ಬೆಳಕಿನ ಮಾಲಿನ್ಯದಿಂದ ಜೀವ ವ್ಯವಸ್ಥೆಗೆ ತೊಡಕಾಗುತ್ತಿದೆಯೇ?

Update: 2022-11-26 19:30 GMT

ನೀವು ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾದಂತಹ ಮೆಟ್ರೋಪಾಲಿಟಿನ್ ನಗರದಲ್ಲಿದ್ದಾಗ ರಾತ್ರಿ ಆಗಸದಲ್ಲಿ ನಕ್ಷತ್ರಗಳನ್ನು ಹುಡುಕಲು ಕಷ್ಟಪಟ್ಟಿರಬಹುದು ಅಲ್ವಾ? ಆ ಸ್ಥಳದಿಂದ ನೀವು ಎಷ್ಟೇ ಕಷ್ಟಪಟ್ಟರೂ ಬಹಳ ಎಂದರೆ ಹತ್ತಕ್ಕಿಂತ ಹೆಚ್ಚು ನಕ್ಷತ್ರಗಳನ್ನು ಕಾಣಲಾರಿರಿ. ಆಕಾಶವು ಶುಭ್ರವಾಗಿದ್ದರೂ ನಕ್ಷತ್ರಗಳನ್ನು ಹುಡುಕಲು ಕಷ್ಟವೇಕೆ? ನಿಮ್ಮ ಕಣ್ಣು ಸರಿ ಇಲ್ಲವೇ? ಅಥವಾ ನಕ್ಷತ್ರಗಳೇ ಈ ಸ್ಥಳಗಳಿಂದ ದೂರ ಸರಿದವೇ? ಎಂಬ ಪ್ರಶ್ನೆಗಳೆಲ್ಲ ಸುಳಿದಾಡುವುದು ಸಹಜ. ನಕ್ಷತ್ರಗಳು ಇದ್ದಲ್ಲೇ ಇದ್ದರೂ, ಕಣ್ಣು ಸರಿಯಾಗಿದ್ದರೂ ನಕ್ಷತ್ರಗಳು ಕಾಣದಿರಲು ಬೇರೆ ಕಾರಣವೇ ಇದೆ. ಅದೇನೆಂದು ನಮಗೆಲ್ಲರಿಗೂ ಸ್ಪಷ್ಟವಾಗಿ ಗೊತ್ತಿದೆ. ಅದೇ ಬೆಳಕಿನ ಮಾಲಿನ್ಯ. ದೊಡ್ಡ ದೊಡ್ಡ ನಗರಗಳು, ಪಟ್ಟಣಗಳು ಅಥವಾ ಕೈಗಾರಿಕಾ ಪ್ರದೇಶಗಳಿಂದ ಉಂಟಾಗುವ ಕೃತಕ ಬೆಳಕಿನ ಅವೈಜ್ಞಾನಿಕ ಅಥವಾ ಅತಿಯಾದ ಬಳಕೆಯೇ ಬೆಳಕಿನ ಮಾಲಿನ್ಯವಾಗಿದೆ. ಬಾಹ್ಯ ಮತ್ತು ಆಂತರಿಕ ಕಟ್ಟಡದ ಬೆಳಕು, ಜಾಹೀರಾತು ಫಲಕಗಳು, ವಾಣಿಜ್ಯ ಸಂಕೀರ್ಣಗಳು, ಕಚೇರಿ ಕಟ್ಟಡಗಳು, ಕಾರ್ಖಾನೆಗಳು, ಬೀದಿದೀಪಗಳು ಮತ್ತು ಕ್ರೀಡಾಂಗಣಗಳಂತಹ ಕ್ರೀಡಾ ಸ್ಥಳಗಳು ಬೆಳಕಿನ ಮಾಲಿನ್ಯದ ಮೂಲಗಳಾಗಿವೆ. ಇಂಟರ್‌ನ್ಯಾಷನಲ್ ಡಾರ್ಕ್ ಸ್ಕೈ ಅಸೋಸಿಯೇಷನ್ ಪ್ರಕಾರ ಶೇ.30ರಷ್ಟು ಕೃತಕ ಬೆಳಕು ಮಾತ್ರ ಬೆಳಕಿನ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಉಳಿದಂತೆ ಶೇ.70ರಷ್ಟು ಕೃತಕ ಬೆಳಕನ್ನು ಆಕರ್ಷಣೆಗಾಗಿ ಬಳಸಲಾಗುತ್ತದೆಯಂತೆ. ಇದು ಸಂಪೂರ್ಣವಾಗಿ ವ್ಯರ್ಥ ಬೆಳಕು ಎಂದು ಇಂಟರ್‌ನ್ಯಾಷನಲ್ ಡಾರ್ಕ್ ಸ್ಕೈ ಅಸೋಸಿಯೇಷನ್ ಅಭಿಪ್ರಾಯಪಡುತ್ತದೆ. ಭೂಮಿಯ ಮೇಲೆ ಜೀವಾಂಕುರ ಆದಾಗಿನಿಂದಲೂ ಎಲ್ಲಾ ಜೀವಿಗಳು ಹಗಲಿನ ಬೆಳಕು ಮತ್ತು ರಾತ್ರಿಯ ಕತ್ತಲೆ ಚಕ್ರಕ್ಕೆ ಹೊಂದಿಕೊಂಡಿವೆ. ಈ ವ್ಯವಸ್ಥೆಯು ಎಲ್ಲಾ ಸಸ್ಯಗಳು ಮತ್ತು ಪ್ರಾಣಿಗಳ ಡಿ.ಎನ್.ಎ.ಯಲ್ಲಿ ಎನ್ಕೋಡ್ ಆಗಿದೆ. ಆದರೆ ಅನೇಕ ಶತಮಾನಗಳವರೆಗೂ ಇದ್ದ ಕತ್ತಲೆ ಮತ್ತು ನೈಸರ್ಗಿಕ ಬೆಳಕಿನ ವ್ಯವಸ್ಥೆಯನ್ನು ಮಾನವ ಬದಲಾಯಿಸಿಕೊಳ್ಳಲು ಪ್ರಯತ್ನಿಸಿದ. ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಕತ್ತಲೆಯ ರಾತ್ರಿಯನ್ನು ಹಗಲಿನಂತೆ ಬೆಳಗಿಸುವ ಮೂಲಕ ಮಾನವರು ಈ ಚಕ್ರವನ್ನು ಆಮೂಲಾಗ್ರವಾಗಿ ಅಡ್ಡಿಪಡಿಸಿದ್ದಾರೆ.

ಸಸ್ಯಗಳು ಮತ್ತು ಪ್ರಾಣಿಗಳು ಸಂತಾನೋತ್ಪತ್ತಿ, ಪೋಷಣೆ, ನಿದ್ರೆ ಮತ್ತು ಪರಭಕ್ಷಕಗಳಿಂದ ರಕ್ಷಣೆಯಂತಹ ಜೀವನ ಸುಧಾರಿತ ನಡವಳಿಕೆಗಳನ್ನು ನಿಯಂತ್ರಿಸಲು ಭೂಮಿಯ ದೈನಂದಿನ ಬೆಳಕಿನ ಮತ್ತು ಗಾಢ ಕತ್ತಲೆಯ ಚಕ್ರವನ್ನು ಅವಲಂಬಿಸಿರುತ್ತದೆ. ರಾತ್ರಿಯಲ್ಲಿ ಸೃಷ್ಟಿಸುವ ಕೃತಕ ಬೆಳಕು ಉಭಯಚರಗಳು, ಪಕ್ಷಿಗಳು, ಸಸ್ತನಿಗಳು, ಕೀಟಗಳು ಮತ್ತು ಸಸ್ಯಗಳು ಸೇರಿದಂತೆ ಅನೇಕ ಜೀವಿಗಳ ಮೇಲೆ ನಕಾರಾತ್ಮಕ ಮತ್ತು ಮಾರಣಾಂತಿಕ ಪರಿಣಾಮಗಳನ್ನು ಬೀರುತ್ತದೆ ಎಂದು ವೈಜ್ಞಾನಿಕ ಪುರಾವೆಗಳು ಸೂಚಿಸುತ್ತವೆ. ಬೆಳಕಿನ ಮಾಲಿನ್ಯವನ್ನು ನಿಯಂತ್ರಿಸುವ ಅವಶ್ಯಕತೆ ಮತ್ತು ನಿಯಂತ್ರಣಾ ವಿಧಾನಗಳ ಕುರಿತು ಒಂದಿಷ್ಟು ಚರ್ಚಿಸೋಣ.

