇಯಿಸಿ ದನಗಳ ಜಾತ್ರೆಯಲ್ಲಿ ಮಾರಿ ಮನೆಯ ಖರ್ಚು ವೆಚ್ಚ ತೂಗಿಸಿಕೊಳ್ಳುತ್ತಿದ್ದರು. ಆಧುನಿಕ ಬೇಸಾಯಕ್ಕಂತೂ ಈಗ ಎತ್ತುಗಳೇ ಬೇಕಿಲ್ಲ. ದನಗಳ ಮಾರಾಟ ಕೊಳ್ಳಾಟ ನಿಂತುಹೋಯಿತು. ದನಗಳ ಪರಿಷೆ ಎಂಬ ಸಾಂಸ್ಕೃತಿಕ ಉತ್ಸವಗಳೇ ಕಣ್ಮರೆಯಾಗುತ್ತಿವೆ. ಕನ್ಯಾಕುಮಾರಿ, ಕಾಶಿ, ಕೈಲಾಸ ಎಂದು ಯಾತ್ರೆ ಶುರುವಾಗಿದೆ. ಹೈಬ್ರಿಡ್ ವಿದೇಶಿ ತಳಿ ಜರ್ಸಿ ಹಸುಗಳು ಹಾಲು ಕರೆವ ಯಂತ್ರಗಳಂತೆ ಬೂಸಾ ಕಲಗಚ್ಚು ತಿಂದು ಹಾಲು ಸುರಿಸುತ್ತಿವೆ. ಡೈರಿಯ ಶೀತಲ ಹಾಲು ಮಕ್ಕಳಿಗೆ ಹಲವಾರು ಬಗೆಯ ಅಲರ್ಜಿಗೆ ಕಾರಣವಾಗುತ್ತಿದೆ. ಹೀಗೆ ಗೋವಧೆ ನಿಷೇಧವು ಹಲವಾರು ಸರಪಣಿ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವುಗಳನ್ನು ಕೇಳುವವರು ಯಾರೂ ಇಲ್ಲವಾಗಿ ಬೀದಿ ಬೀದಿ ಅಲೆಯುತ್ತಿವೆ. ಉತ್ತರ ರಾಜ್ಯಗಳಲ್ಲಿ ರೈತರ ಬೆಳೆಯನ್ನು ತಿಂದು ನಾಶ ಮಾಡುವ ಬಿಡಾಡಿ ದನಗಳ ಭಯಂಕರ ಸಮಸ್ಯೆ ಬೇರೆ ಹುಟ್ಟಿಕೊಂಡಿದೆ. ಅವುಗಳನ್ನು ರೈತರು ಮುಟ್ಟುವಂತಿಲ್ಲ, ಮಾತಾಡಿಸುವಂತಿಲ್ಲ. ಅತ್ತ ದನಗಳ ಕಾಟ; ಇತ್ತ ನಕಲಿ ಗೋರಕ್ಷಕರ ಪೀಕಲಾಟ! ಅಂತೂ ರೈತರ ಪಾಡು ದನಗಳ ಪಾಡು ಒಂದೇ ಆಗಿದೆ. ದಿನಗಳೆದ ಹಾಗೆಲ್ಲ ಸಮಸ್ಯೆ ಸುತ್ತಿ ಸುತ್ತುವುದೇ ಹೊರತು ಬಿಚ್ಚಿ ಬಿಡುವುದೆಂಬ ನೆಚ್ಚು ಕಾಣದಾಗಿದೆ!

 ಗೋಶಾಲೆ ನಿರ್ವಹಣೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ವದಂತಿಗಳಿವೆ. ದನಗಳಿಗೆ ಹಾಕುವ ಹುಲ್ಲು ಮೇವನ್ನೂ ತಿನ್ನುವ ಸಚಿವ, ನೌಕರರನ್ನು ಕುರಿತು ಗೋವುಗಳು‘‘ನೀನಾರಿಗಾದೆಯೋ ಎಲೆ ಮಾನವ? ಹರಿಹರಿ ಗೋವು ನಾನು’’ ಎನ್ನುತ್ತಿವೆಯೇನೋ. ಪಶುಗಳು ಹುಲ್ಲು ನೀರು ಬೆಚ್ಚನೆ ಆಶ್ರಯ ಇಲ್ಲದೆ ಸೊರಗಿ ಸಾಯುತ್ತಿವೆ. ಇಂಥ ಕಾಯ್ದೆಯನ್ನು ಯಾವ ಪುರುಷಾರ್ಥಕ್ಕೆ ತರಬೇಕಿತ್ತು?.

