ಗೆಲ್ಲಬಲ್ಲ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಹುಡುಕಾಟ: ವರುಣಾ ಕರೆಯುವುದೆ? ಕೋಲಾರ ಕೈಹಿಡಿಯುವುದೆ?

Update: 2022-11-28 04:41 GMT

ಬಾದಮಿಯಲ್ಲಿ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಸ್ಪರ್ಧಿಸದೇ ಇರುವ ಸಂದರ್ಭದಲ್ಲಿ ಬಿಜೆಪಿಗೆ ಒಳಜಗಳವೇ ಕಂಟಕವಾಗುವ ಸಾಧ್ಯತೆ ಹೆಚ್ಚು. ಮಮದಾಪೂರ ಹಾಗೂ ಪಟ್ಟಣಶೆಟ್ಟಿ ಯಾರಿಗೇ ಟಿಕೆಟ್ ಕೊಟ್ಟರೂ ಒಳಜಗಳ ತಪ್ಪಿದ್ದಲ್ಲ. ಬಿಜೆಪಿಯ ಮಹಾಂತೇಶ ಮಮದಾಫೂರ ಪಂಚಮಸಾಲಿಯಾದರೆ, ಎಂ.ಕೆ. ಪಟ್ಟಣಶೆಟ್ಟಿ ಪಂಚಮಸಾಲಿ ಬಣಜಿಗ ಪಂಗಡದವರು. ಜೆಡಿಎಸ್‌ನ ಹನುಮಂತ ಮಾವಿನಮರದ ಅವರೂ ಪಂಚಮಸಾಲಿ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಪಂಚಮಸಾಲಿ ಮತಗಳ ವಿಭಜನೆ ಆಗುವುದು ಪಕ್ಕಾ. ಮಾವಿನಮರದ ಸ್ಪರ್ಧೆಯಿಂದ ಬಿಜೆಪಿಗೆ ಒಳ ಹೊಡೆತ ಹೆಚ್ಚೆನ್ನಲಾಗುತ್ತಿದೆ. ಇದು ನೇರವಾಗಿ ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸಲಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ರಾಜ್ಯ ರಾಜಕೀಯ ವಲಯದಲ್ಲಿನ ದೊಡ್ಡ ಕುತೂಹಲವಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೈಹಿಡಿದಿದ್ದ ಬಾದಾಮಿಯಿಂದ ದೂರ ಉಳಿದರೆ ಮುಂದಿನ ಆಯ್ಕೆಗಳೇನು? ಸಿದ್ದರಾಮಯ್ಯ ಸ್ಪರ್ಧಿಸದ ಬಾದಾಮಿ ಅಖಾಡ ಹೇಗಿರಬಹುದು?

ಸಿದ್ದರಾಮಯ್ಯ 2018ರಲ್ಲಿ ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಸೋಲುವ ಸುಳಿವನ್ನು ಮೊದಲೇ ಗ್ರಹಿಸಿ, ರಾಜಕೀಯ ರಕ್ಷಣೆಗಾಗಿ ಬಾದಾಮಿ ಕ್ಷೇತ್ರ ದಿಂದಲೂ ಕಣಕ್ಕಿಳಿದಿದ್ದರು. ಯಾವ ವಿಧಾನಸಭಾ ಕ್ಷೇತ್ರ 1983ರಲ್ಲಿ ಸಿದ್ದರಾಮಯ್ಯ ಅವರ ಮೊದಲ ಗೆಲುವನ್ನು ಬರೆದಿತ್ತೋ ಅದೇ ಕ್ಷೇತ್ರ 35 ವರ್ಷಗಳ ಬಳಿಕ ಅವರು ಅಂದುಕೊಂಡಂತೆ ಸೋಲುಣಿಸಿತ್ತು. ಆ ಹೊತ್ತಲ್ಲಿ ಅವರ ಕೈಹಿಡಿದದ್ದು ಅವರು ನಂಬಿ ಸ್ಪರ್ಧಿಸಿದ್ದ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ. ಮೈಸೂರಿನ ಸಿದ್ದರಾಮಯ್ಯನ ವರನ್ನು ಬಾದಾಮಿಯ ಮಂದಿ ಉತ್ತರ ಕರ್ನಾಟಕದ ಆತ್ಮೀಯತೆ ಯಿಂದ ನೋಡಿದರು ಮತ್ತು ನೋಡಿಕೊಂಡರು. ಹಾಗಾಗಿ ಅವರು ಮತ್ತೆ ವಿಧಾನಸಭೆ ಪ್ರವೇಶಿಸಿದರು. ಈಗ ಮತ್ತೆ ಸಿದ್ದರಾಮಯ್ಯ ಕ್ಷೇತ್ರ ಬದಲಿಸುವ ಆಲೋಚನೆಯಲ್ಲಿದ್ದಾರೆ.

ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಔಪಚಾರಿಕತೆಯನ್ನು ಪೂರ್ಣ ಗೊಳಿಸಿದ್ದಾರೆ. ಹೈಕಮಾಂಡ್ ಸೂಚಿಸುವ ಕ್ಷೇತ್ರ ಎಂದಷ್ಟೇ ಉಲ್ಲೇಖಿಸಿರುವ ಅವರು, ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಮೈಸೂರಿನ ವರುಣಾ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ಧ ಎಂದು ಪುತ್ರ ಯತೀಂದ್ರ ಈಗಾಗಲೇ ಹೇಳಿದ್ದಾರೆ. ಆದರೆ ಅವರು ಕೋಲಾರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚು ಎಂಬ ಸುದ್ದಿಯೂ ಇದೆ. ಈಗಾಗಲೇ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರು ಅಲ್ಲಿಂದಲೇ ಸ್ಪರ್ಧಿಸಲು ಬಲವಾಗಿ ಆಗ್ರಹಿಸಿದ್ದಾರೆ. ಅಲ್ಲಿಗೆ ಸಿದ್ದರಾಮಯ್ಯ ಒಂದು ಸುತ್ತು ಪ್ರವಾಸವೂ ಹೋಗಿ ಬಂದಿದ್ದಾರೆ. ಕೋಲಾರದಲ್ಲಿ ಪ್ರಬಲವಾಗುತ್ತಿರುವ ಜೆಡಿಎಸ್‌ನ ನೆಲೆ ತಪ್ಪಿಸುವ ತಂತ್ರಗಾರಿಕೆಯೂ ಕಾಂಗ್ರೆಸ್‌ನಲ್ಲಿ ಇದೆಯೆನ್ನಲಾಗಿದೆ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ತಾನು ಕಣಕ್ಕಿಳಿಯುವುದಿಲ್ಲ ಎಂದು ಜೆಡಿಎಸ್‌ನ ಶ್ರೀನಿವಾಸಗೌಡ ಹೇಳುತ್ತಿದ್ದಾರೆನ್ನಲಾಗಿದೆ. ಕೋಲಾರ ಕ್ಷೇತ್ರದಲ್ಲಿ ಜಾತಿ ಪ್ರಾಬಲ್ಯವನ್ನು ನೋಡುವುದಾದರೆ, ಮುಸ್ಲಿಮ್, ಪರಿಶಿಷ್ಟ ಜಾತಿ ಹಾಗೂ ಒಕ್ಕಲಿಗ ಮತಗಳು ಇಲ್ಲಿ ನಿರ್ಣಾಯಕವಾಗಿವೆ. ಸಿದ್ದರಾಮಯ್ಯ ಅವರಿಗೆ ಇದು ವರವಾಗಬಹುದು ಎಂಬ ಲೆಕ್ಕಾಚಾರವಿದೆ.

ಕಡೇ ಕ್ಷಣದಲ್ಲಿ ಅವರು ವರುಣಾದಿಂದಲೇ ಸ್ಪರ್ಧಿಸುವುದಕ್ಕೆ ಮುಂದಾದರೂ ಅಚ್ಚರಿಯಿಲ್ಲ. ಹೊಸ ವಿಧಾನಸಭಾ ಕ್ಷೇತ್ರವಾದಾಗ 2008ರಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮೂಲಕ ಗಮನ ಸೆಳೆದಿದ್ದ ವರುಣಾ ಕ್ಷೇತ್ರ ಅವರಿಗೆ ಭರ್ಜರಿ ಜಯವನ್ನು ತಂದುಕೊಟ್ಟಿತ್ತು. 2013 ರಲ್ಲಿಯೂ ಅವರು ಅಲ್ಲಿಂದಲೇ ಸ್ಪರ್ಧಿಸಿ ಇನ್ನೂ ಅಧಿಕ ಮತಗಳ ಅಂತರದೊಂದಿಗೆ ಗೆದ್ದಿದ್ದರು.