ಕೃತಕ ಬೆಳಕಿನ ಪರಿಣಾಮಗಳು:

ಬೆಳಕಿನ ಮಾಲಿನ್ಯವು ಇಂದು ಜಾಗತಿಕ ಸಮಸ್ಯೆಯಾಗಿದೆ. ವರ್ಲ್ಡ್ ಅಟ್ಲಾಸ್ ಆಫ್ ನೈಟ್ ಸ್ಕೈ ಬ್ರೈಟ್‌ನೆಸ್ ಸಂಸ್ಥೆಯು 2016ರಲ್ಲಿ ಸಾವಿರಾರು ಉಪಗ್ರಹ ಫೋಟೊಗಳನ್ನು ಆಧರಿಸಿ ನಕ್ಷೆಯನ್ನು ಪ್ರಕಟಿಸಿದಾಗ ಇದು ಸ್ಪಷ್ಟವಾಯಿತು. ರಾತ್ರಿಯಲ್ಲಿ ನಮ್ಮ ಭೂಗೋಳವು ಹೇಗೆ ಮತ್ತು ಎಲ್ಲಿ ಬೆಳಗುತ್ತದೆ ಎಂಬುದನ್ನು ನಕ್ಷೆ ತೋರಿಸುತ್ತದೆ. ಉತ್ತರ ಅಮೆರಿಕ, ಯುರೋಪ್, ಮಧ್ಯಪ್ರಾಚ್ಯ ಮತ್ತು ಏಶ್ಯದ ವಿಶಾಲ ಪ್ರದೇಶಗಳು ಬೆಳಕಿನಿಂದ ಹೊಳೆಯುತ್ತಿವೆ, ಆದರೆ ಭೂಮಿಯ ಸೈಬೀರಿಯಾ, ಸಹಾರಾ ಮತ್ತು ಅಮೆಝಾನ್‌ಗಳು ಮಾತ್ರ ಸಂಪೂರ್ಣ ಕತ್ತಲೆಯಲ್ಲಿವೆ. ಪ್ರಪಂಚದ ಅತೀ ಹೆಚ್ಚಿನ ಬೆಳಕಿನ ಮಾಲಿನ್ಯದ ದೇಶಗಳೆಂದರೆ ಸಿಂಗಾಪುರ, ಖತರ್ ಮತ್ತು ಕುವೈತ್.

ಇಂದು ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ ಬೆಳಕಿನ ಮಾಲಿನ್ಯದ ನೋವನ್ನು ಅನುಭವಿಸಿದ್ದೇವೆ. ಕೃತಕ ಬೆಳಕಿನ ಹೆಚ್ಚಳದಿಂದ ಮೆಲಟೋನಿನ್ ಮಟ್ಟದಲ್ಲಿ ಏರಿಳಿತವುಂಟಾಗುತ್ತದೆ. ಮೆಲಟೋನಿನ್ ಏರಿಳಿತದ ಪರಿಣಾಮವಾಗಿ ಅನವಶ್ಯಕ ಹಸಿವು, ಹಾರ್ಮೋನ್ ಉತ್ಪಾದನೆ, ದೇಹದ ಉಷ್ಣತೆ, ನಿದ್ರೆಯ ಚಕ್ರದ ಅಡಚಣೆಗಳು ಮತ್ತು ಮನಸ್ಥಿತಿ ಅಸ್ವಸ್ಥತೆಗಳನ್ನು ಒಳಗೊಂಡಂತೆ ಮಾನವನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಿದೆ ಎಂದು ಸಂಶೋಧನೆ ಸೂಚಿಸಿದೆ. ಭೂಮಿಯ ಮೇಲೆ ವಾಸಿಸುವ ಮಾನವರು ತಮ್ಮ ಡಿ.ಎನ್. ಎ.ಯಲ್ಲಿ ಪ್ರೋಗ್ರಾಂ ಮಾಡಲಾದ ನಿರ್ದಿಷ್ಟ ಸಿರ್ಕಾಡಿಯನ್ ಲಯವನ್ನು ಹೊಂದಿದ್ದಾರೆ. ಅಂದರೆ ಹಗಲಿನಲ್ಲಿ ನಿಯಮಿತ ಮಾದರಿಯ ಬೆಳಕು ಮತ್ತು ರಾತ್ರಿಯಲ್ಲಿ ಕತ್ತಲೆಯ ಅಗತ್ಯವಿರುತ್ತದೆ. ಕೃತಕ ಬೆಳಕಿನಿಂದ ಸಿರ್ಕಾಡಿಯನ್ ಲಯಗಳಿಗೆ ಅಡ್ಡಿಯಾಗುತ್ತದೆ. ಅದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆ, ಖಿನ್ನತೆ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು ಎನ್ನುತ್ತದೆ ಸಂಶೋಧನೆ.

