ನ್ಯಾಯಾಂಗ ಜನರನ್ನು ತಲುಪಬೇಕು, ಜನರು ನ್ಯಾಯಾಲಯಗಳತ್ತ ಬರಬೇಕೆಂಬ ನಿರೀಕ್ಷೆ ಸರಿಯಲ್ಲ: ಸಿಜೆಐ ಚಂದ್ರಚೂಡ್

Update: 2022-11-26 17:57 GMT

ಹೊಸದಿಲ್ಲಿ, ನ. 26: ನ್ಯಾಯಾಂಗವು ಜನರನ್ನು ತಲುಪಬೇಕೇ ಹೊರತು ಜನರು ನ್ಯಾಯಾಂಗದತ್ತ ಬರಬೇಕೆಂದು ನಿರೀಕ್ಷಿಸಬಾರದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಧನಂಜಯ ವೈ ಚಂದ್ರಚೂಡ್ Chief Justice of India D Y Chandrachud ಶನಿವಾರ ಹೇಳಿದ್ದಾರೆ.

ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯವು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.

‘‘ನಮ್ಮಂಥ ವೈವಿಧ್ಯತೆಯ ದೇಶವೊಂದರಲ್ಲಿ, ಪ್ರತಿಯೊಬ್ಬರಿಗೂ ನ್ಯಾಯವು ಸಿಗುವಂತೆ ನೋಡಿಕೊಳ್ಳುವುದು ನ್ಯಾಯಾಂಗವು ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ಜನರ ನ್ಯಾಯದ ಹಾದಿಯನ್ನು ಸುಗಮಗೊಳಿಸಲು ಭಾರತೀಯ ನ್ಯಾಯಾಂಗವು ಹಲವಾರು ಸಂಗತಿಗಳನ್ನು ಪರಿಚಯಿಸುತ್ತಿದೆ’’ ಎಂದು ಅವರು ಹೇಳಿದರು. ಅಂಥ ಕೆಲವು ಹೊಸ ವಿಷಯಗಳ ವಿವರಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು.

‘‘ಸುಪ್ರೀಂ ಕೋರ್ಟ್ ಹೊಸದಿಲ್ಲಿಯ ತಿಲಕ್ ಮಾರ್ಗದಲ್ಲಿದೆಯಾದರೂ, ಅದು ಇಡೀ ದೇಶದ ಸುಪ್ರೀಂ ಕೋರ್ಟ್ ಆಗಿದೆ. ಈಗ ಸುಪ್ರೀಂ ಕೋರ್ಟ್‌ನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದ್ದು, ವಕೀಲರಿಗೆ ತಾವಿರುವ ಸ್ಥಳಗಳಿಂದಲೇ ವಾದಿಸಲು ಸಾಧ್ಯವಾಗಿದೆ. ಈಗ ಭಾರತದ ಮುಖ್ಯ ನ್ಯಾಯಾಧೀಶನಾಗಿರುವ ನಾನು ಮೊಕದ್ದಮೆಗಳ ವಿಚಾರಣಾ ದಿನಾಂಕ ನಿಗದಿಯಲ್ಲೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದೇನೆ’’ ಎಂದು ನ್ಯಾ. ಚಂದ್ರಚೂಡ್ ಹೇಳಿದರು.

ಜಿಲ್ಲಾ ನ್ಯಾಯಾಲಯಗಳಿಗೆ ಮೊಬೈಲ್ ಆ್ಯಪೊಂದನ್ನು ಸಿದ್ಧಪಡಿಸಲಾಗಿದ್ದು, ಭಾರತದಾದ್ಯಂತ ಇರುವ ಎಲ್ಲಾ ಜಿಲ್ಲಾ ಮಟ್ಟದ ನ್ಯಾಯಾಲಯಗಳಿಗೆ ಇದು ಸಕಾಲದಲ್ಲಿ ನೆರವು ನೀಡುತ್ತದೆ ಎಂದು ಭಾರತದ ಮುಖ್ಯ ನ್ಯಾಯಾಧೀಶರು ಹೇಳಿದರು. ಈ ಆ್ಯಪ್‌ನಲ್ಲಿ ವಿಚಾರಣೆಗೆ ಎತ್ತಿಕೊಂಡ ಪ್ರಕರಣಗಳು, ಇತ್ಯರ್ಥಗೊಂಡ ಪ್ರಕರಣಗಳು ಮತ್ತು ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿರುತ್ತವೆ. ಡಿಜಿಟಲ್ ನ್ಯಾಯಾಲಯಗಳು ನ್ಯಾಯಾಂಗದ ಹಸಿರು ಉಪಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾಯಾಂಗ ವೃತ್ತಿಯಲ್ಲಿ ದಮನಿತ ಸಮುದಾಯಗಳ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. ಭಾರತೀಯ ನ್ಯಾಯಾಲಯಗಳ ನ್ಯಾಯಶಾಸ್ತ್ರವು ದಕ್ಷಿಣ ಆಫ್ರಿಕ, ಕೆನ್ಯ, ಆಸ್ಟ್ರೇಲಿಯ, ಜಮೈಕ, ಉಗಾಂಡ, ಬಾಂಗ್ಲಾದೇಶ, ಸಿಂಗಾಪುರ, ಫಿಜಿ ಮತ್ತು ಇತರ ದೇಶಗಳ ನ್ಯಾಯಾಂಗ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿದರು.  

Similar News