ಕೇಂದ್ರ ಸರಕಾರ ಸಂವಿಧಾನ ಆಶಯದಂತೆ ನೀತಿ ನಿಯಮ ರೂಪಿಸಿ ಜಾರಿಗೊಳಿಸಲಿ: ಡಾ. ಎನ್.ತಿರುಮಲೇಶ್ವರ ಭಟ್

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2022-11-26 12:26 GMT

ಉಡುಪಿ, ನ.26: ಬದಲಾದ ಸರಕಾರಗಳ ಚಿತ್ತಕ್ಕೆ ಸಮನಾಗಿ ಕ್ಷಿಪ್ರ ಬದಲಾವಣೆಗಳಾಗುವುದು ದೇಶದ ಒಟ್ಟು ಹಿತದೃಷ್ಠಿಯಿಂದ ಸಾಧುವಲ್ಲ. ಹೊಸ ಶಿಕ್ಷಣ ನೀತಿ ಜಾರಿಯಾದ ಮೇಲೆ ಅದರ ರೂಪುರೇಷೆಯ ಮೇಲೆ ಚರ್ಚೆಗಳಾಗುತ್ತಿರುವುದು ಅವಸರದ ನಿರ್ಣಯಕ್ಕೊಂದು ಉದಾಹರಣೆ. ಕೇಂದ್ರ ಸರಕಾರ ರಾಷ್ಟ್ರದ ಸಂವಿಧಾನದ ಆಶಯದಂತೆ ನೀತಿ ನಿಯಮಗಳನ್ನು ರೂಪಿಸಿ ಜಾರಿಗೊಳಿಸಬೇಕು. ಭಾಷೆಯನ್ನು ಕಲಿಯುವ ಬಗ್ಗೆ, ಬಳಸುವ ಬಗ್ಗೆ ಅತಿಯಾದ ನಿರ್ಬಂಧ ವಿಧಿಸಿದಲ್ಲಿ ಅನ್ಯ ಭಾಷಿಕರ ಹಕ್ಕುಗಳಿಗೆ ಚ್ಯುತಿ ಉಂಟಾಗುವ ಅಪಾಯಗಳಿವೆ. ಇವುಗಳ ಸಾಧಕ ಬಾಧಕಗಳನ್ನು ವಿವೇಚಿಸಬೇಕು ಎಂದು ಹಿರಿಯ ಸಾಹಿತಿ ಡಾ.ಎನ್.ತಿರುಮಲೇಶ್ವರ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಶನಿವಾರ ಆಯೋಜಿಸಲಾದ 13ನೆ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡುತಿದ್ದರು.

ಮಾತೃಭಾಷೆಯಲ್ಲೇ ಶಿಕ್ಷಣ ದೊರೆಯುವುದು ಅತ್ಯುತ್ತಮ ವ್ಯವಸ್ಥೆ. ಆದರೆ ನೂರಕ್ಕೆ ನೂರರಷ್ಟು ಈ ವ್ಯವಸ್ಥೆ ಸಾಧ್ಯವಾಗುವುದಿಲ್ಲ. ಕೆಲವು ಭಾಷೆಗಳಲ್ಲಿ ಸಂಖ್ಯೆಯ ಕಲ್ಪನೆಯೇ ಇಲ್ಲ. ಕೆಲವು ಭಾಷೆಗಳಲ್ಲಿ ಲಿಪಿಯೇ ಇಲ್ಲ. ಇಂತಹ ಸಂದರ್ಭದಲ್ಲಿ ಮಾತೃಭಾಷೆ ಬಳಕೆ ಕಾರ್ಯಸಾಧುವಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಎಲ್ಲ ದಿಕ್ಕುಗಳಿಂದ ಜ್ಞಾನವನ್ನು ಮುಕ್ತವಾಗಿ ಸ್ವೀಕರಿಸುವ ಮನೋಧರ್ಮ ಬೇಕು. ಮನಸ್ಸು ಸಂಕುಚಿತವಾದಲ್ಲಿ ಜ್ಞಾನಕ್ಕೆ ಅಲ್ಲಿ ಪ್ರವೇಶ ಇರುವುದಿಲ್ಲ. ಶಿಕ್ಷಣ ಆರಂಭ ಕಾಲದ ಅವಧಿಯಲ್ಲಿ ಎಲ್ಲ ಜ್ಞಾನವನ್ನು ಪ್ರಾದೇಶಿಕ ಭಾಷೆಯಲ್ಲಿ ಕಲಿ ಯುವುದು ಜಾಣತನ. ದೇಶದಲ್ಲಿ ಸಂವಹನಕ್ಕಾಗಿ ಹಿಂದಿ, ಅಂತಾರಾಷ್ಟ್ರೀಯ ಸಂವಹನಕ್ಕಾಗಿ ಇಂಗ್ಲಿಷ್, ಸಾಧ್ಯವಾದರೆ ಇತರ ಯುರೋಪಿಯನ್ ಭಾಷೆ ಗಳನ್ನು ಕಲಿಯುವುದು ಅಗತ್ಯ ಎಂದರು.