ಬೆಳಕಿನ ಮಾಲಿನ್ಯವು ಕೇವಲ ಮಾನವನ ಆರೋಗ್ಯ ಮತ್ತು ಸ್ವಾಸ್ಥ್ಯದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತಿಲ್ಲ, ನಮ್ಮ ಪರಿಸರ ವ್ಯವಸ್ಥೆಗಳ ಮೇಲೂ ಹೆಚ್ಚು ಪ್ರಭಾವ ಬೀರುತ್ತದೆ. ಪರಿಸರದ ಮೇಲಿನ ಪ್ರಭಾವವು ಹೆಚ್ಚು ಭೀಕರವಾಗಿದೆ. ನಿದ್ರೆಯ ಅಭ್ಯಾಸಗಳು, ಯಾವಾಗ ಎಚ್ಚರಗೊಳ್ಳಬೇಕು, ಯಾವಾಗ ವಲಸೆ ಹೋಗಬೇಕು, ಯಾವಾಗ ಆಹಾರ ಹುಡುಕಬೇಕು ಮತ್ತು ಯಾವಾಗ ಸಂತಾನೋತ್ಪತ್ತಿ ಮಾಡಬೇಕು ಎಂಬುದು ಸೇರಿದಂತೆ ಸಮರ್ಥನೀಯ ಅಭ್ಯಾಸಗಳನ್ನು ನಿರ್ವಹಿಸಲು ಅನೇಕ ಪ್ರಾಣಿಗಳು ಬೆಳಕು ಮತ್ತು ಕತ್ತಲೆಯ ದೈನಂದಿನ ಚಕ್ರವನ್ನು ಅವಲಂಬಿಸಿವೆ. ಮಾನವ ಅಭಿವೃದ್ಧಿಯಿಂದಾಗಿ ಕೃತಕ ಬೆಳಕಿನ ಬಳಕೆ ಹೆಚ್ಚಾಗಿದ್ದು, ಇದು ಜೀವಿಗಳ ದೈನಂದಿನ ಚಕ್ರಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಅನೇಕ ಪಕ್ಷಿಗಳು ಆಹಾರಕ್ಕಾಗಿ ಬೇಟೆಯಾಡಲು ರಾತ್ರಿಯನ್ನು ಬಳಸುತ್ತವೆ, ಆದರೆ ಭೂದೃಶ್ಯಗಳು ಮತ್ತು ನಗರಗಳ ಹೆಚ್ಚಿದ ಕೃತಕ ಬೆಳಕು ಅವುಗಳನ್ನು ದಿಗ್ಭ್ರಮೆಗೊಳಿಸಬಹುದು, ಇದರಿಂದಾಗಿ ಅವು ಆಹಾರದ ಹಾದಿಯಲ್ಲಿ ಅಲೆದಾಡುತ್ತವೆ. ವಾಸ್ತವವಾಗಿ, ವರ್ಷಕ್ಕೆ ಲಕ್ಷಾಂತರ ಪಕ್ಷಿಗಳು ಕೃತಕ ಬೆಳಕಿನಿಂದ ಪ್ರಕಾಶಿಸಲ್ಪಟ್ಟ ಕಟ್ಟಡಗಳಿಗೆ ಢಿಕ್ಕಿ ಹೊಡೆದು ಸಾಯುತ್ತವೆ. ವಲಸೆಯ ಸಮಸ್ಯೆಗಳ ಜೊತೆಗೆ, ರಾತ್ರಿಯಲ್ಲಿ ಕೃತಕ ಬೆಳಕಿಗೆ ಒಡ್ಡಿಕೊಳ್ಳುವ ಪಕ್ಷಿಗಳ ಸಂತಾನೋತ್ಪತ್ತಿ ಚಕ್ರಗಳಲ್ಲಿ ಬದಲಾವಣೆ ಅನುಭವಿಸುತ್ತಿವೆ. ಬೆಳಕಿನ ಮಾಲಿನ್ಯದಿಂದ ಕೆಲ ಪಕ್ಷಿಗಳಲ್ಲಿ ಸಂತಾನಶಕ್ತಿ ಕುಂದುತ್ತಿರುವುದು ವರದಿಯಾಗಿವೆ. ಸಮುದ್ರ ಆಮೆಗಳು ಉಳಿವಿಗಾಗಿ ರಾತ್ರಿಯನ್ನು