ಈ ಸಂಬಂಧವಾಗಿ ಆರೆಸ್ಸೆಸ್‌ನಲ್ಲಿ 40 ವರ್ಷಗಳ ಕಾಲ ಸ್ವಯಂ ಸೇವಕರಾಗಿ ಕೆಲಸ ಮಾಡಿದ ಹನುಮೇಗೌಡ ಎಂಬುವರು ಸಂಘದ ಕಾನೂನು ಬಾಹಿರ ಅವ್ಯವಹಾರಗಳನ್ನು ನೋಡಿ ಸಹಿಸಲಾರದೆ ಹೊರಬಿದ್ದು ತಮ್ಮ ಅನುಭವಕಥನವನ್ನು ‘ಆರ್.ಎಸ್.ಎಸ್. ಕರಾಳ ಮುಖಗಳು’(2022) ಎಂಬ ಪುಸ್ತಕದಲ್ಲಿ ಹೊರಹಾಕಿದ್ದಾರೆ. ಈ ಕೃತಿಯಲ್ಲಿ ಆರೆಸ್ಸೆಸ್‌ನ ಗೋಹತ್ಯೆ ನಿಷೇಧ ಕಪಟ ಗೋಭಕ್ತಿಯ ನಾಟಕ ಎಂಬ ಅಧ್ಯಾಯದಲ್ಲಿ ದೂರಿದ್ದಾರೆ. ಅದು ಯಾಥಾರ್ಥವಾಗಿದೆ ನೋಡಿ:

ಗೋಭಕ್ತಿ ನಾಟಕ ಮಾಡುತ್ತಿರುವವರಿಗೆ ಗೋ ಸಾಕಣೆಯ ಅನುಭವ ಇಲ್ಲ. ದನ, ಹಸು, ಎಮ್ಮೆ, ಎತ್ತು ಕೋಣಗಳ ಗಂಜಲ ತೆಗೆದು, ಸಗಣಿ ಬಾಚಿ, ಅವುಗಳಿಗೆ ರೋಗ ರುಜಿನಗಳಾದಾಗ ಅವುಗಳನ್ನು ಎತ್ತಿ ಇಳಿಸಿದ ಮತ್ತು ದನ ಕಾಯ್ದ ಅನುಭವ ಇಲ್ಲವಾಗಿದೆ. ಪಂಚ ಗವ್ಯ ಕುಡಿದು ಪರಮಾನಂದ ಪಡೆಯುತ್ತೇವೆಂಬ ಭ್ರಮೆಯ ಲ್ಲಿದ್ದಾರೆ.

ಆದರೆ ಆರೆಸ್ಸೆಸ್, ಸಂಘ ಪರಿವಾರದ ಪ್ರಮುಖರು ಮತ್ತು ಬಿಜೆಪಿ ಶಾಸಕರೇ ಕಸಾಯಿ ಕಾರ್ಖಾನೆಗಳ ಮಾಲಕರಾಗಿದ್ದಾರೆ. ಗೋ ಹತ್ಯೆ ನಿಷೇಧಿಸದ ಅನ್ಯ ಪಕ್ಷಗಳ ವಿರುದ್ಧ ಧ್ವನಿ ತೆಗೆದು ಹೋರಾಟ, ಕಿರುಚಾಟ ಮಾಡಿ ಈಗ ವಿದೇಶಗಳಿಗೆ ಗೋಮಾಂಸ ರಫ್ತು ಮಾಡುತ್ತಿರುವ ಬಿಜೆಪಿಯ ನೀತಿಗೆಟ್ಟ ನಡೆ ಅನೈತಿಕವಾಗಿದೆ.

ಬಿಜೆಪಿ ಸರಕಾರದ ಗೋವಧೆ ನಿಷೇಧ ಕಾಯ್ದೆಯಿಂದ ಗೋಸಂತತಿ ವೃದ್ಧಿ ಮಾಡುವುದಕ್ಕೆ ಬದಲಾಗಿ ನಿಧಾನವಾಗಿ ನಶಿಸಿ ಹೋಗುವಂತಾಗಿದೆ. ಆದ್ದರಿಂದ ಗೋತಳಿ ವಿಜ್ಞಾನಿಗಳು, ಗೋಭಕ್ತರು, ರೈತರು, ಸಾರ್ವಜನಿಕರು ಈ ಕರಾಳ ಕಾಯ್ದೆಯನ್ನು ಸರಕಾರ ಹಿಂದೆಗೆದುಕೊಳ್ಳುವಂತೆ ಹೋರಾಟಕ್ಕಿಳಿಯದೆ ಅನ್ಯ ಮಾರ್ಗವಿಲ್ಲ. ಒಂದಾನೊಂದು ಕಾಲದಲ್ಲಿ ಭಾರತ ಗೋ ಸಂಪತ್ತಿನಿಂದ ತುಂಬಿ ತುಳುಕುತ್ತಿತ್ತು ಎಂಬುದನ್ನು ಮರೆಯದಿರಿ.

Similar News