ಈಗಾಗಲೇ ಬಳಕೆಯಲ್ಲಿರುವ ಪರಿಚಿತ ಶಬ್ದಗಳಿಗೆ ಕನ್ನಡದ್ದೇ ಮೂಲದ ಶಬ್ದಗಳನ್ನು ಹುಡುಕುತ್ತ ಹೋದರೆ ಕನ್ನಡದ ಅಭಿವೃದ್ಧಿ ಸಾಧ್ಯವಿಲ್ಲ. ಭಾಷೆಯ ಉದ್ದೇಶ ಸಂವಹನ. ಬಳಕೆಯ ಶಬ್ದದ ಮೂಲ ಹಿಂದಿಯೋ ಉರ್ದುವೋ ಇಂಗ್ಲಿಷೋ ಪರ್ಶಿಯನ್ನೋ ಯಾವುದೇ ಆಗಿರಲಿ ಅದನ್ನು ನಾವು ಸ್ವೀಕರಿಸಬೇಕು. ಬಳಕೆಯಿಂದ ಮರೆಯಾದ ಶಬ್ದಗಳನ್ನು ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಬಳಸಿ ಅರ್ಥವನ್ನು ಕ್ಲಿಷ್ಟಪಡಿಸುವುದಕ್ಕಿಂತ ಬಳಕೆಗೆ ಬಂದ ಅನ್ಯದೇಶಿಕ, ಅನ್ಯ ಭಾಷಿಕ ಪದಗಳನ್ನು ಬಳಸಿದರೆ ತಪ್ಪಲ್ಲ ಎಂದು ಅವರು ಹೇಳಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಚಿಂತಕಿ ವೀಣಾ ಬನ್ನಂಜೆ ಮಾತನಾಡಿ, ವಿದ್ಯೆ ಮತ್ತು ಅವಿದ್ಯೆ ಎಂಬೆರಡು ಪ್ರಕಾರಗಳಲ್ಲಿ ಅವಿದ್ಯೆಯು ಅಜ್ಞಾನದ ಸಮ್ಮೋಹನವಾಗಿದೆ. ವಿದ್ಯೆ ಎಂಬುದು ಆತ್ಮ ಶೋಧನೆಯಾಗಿದ್ದು, ಆತ್ಮ ಶೋಧನೆಯಿಂದ ಮಾಡಿದ ಸಾಹಿತ್ಯ ನಿಜವಾದ ಸಾಹಿತ್ಯವಾಗಿರುತ್ತದೆ. ತತ್ವಜ್ಞಾನ, ತತ್ವಜ್ಞಾನಿಯನ್ನು ಬದಿಗಿಟ್ಟು ಯಾವುದೇ ಸಾಹಿತಿ ಮತ್ತು ಸಾಹಿತ್ಯವಿಲ್ಲ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಮಾತನಾಡಿದರು. ಉಡುಪಿ ಶಾಸಕ ಕೆ.ರಘುಪತಿ ಭಟ್, ದೇವಳದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಪೂರ್ಣಿಮಾ ಮುಖ್ಯ ಅತಿಥಿಗಳಾಗಿದ್ದರು.