ಅವಲಂಬಿಸಿರುವ ಮತ್ತೊಂದು ಪ್ರಾಣಿ. ಸಾಗರದಲ್ಲಿ ವಾಸಿಸುವ ಸಮುದ್ರ ಆಮೆಗಳು ಕಡಲತೀರದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಅವು ಸಾಮಾನ್ಯವಾಗಿ ರಾತ್ರಿಯಲ್ಲಿ ಮೊಟ್ಟೆಯೊಡೆಯುತ್ತವೆ. ಬೆಳಗಿನ ಜಾವದಲ್ಲಿ, ಮರಿ ಆಮೆಗಳು ಸಮುದ್ರಕ್ಕೆ ತಮ್ಮ ಮಾರ್ಗವನ್ನು ಹುಡುಕಿಕೊಂಡು ಹೋಗಲು ಬೆಳಕಿನ ಪ್ರಭೆಯನ್ನು ಬಳಸುತ್ತವೆ. ಆದರೆ ಕೃತಕ ಬೆಳಕು ಆಮೆಗಳನ್ನು ಗೊಂದಲಕ್ಕೀಡುಮಾಡುತ್ತದೆ. ಅವು ವಿಭಿನ್ನ ದಿಕ್ಕುಗಳಲ್ಲಿ ಹೊರಡುವಂತೆ ಮಾಡುತ್ತದೆ. ಇತರ ಅಪಾಯಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತದೆ. ಫ್ಲೋರಿಡಾದಲ್ಲಿ ಕೃತಕ ಬೆಳಕಿನಿಂದ ಉಂಟಾಗುವ ಗೊಂದಲದಿಂದಾಗಿ ಪ್ರತೀ ವರ್ಷ ಲಕ್ಷಾಂತರ ಆಮೆ ಮರಿಗಳು ಸಾಯುತ್ತವೆ.

ಭೂಮಿಯ ಪರಿಸರ ವ್ಯವಸ್ಥೆಯೂ ನೈಸರ್ಗಿಕ ಬೆಳಕಿನ ಚಕ್ರಗಳ ಮೇಲೆ ಅವಲಂಬಿತವಾಗಿದೆ. ಈ ಪರಿಸರ ವ್ಯವಸ್ಥೆಗಳು ಸಾಮಾನ್ಯವಾಗಿ ತಮ್ಮ ಪರಿಸರದಲ್ಲಿನ ಬದಲಾವಣೆಗಳಿಗೆ ಸಾಕಷ್ಟು ಸಂವೇದನಾಶೀಲವಾಗಿರುವುದರಿಂದ, ಅವು ಮಾನವ ನಿರ್ಮಿತ ಬೆಳಕಿನ ಮಾಲಿನ್ಯದಿಂದ ಅಭಿವೃದ್ಧಿಪಡಿಸಲಾದ ಹೊಸ ಕೃತಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೃತಕ ಬೆಳಕು ಮಾತ್ರ ಜೀವಗಳ ಬೆಳವಣಿಗೆಯ ರಕ್ಷಣೆಯಲ್ಲಿ ನಷ್ಟವನ್ನು ಉಂಟುಮಾಡಬಹುದು. ಏಕೆಂದರೆ ವಾತಾವರಣದ ಪ್ರತಿಫಲಿತ ಬೆಳಕು ನೈಸರ್ಗಿಕ ನೇರಳಾತೀತ ಬೆಳಕಿನ ಕಿರಣಗಳು ಭೂಮಿಯನ್ನು ತಲುಪುವುದನ್ನು ತಡೆಯುತ್ತದೆ. ಇದು ನಮ್ಮ ಆಹಾರ, ಗಾಳಿ ಮತ್ತು ನೀರು ಸರಬರಾಜು ಅವಲಂಬಿಸಿರುವ ಬೆಳವಣಿಗೆ ಮತ್ತು ಕೊಳೆಯುವಿಕೆಯ ಚಕ್ರಗಳನ್ನು ಅಡ್ಡಿಪಡಿಸುತ್ತದೆ.