36 ಗ್ರಾಮ ಪಂಚಾಯತ್, 26 ತಾಲೂಕು ಪಂಚಾಯತ್ ಮತ್ತು 6 ಜಿಲ್ಲಾ ಪಂಚಾಯತ್‌ಗಳನ್ನು ಒಳಗೊಂಡಿರುವ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ 2008ರಲ್ಲಿ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಲ್.ರೇವಣಸಿದ್ದಯ್ಯ ವಿರುದ್ಧ 18,848 ಮತಗಳ ಅಂತರದಿಂದ ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಈ ಗೆಲುವಿನ ಅಂತರ ಇನ್ನೂ ಹೆಚ್ಚಾಗಿತ್ತು. ಹತ್ತಿರ ಹತ್ತಿರ 30 ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. ಇಂಥ ಗೆಲುವಿನ ಹಿನ್ನೆಲೆಯೇ ಮತ್ತೊಮ್ಮೆ ಅವರು ವರುಣಾದಿಂದಲೇ ಸ್ಪರ್ಧಿಸುವ ಮನಸ್ಸು ಮಾಡಲು ಕಾರಣವಾದರೂ ಆಗಬಹುದು.

ಸಿದ್ದರಾಮಯ್ಯ ಅವರನ್ನು ಕಳೆದ ಚುನಾವಣೆಯಲ್ಲಿ ಕೈಹಿಡಿದಿದ್ದ ಬಾದಾಮಿ ಕ್ಷೇತ್ರದ ಅಖಾಡ, ಅವರು ಸ್ಪರ್ಧಿಸದ ಈ ಸಲದ ಚುನಾವಣೆಯಲ್ಲಿ ಹೇಗಿರಲಿದೆ?

ಬಾದಾಮಿ ಕ್ಷೇತ್ರದಲ್ಲಿ ಕುರುಬರು, ಮುಸ್ಲಿಮ್, ಲಿಂಗಾಯತ ಹಾಗೂ ವಾಲ್ಮೀಕಿ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಅಭಿವೃದ್ಧಿ ವಿಚಾರದಲ್ಲಿ ಈ ಅವಧಿಯಲ್ಲಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಹಣ ತಂದು ಕೆಲಸ ಮಾಡಿರುವುದು ಎಲ್ಲರ ಕಣ್ಣಿಗೂ ಕಾಣಿಸುತ್ತದೆ. ಸಿದ್ದರಾಮಯ್ಯ ಈ ಕ್ಷೇತ್ರಕ್ಕಾಗಿ ಕಡಿಮೆ ಅವಧಿಯಲ್ಲಿಯೇ ಜನಪರ ಕೆಲಸ ಮಾಡಿರುವ ಗುರುತುಗಳು ಇಲ್ಲಿವೆ.

