ಮಂಗಳೂರು: ರಾಜ್ಯಮಟ್ಟದ ‘ಖಾದಿ ಉತ್ಸವ 2022’ ಉದ್ಘಾಟನೆ

Update: 2022-11-26 10:33 GMT

ಮಂಗಳೂರು, ನ. 26: ಖಾದಿ ಕೇವಲ ಬಟ್ಟೆಯಲ್ಲ. ಅದೊಂದು ದೊಡ್ಡ ಶಕ್ತಿ, ಸ್ವದೇಶಿ, ಸ್ವಾವಲಂಬಿ ತತ್ವಗಳ ಪ್ರತೀಕ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಹಯೋಗದೊಂದಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ‘ಖಾದಿ ಉತ್ಸವ 2022’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು

ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿ ಮಹತ್ವದ ಪಾತ್ರವನ್ನು ವಹಿಸಿತ್ತು. ಮಹಾತ್ಮಗಾಂಧೀಜಿಯರ ಗ್ರಾಮಸ್ವರಾಜ್ಯ,ಸ್ವದೇಶಿ ಪರಿಕಲ್ಪನೆಯ ಸಾಕಾರದಲ್ಲಿ ಖಾದಿ ವಿಶೇಷ ಸ್ಥಾನವನ್ನು ಪಡೆದಿತ್ತು ಎಂದರು. ಖಾದಿ ಉತ್ಸವವನ್ನು ಪ್ರೋತ್ಸಾಹಿಸುವ ಮೂಲಕ ಸ್ವದೇಶಿ ಮತ್ತು ಸ್ವಾವಲಂಬನೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದವರು ಕೋರಿದರು.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜು ಪ್ರಸ್ತಾವನೆಗೈದು, ರಾಜ್ಯದಲ್ಲಿ ಈಗಾಗಲೇ ಆಯೋಜಸಿರುವ ಖಾದಿ ಉತ್ಸವಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಯುವಜನರೂ ಇಷ್ಟಪಡುವಂತಹ ನಯವಾದ ಖಾದಿ ಬಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಪ್ರದರ್ಶಿಸಲಾಗುತ್ತಿದೆ. ಜನರು ಈ ಬಟ್ಟೆಗಳನ್ನು ಕೊಳ್ಳುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.

ಮಂಡಳಿಯ ಸಿಇಒ ಜೆ.ವಿ. ನಾಗರಾಜ ಸ್ವಾಗತಿಸಿ, ಖಾದಿ ಉತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪರಂಪರಾಗತ ಶೈಲಿಯ, ಪರಿಸರ ಸಹ್ಯ, ಸರಳ ಖಾದಿ ಉಡುಪುಗಳೊಂದಿಗ ಆಧುನಿ ಕತೆಯ ಮೆರಗನ್ನು ಹೊಂದಿದ ಅರಳೆ ಖಾದಿ, ಪಾಲಿವಸ್ತ್ರ ಖಾದಿ, ಉಣ್ಣೆಖಾದಿ ಹಾಗೂ ರೇಷ್ಮೆ ಖಾದಿ ಉಡುಪುಗಳು ಮತ್ತು ಉತ್ತರ ಭಾರತದ ಖಾದಿ ರೇಷ್ಮೆ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ವಿವರಿಸಿದರು.

ಮಂಡಳಿಯ ದ.ಕ. ಜಿಲ್ಲಾ ನಿರ್ದೇಶಕರಾದ ಮಾಧವ ಶೆಟ್ಟಿಗಾರ್, ,ಮಿಥುನ್ ಆರ್.ಹೆಗ್ಡೆ, ನರಸಿಂಹ ಮೂರ್ತಿ,ಶಿವಕುಮಾರ್, ಮಲ್ಲಿಕಾರ್ಜುನ ನಾಗಪ್ಪ, ಲೀಡ್‌ಬ್ಯಾಂಕ್ ಮ್ಯಾನೇಜರ್ ಪ್ರವೀಣ್, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ನಾಗಜ್ಯೋತಿ ವಿ. ನಾಯ್ಕೋ ಮೊದಲಾದವರು ಉಪಸ್ಥಿತರಿದ್ದರು.

Similar News