ಬೆಳಕಿನ ಮಾಲಿನ್ಯವು ವಾತಾವರಣದ ಮೇಲೆ ಪರಿಣಾಮ ಬೀರುವ ವಾಯು ಮಾಲಿನ್ಯಕ್ಕೂ ಕಾರಣವಾಗುತ್ತದೆ. ರಾತ್ರಿಯಲ್ಲಿ ಬೆಳಕಿನ ಪ್ರಕಾಶಮಾನಕ್ಕಾಗಿ, ದೊಡ್ಡ ಪ್ರಮಾಣದ ವಿದ್ಯುತ್ ಅನ್ನು ಬಳಸುವುದರಿಂದ, ಇದು ಹೆಚ್ಚಿನ ಮಟ್ಟದ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಮತ್ತು ಇತರ ಹಾನಿಕಾರಕ ಅನಿಲಗಳಿಗೆ ಕಾರಣವಾಗುತ್ತದೆ. ಬೆಳಕಿನ ಅತಿಯಾದ ಬಳಕೆಯು ಪಳೆಯುಳಿಕೆ ಇಂಧನಗಳ ಅತಿಯಾದ ಬಳಕೆ ಎಂದರ್ಥ. ಉದಾಹರಣೆಗೆ, ರಾತ್ರಿಯ ದೀಪಗಳಿಗೆ ವಿದ್ಯುತ್ ಅಗತ್ಯವಿರುತ್ತದೆ. ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಲುವಾಗಿ ಬೃಹತ್ ಪ್ರಮಾಣದ ಕಲ್ಲಿದ್ದಲನ್ನು ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಬಳಸಲಾಗುತ್ತದೆ. ಇದರರ್ಥ ನಾವು ಕಲ್ಲಿದ್ದಲಿನಂತಹ ನೈಸರ್ಗಿಕ ಸಂಪನ್ಮೂಲಗಳ ಸವಕಳಿಗೆ ಪರೋಕ್ಷವಾಗಿ ಕೊಡುಗೆ ನೀಡುತ್ತಿದ್ದೇವೆ. ಹೀಗೆ ಕೃತಕ ಬೆಳಕಿನಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬೆಳಕಿನ ಮಾಲಿನ್ಯಕ್ಕೆ ಪರಿಹಾರಗಳು
 ಬೆಳಕಿನ ಮಾಲಿನ್ಯವನ್ನು ಪರಿಹರಿಸಲು ಎರಡು ಮೂಲಭೂತ ವಿಧಾನಗಳಿವೆ. ಅವುಗಳೆಂದರೆ ಅನುಸರಣಾ ವಿಧಾನ ಮತ್ತು ಶಿಕ್ಷಣ. ಅನುಸರಣಾ ವಿಧಾನ ಎಂದರೆ ಅಗತ್ಯವಿದ್ದಾಗ ಮಾತ್ರ ಕೃತಕ ಬೆಳಕನ್ನು ಬಳಸುವ ಸ್ವಯಂ ಪ್ರಜ್ಞೆ. ಶಿಕ್ಷಣ ಎಂದರೆ ಕೃತಕ ಬೆಳಕನ್ನು ಬಳಸುವ ಸರಿಯಾದ ಕ್ರಮಗಳ ಬಗ್ಗೆ ಇತರರಿಗೆ ಶಿಕ್ಷಣ ನೀಡುವುದು.

