ಫಿಫಾ ವಿಶ್ವಕಪ್: ಕ್ರಾಮರಿಕ್ ಅವಳಿ ಗೋಲು, ಕ್ರೊಯೇಶಿಯಕ್ಕೆ ಭರ್ಜರಿ ಜಯ

Update: 2022-11-27 18:08 GMT

 ದೋಹಾ, ನ.27: ಫಿಫಾ ವಿಶ್ವಕಪ್‌ನ ಗ್ರೂಪ್ ‘ಎಫ್’ ಪಂದ್ಯದಲ್ಲಿ ಕ್ರೊಯೇಶಿಯ ತಂಡ ಕೆನಡ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿದೆ.

  ರವಿವಾರ ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ರೊಯೇಶಿಯ ಪರ ಆ್ಯಂಡ್ರೆಜ್ ಕ್ರಾಮರಿಕ್ 36ನೇ ಹಾಗೂ 70ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದ್ದಾರೆ. 44ನೇ ನಿಮಿಷದಲ್ಲಿ ಮಾರ್ಕೊ ಲಿವಾಜಾ ಗೋಲು ದಾಖಲಿಸಿದರು.

ಕೆನಡ ತಂಡ 2ನೇ ನಿಮಿಷದಲ್ಲಿ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಗೋಲು ಗಳಿಸಿ ಆರಂಭಿಕ ಮುನ್ನಡೆ ಪಡೆಯಿತ್ತು. ಅಲ್ಫೊನ್ಸೊ ಡೇವಿಸ್ ಕ್ರೊಯೇಶಿಯದ ಗೋಲ್‌ಕೀಪರ್ ಅನ್ನು ವಂಚಿಸಿ ವಿಶ್ವಕಪ್‌ನಲ್ಲಿ ಕೆನಡ ಪರ ಗೋಲು ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಕೆನಡ 2ನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದೆ. 1986ರಲ್ಲಿ ಕೊನೆಯ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. ಆಗ ಗ್ರೂಪ್ ಹಂತದಲ್ಲೆ ನಿರ್ಗಮಿಸಿತ್ತು.

ಕೆನಡ ಆರಂಭದಲ್ಲೇ ಮುನ್ನಡೆಯನ್ನು ಪಡೆದರೂ ಅದನ್ನು ಉಳಿಸಿಕೊಳ್ಳಲಿಲ್ಲ. 36ನೇ ನಿಮಿಷದಲ್ಲಿ ಗೋಲು ಗಳಿಸಿದ ಕ್ರಾಮರಿಕ್ ಸ್ಕೋರನ್ನು ಸಮಬಲಗೊಳಿಸಿದರು. ಮಾರ್ಕೊ ಲಿವಾಜಾ 44ನೇ ನಿಮಿಷದಲ್ಲಿ ಮುನ್ನಡೆಯನ್ನು ಹೆಚ್ಚಿಸಿದರು. ಕ್ರೊಯೇಶಿಯ ಮೊದಲಾರ್ಧದ ಅಂತ್ಯಕ್ಕೆ 2-1 ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಮತ್ತೊಂದು ಗೋಲು ಗಳಿಸಿದ ಕ್ರಾಮರಿಕ್ ತಂಡದ ಮುನ್ನಡೆ ಹೆಚ್ಚಿಸಿದರು. ಲಾವ್ರೊ ಮಜೆರ್ ಹೆಚ್ಚುವರಿ ಸಮಯದಲ್ಲಿ(90+4)ಗೋಲು ಗಳಿಸಿ ಕ್ರೊಯೇಶಿಯಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ 3 ಅಂಕ ಗಳಿಸಿದ ಕ್ರೊಯೇಶಿಯ ಎಫ್ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಕೆನಡ ಸತತ 2ನೇ ಪಂದ್ಯವನ್ನು ಸೋತು ಕೊನೆಯ ಸ್ಥಾನದಲ್ಲಿದೆ.
 

Similar News