ಮಹಿಳೆಯರ ಉಡುಪಿನ ಬಗ್ಗೆ ರಾಮ್‌ದೇವ್ ಹೇಳಿಕೆ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ, ಡಿಸಿಡಬ್ಲ್ಯು ಮುಖ್ಯಸ್ಥೆ ಖಂಡನೆ

Update: 2022-11-27 17:58 GMT

ಹೊಸದಿಲ್ಲಿ, ನ. 27:  ಮಹಾರಾಷ್ಟ್ರದ ಠಾಣೆಯಲ್ಲಿ ನಡೆದ ಯೋಗ ಶಿಬಿರದಲ್ಲಿ ಯೋಗ ಗುರು ಹಾಗೂ ಉದ್ಯಮಿ ರಾಮ್ ದೇವ್ ಮಹಿಳೆಯರ  ಉಡುಪಿನ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ತೃಣ ಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಹಾಗೂ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಖಂಡಿಸಿದ್ದಾರೆ. 

ಠಾಣೆಯ ಯೋಗ ಶಿಬಿರದಲ್ಲಿ ರಾಮ್‌ದೇವ್, ‘‘ನೀವು ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತೀರಿ, ನೀವು ಸಲ್ವಾರ್‌ನಲ್ಲಿ ಅಮೃತಾಜಿ ಅವರಂತೆ ಸುಂದರವಾಗಿ ಕಾಣುತ್ತೀರಿ. ನೀವು ನನ್ನಂತೆ ಏನನ್ನೂ ಧರಿಸದೇ ಇದ್ದರೂ   ಸುಂದರವಾಗಿ ಕಾಣುತ್ತೀರಿ’’ ಎಂದು ಹೇಳಿದ್ದರು. 

ರಾಮ್ ದೇವ್ ಮಹಿಳೆಯರ ಉಡುಪು ಧರಿಸಿ ಪರಾರಿಯಾಗಲು ಪ್ರಯತ್ನಿಸುತ್ತಿರುವ ಸಂದರ್ಭ ನಾಟಕೀಯ ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ 2011ರ ಘಟನೆಯನ್ನು ಉಲ್ಲೇಖಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ರಾಮ್ ದೇವ್ ಅವರನ್ನು ಈ ಹೇಳಿಕೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 
‘‘ರಾಮಲೀಲಾ ಮೈದಾನದಿಂದ ಮಹಿಳೆಯರ ಉಡುಪು ಧರಿಸಿ ಪತಂಜಲಿ ಬಾಬಾ ಯಾಕೆ ಪರಾರಿಯಾಗಲು ಪ್ರಯತ್ನಿಸಿದರು ಎಂದು ನನಗೆ ಈಗ ಅರ್ಥವಾಯಿತು’’ ಎಂದು ಅವರು ಹೇಳಿದ್ದಾರೆ. 

ರಾಮ್‌ದೇವ್ ಹೇಳಿಕೆಯನ್ನು ಶುಕ್ರವಾರ ಖಂಡಿಸಿರುವ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಲಿವಾಲ್, ಮಹಿಳೆಯರಿಗೆ ಅವಮಾನ ಮಾಡಿರುವುದಕ್ಕೆ ಯೋಗ ಗುರು-ಉದ್ಯಮಿ ಕ್ಷಮೆ ಯಾಚಿಸಬೇಕು ಎಂದಿದ್ದಾರೆ. 

‘‘ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯ ಪತ್ನಿಯ ಎದುರು ಸ್ವಾಮಿ ರಾಮ್ ದೇವ್ ನೀಡಿದ ಹೇಳಿಕೆ ಅಸಭ್ಯ ಹಾಗೂ ಖಂಡನಾರ್ಹ. ಅವರ ಹೇಳಿಕೆಯಿಂದ ಎಲ್ಲ ಮಹಿಳೆಯರಿಂಗ ನೋವಾಗಿದೆ. ಈ ಹೇಳಿಕೆಗೆ ಬಾಬಾ ರಾಮ್ ದೇವ್ ಅವರು ದೇಶದ ಕ್ಷಮೆ ಯಾಚಿಸಬೇಕು’’ ಎಂದು ಅವರು ಹೇಳಿದ್ದಾರೆ.

Similar News