ಮನೆ, ಮಾಲ್‌ಗಳು, ಕೈಗಾರಿಕಾ ಪ್ರದೇಶಗಳು, ಬೀದಿ ದೀಪಗಳು ಮತ್ತು ಇನ್ನಿತರ ಕಡೆಗಳಲ್ಲಿ ಬಳಸುವ ದೀಪಗಳ ಪ್ರಕಾರಗಳನ್ನು ಪರಿಣಾಮಕಾರಿಯಾಗಿ ಬಳಸುವುದು. ಅಂದರೆ ಅಗತ್ಯ ಇದ್ದಾಗ ಮಾತ್ರ ಬಳಸುವ ಪರಿಪಾಠ ಬೆಳೆಸಿಕೊಳ್ಳುವುದು. ಜೊತೆಗೆ ಬೀದಿದೀಪಗಳಲ್ಲಿ ಬೆಳಕು ಅನಗತ್ಯವಾಗಿ ಮೇಲ್ಮುಖವಾಗಿ ಚದುರದಂತೆ ಬೆಳಕಿನ ದೀಪಗಳಿಗೆ ಮೇಲ್ಬಾಗದಲ್ಲಿ ಕವರ್‌ಗಳನ್ನು ಅಳವಡಿಸುವುದು. ಶೀತ ದೀಪಗಳ ಬದಲಿಗೆ ಬೆಚ್ಚಗಿನ ದೀಪಗಳನ್ನು ಬಳಸುವುದು ಬೆಳಕಿನ ಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ತಂಪಾದ ಅಲ್ಪತರಂಗಾಂತರದ ಬೆಳಕು ರಾತ್ರಿಯ ದೃಷ್ಟಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಬೆಳಕಿನ ಮಾಲಿನ್ಯಕ್ಕೆ ಹೆಚ್ಚು ಕೊಡುಗೆ ನೀಡುತ್ತದೆ, ಬೆಚ್ಚಗಿನ ಬೆಳಕು ಮಾಲಿನ್ಯವನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ತಡೆಯುತ್ತದೆ.

ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೆ ಪ್ರಮಾಣೀಕೃತ ಬೆಳಕನ್ನು ಬಳಸುವುದು. ಅಂದರೆ ಇಂದು ಎಲ್ಲೆಂದರಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಕಾಶಮಾನವಾದ ಬೆಳಕನ್ನು ಬಳಸಲಾಗುತ್ತದೆ. ಸ್ಥಳ ಮತ್ತು ಅಗತ್ಯಕ್ಕನುಗುಣವಾಗಿ ಪ್ರಜ್ವಲಿಸುವಿಕೆಯ ಪ್ರಮಾಣವನ್ನು ನಿಗದಿಪಡಿಸುವುದರಿಂದ ಆಕಾಶದ ಹೊಳಪು ಮತ್ತು ಬೆಳಕಿನ ಸೋರಿಕೆಯನ್ನು ಕಡಿಮೆ ಮಾಡಬಹುದು. ಬೀದಿದೀಪಗಳಿಗೆ ಚಲನೆಯ ಸಂವೇದಕಗಳನ್ನು ಅಳವಡಿಸುವ ಮೂಲಕ ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಾಕಷ್ಟು ಅವಕಾಶಗಳಿವೆ. ಈ ಸಂದರ್ಭದಲ್ಲಿ, ಚಲನೆಯ ಸಂವೇದಕವನ್ನು ಪ್ರಚೋದಿಸಿದಾಗ ಮಾತ್ರ ಬೆಳಕನ್ನು ಆನ್ ಮಾಡಲಾಗುತ್ತದೆ. ಆದ್ದರಿಂದ ಇದು ಬಹಳಷ್ಟು ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತದೆ. ಮಾನವರ ಅಥವಾ ವಾಹನಗಳ ಸಂಚಾರ ಇದ್ದಾಗ ಮಾತ್ರ ಬೆಳಕಿನ ದೀಪಗಳು ಹೊತ್ತಿಕೊಳ್ಳುವುದರಿಂದ ಕೆಲವೇ ಸಂದರ್ಭಗಳಲ್ಲಿ ಮಾತ್ರ ಆನ್ ಆಗುವುದರಿಂದ, ಬೆಳಕಿನ ಮಾಲಿನ್ಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಬೆಳಕಿನ ಮಾಲಿನ್ಯಕ್ಕೆ ಮತ್ತೊಂದು ಪರಿಹಾರವೆಂದರೆ ಅಗತ್ಯ ಇಲ್ಲದಿದ್ದಾಗ ಲೈಟ್‌ಗಳನ್ನು ಆಫ್ ಮಾಡುವುದು ಆಗಿದೆ. ಶಕ್ತಿಯನ್ನು ಉಳಿಸಲು ಮತ್ತು ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಾಧ್ಯವಾದಷ್ಟು ಹೆಚ್ಚಾಗಿ ದೀಪಗಳನ್ನು ಆಫ್ ಮಾಡುವ ಪ್ರಾಮುಖ್ಯತೆಯನ್ನು ಹೆಚ್ಚು ಜನರು ಅರ್ಥಮಾಡಿಕೊಳ್ಳಬೇಕಾಗಿದೆ. ಇದರಿಂದ ವೇಗವಾಗಿ ಬದಲಾವಣೆಯನ್ನು ಕಾಣಬಹುದು. ಬೆಳಕಿನ ಮಾಲಿನ್ಯದ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು ಇದು ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.