ಪುಸ್ತಕ ಮಳಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರ ಪುಸ್ತಕವನ್ನು ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಬಿಡುಗಡೆಗೊಳಿಸಿದರು. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ವಳಕಾಡು ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲಾ, ಕಸಾಪ ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಕಸಪಾ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜನಿ ವಸಂತ್ ಉಪಸ್ಥಿತರಿದ್ದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ ದರು. ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ಭವಾನಿ ಮಂಟಪಕ್ಕೆ ಕರೆತರಲಾಯಿತು. ಸಮ್ಮೇಳನದಲ್ಲಿ ವಸ್ತು ಪ್ರದರ್ಶನ, ಛಾಯಾ ಚಿತ್ರಪ್ರದರ್ಶನ, ಪುಸ್ತಕ ಮಳಿಗೆ ಗಳಿದ್ದವು.

‘ಇಂದಿನ ಯುಗದಲ್ಲಿ ಇತರ ಭಾಷೆಗಳ ಪುಸ್ತಕಗಳು ನಮ್ಮ ಭಾಷೆಯಲ್ಲಿ, ನಮ್ಮ ಪುಸ್ತಕಗಳು ಇತರ ಭಾಷೆಗಳಲ್ಲಿ ಬಳಕೆಯಾಗಬೇಕೆಂದು ಬಯಸುವುದು ಸಹಜ. ಅದಕ್ಕೆ ಭಾಷಾಂತರ ಅಗತ್ಯ. ಈ ನಿಟ್ಟಿನಲ್ಲಿ ಭಾಷಾಂತರ ಕಾರರನ್ನು ತರಬೇತಿಯ ಮೂಲಕ ತಯಾರಿಸುವ ವ್ಯವಸ್ಥೆ ಆಗಬೇಕು. ಭಾಷಾಂತರಕಾರರಿಗೆ ಉತ್ತೇಜನ, ಪ್ರೋತ್ಸಾಹ, ಉದ್ಯೋಗ ದೊರೆಯಬೇಕು. ಇದರಿಂದ ವ್ಯಾಪಕ ಅನುವಾದ, ಭಾಷಾಂತರ ಯೋಜನೆಗಳ ಯಶಸ್ಸು ಸಾಧ್ಯವಾಗುತ್ತದೆ’

-ಡಾ.ಎನ್.ತಿರುಮಲೇಶ್ವರ ಭಟ್

‘ಕನ್ನಡ ಸಾಹಿತ್ಯ ಸಂವಿಧಾನದ ಆಶಯಗಳನ್ನು ಒಂದೂವರೆ ಸಾವಿರ ವರ್ಷ ಗಳಿಂದ ಪಾಲಿಸಿಕೊಂಡು ಬರುತ್ತಿದೆ. ಇದನ್ನು ಎಲ್ಲ ಕೃತಿಗಳಲ್ಲಿ ಕಾಣಬಹುದು. ಸಂವಿಧಾನದ ಆಶಯಗಳನ್ನು ರಕ್ಷಿಸುವ ಕೆಲಸವನ್ನು ಸಾಹಿತಿಗಳು ಮಾಡಿದ್ದಾರೆ.  ಇಂದು ಜಾತಿ, ಧರ್ಮದ ಹೆಸರಿನಲ್ಲಿ ಮನಸ್ಸು ಮನಸ್ಸುಗಳು ದೂರವಾಗುತ್ತಿವೆ. ಸಾಹಿತ್ಯಕ್ಕೆ ಕೇವಲ ಮನರಂಜನೆ ಮಾತ್ರ ಅಲ್ಲ, ಸಾಮಾಜಿಕ ಜವಾಬ್ದಾರಿ ಇದೆ.  ದೂರವಾಗುತ್ತಿರುವ ಮನಸ್ಸುಗಳನ್ನು ಹತ್ತಿರ ತರುವ ಪ್ರಯತ್ನ ಹಾಗೂ ಸಂವಿಧಾನದ ಆಶಯವನ್ನು ರಕ್ಷಿಸಿ, ಪ್ರತಿಯೊಬ್ಬ ಪ್ರಜೆಯೂ ಗೌರವಾನಿತ್ವವಾಗಿ  ಬದುಕುವಂತ ಹಾದಿಯನ್ನು ನಿರ್ಮಿಸುವ ಕಾರ್ಯವನ್ನು ಸಾಹಿತ್ಯ ಮಾಡಬೇಕಾಗಿದೆ’
-ಡಾ.ಗಣನಾಥ ಎಕ್ಕಾರು, ಜಾನಪದ ವಿದ್ವಾಂಸ

Similar News