ಬೆಳಕಿನ ಮಾಲಿನ್ಯವನ್ನು ಎದುರಿಸಲು ಶಿಕ್ಷಣವೂ ಮುಖ್ಯವಾಗಿದೆ. ಕೃತಕ ಬೆಳಕಿನ ಅವಾಂತರಗಳ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡುವುದು, ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ತಿಳುವಳಿಕೆ ಮೂಡಿಸುವುದು ಸೇರಿದಂತೆ ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುವ ಅಗತ್ಯವಿದೆ. ಇದೆಲ್ಲವೂ ಬೆಳಕಿನ ಮಾಲಿನ್ಯದ ಸಮಸ್ಯೆಯನ್ನು ತಗ್ಗಿಸಲು ಉತ್ತಮ ಪರಿಣಾಮ ಬೀರುತ್ತದೆ ಮತ್ತು ನಾವು ಪ್ರಸ್ತುತ ಎದುರಿಸುತ್ತಿರುವ ಅನೇಕ ಜಾಗತಿಕ ಸಮಸ್ಯೆಗಳನ್ನು ಸಹ ನಿಭಾಯಿಸುತ್ತದೆ. ಪರಿಹಾರಗಳನ್ನು ಏಕೆ ವೇಗವಾಗಿ ಜಾರಿಗೆ ತರಲಾಗುತ್ತಿಲ್ಲ?

ಕಾಲಾಂತರಗಳಿಂದ ಬಂದಿರುವ ಕೆಲವು ಅಭ್ಯಾಸಗಳನ್ನು ಬದಲಿಸುವುದು ಕಷ್ಟ. ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಮರುವಿನ್ಯಾಸಗೊಳಿಸಲು ಇಚ್ಛಿಸಿದ ಕೃತಕ ಬೆಳಕಿನ ಅಭ್ಯಾಸಗಳನ್ನು ಬದಲಿಸುವುದು ಕಷ್ಟಕರವಾಗಿದೆ. ಇಂತಹ ಅಭ್ಯಾಸಗಳನ್ನು ದಿಢೀರೆಂದು ಬದಲಿಸಲು ಆಗುವುದಿಲ್ಲ. ಜನರು ಮತ್ತು ಸರಕಾರಗಳು ಬೆಳಕಿನ ಮಾಲಿನ್ಯದ ಪರಿಣಾಮಗಳನ್ನು ಅರ್ಥೈಸಿಕೊಂಡು ನಿಧಾನವಾಗಿ ಕೆಲವು ಬದಲಾವಣೆಗಳನ್ನು ತರಲು ಸಿದ್ಧರಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಬೆಳಕಿನ ಮಾಲಿನ್ಯವು ಹೆಚ್ಚು ಗಮನ ಸೆಳೆಯುತ್ತಿದೆ. ಅದಕ್ಕಾಗಿ ಶಿಕ್ಷಣ ಮತ್ತು ಅರಿವು ಸುಧಾರಿಸಲು ಮತ್ತು ಬೆಳಕಿನ ಮಾಲಿನ್ಯವನ್ನು ಕಡಿಮೆ ಮಾಡುವ ಪ್ರಯತ್ನಗಳು ಅಲ್ಲಲ್ಲಿ ಬೆಳಕು ಕಂಡುಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಇಂತಹ ಪ್ರಯತ್ನಗಳು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ.

Similar News