2018ರಲ್ಲಿ ಸಿದ್ದರಾಮಯ್ಯಗಾಗಿ ಈ ಕ್ಷೇತ್ರ ವನ್ನು ಬಿಟ್ಟುಕೊಟ್ಟವರು 5 ಬಾರಿ ಶಾಸಕರಾಗಿದ್ದ ಚಿಮ್ಮನಕಟ್ಟಿ. ಅವರ ತ್ಯಾಗ ವ್ಯರ್ಥವಾಗಲಿಲ್ಲ. ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರ ಕೈಬಿಟ್ಟರೂ ಬಾದಾಮಿ ಗೆಲ್ಲಿಸಿತು. ಚಿಮ್ಮನಕಟ್ಟಿ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕಾಗಿ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ಇಲ್ಲವೆ ಪಕ್ಷದಲ್ಲಿ ಉತ್ತಮ ಹುದ್ದೆ ಕೊಡಿಸುವ ಭರವಸೆ ನೀಡಲಾಗಿತ್ತು. ಆದರೆ ಅದು ಆಗಲಿಲ್ಲ. ಈ ಬಗ್ಗೆ ಚಿಮ್ಮನಕಟ್ಟಿಗೆ ಬೇಸರವಿರುವುದು ನಿಜ. ಸಿದ್ದರಾಮಯ್ಯನವರಿಗೆ ನನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ನನ್ನ ರಾಜಕೀಯ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಮುಂದಿನ ಸಲ ನಾನು ಬಿಟ್ಟುಕೊಡುವುದಿಲ್ಲ ಎಂದು ಚಿಮ್ಮನಕಟ್ಟಿ 2021ರ ಡಿಸೆಂಬರ್‌ನಲ್ಲಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಇದು ಸಿದ್ದರಾಮಯ್ಯ ಈ ಕ್ಷೇತ್ರದಿಂದ ಹಿಂದೆ ಸರಿಯುವುದಕ್ಕೆ ಒಂದು ಪ್ರಬಲ ಕಾರಣವೆನ್ನಲಾಗುತ್ತಿದೆ. ರಾಜಕೀಯ ವಾಗಿ ಚಿಮ್ಮನಕಟ್ಟಿಯನ್ನು ಸಿದ್ದರಾಮಯ್ಯ ಮುಗಿಸಿಬಿಟ್ಟರು ಎಂಬ ಹಣೆಪಟ್ಟಿ ಬೇಡ ಎಂಬ ಕಾರಣದಿಂದ ಬೇರೆ ಕ್ಷೇತ್ರ ಹುಡುಕಿಕೊಳ್ಳುವ ಅನಿವಾರ್ಯತೆ ಅವರಿಗೆ ಎದುರಾದಂತಿದೆ.

ಈ ಬಾರಿ ಫಲಿತಾಂಶದಲ್ಲಿ ಬಾದಾಮಿಯಲ್ಲಿ 2013ರ ಸನ್ನಿವೇಶವೇ ಮರುಕಳಿಸಬಹುದು ಎನ್ನಲಾಗುತ್ತಿದೆ. ಏಕೆಂದರೆ, ಈ ಸಲದ ಕಣದಲ್ಲಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ನಂತರದ ಸ್ಥಾನದಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಅವರ ಅನಾರೋಗ್ಯ ಕಾರಣದಿಂದ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರ ಹೆಸರು ಕೂಡ ಕೇಳಿಬರುತ್ತಿದೆ. ಇದರ ನಡುವೆ ಕುರುಬ ಸಮುದಾಯದ ಮಹೇಶ ಹೊಸಗೌಡರ ಕೂಡ ಈಗಾಗಲೇ ಅರ್ಜಿ ಹಾಕಿದ್ದು, ರೇಸ್‌ನಲ್ಲಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ಗೆ ಕುರುಬ, ಮುಸ್ಲಿಮ್ ಮತ್ತು ಇತರ ಹಿಂದುಳಿದ ವರ್ಗಗಳ ಮತಗಳು ಗಟ್ಟಿ ಯಾಗಿವೆ. ಆದರೆ, ಸ್ಪರ್ಧಾ ಕಣದಲ್ಲಿರುವ ವ್ಯಕ್ತಿ ಯಾರೆಂಬುದರ ಮೇಲೆಯೂ ಈ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ.

ಅತಿಥಿ ಅಭ್ಯರ್ಥಿಯಾಗಿ ಹೋದ ಸಲ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಶ್ರೀರಾಮುಲು ಕೂಡ ಸ್ಪರ್ಧೆ ಮಾಡುವ ಸಾಧ್ಯತೆ ಇಲ್ಲವೆಂದೇ ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲೆಂದೇ ಶ್ರೀರಾಮುಲು ಅವರನ್ನು ಕಣಕ್ಕಿಳಿಸಲಾಗಿತ್ತು ಎನ್ನುವುದು ಬಿಟ್ಟರೆ, ಅವರು ಇಲ್ಲಿಯೇ ರಾಜಕೀಯ ನೆಲೆ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದು ಇಲ್ಲಿಯವರದೇ ಮಾತು. ಅಲ್ಲದೆ ಸ್ಪರ್ಧಿಸಲು ಶ್ರೀರಾಮುಲು ಬಯಸಿದ್ದರೂ ಪಕ್ಷದವರ ಸಮ್ಮತಿಯೇ ಇಲ್ಲ ಎಂದೂ ಹೇಳಲಾಗುತ್ತಿದೆ. ಶ್ರೀರಾಮುಲು ವಿರುದ್ಧ ಪಕ್ಷದವರೇ ತಿರುಗಿಬಿದ್ದಿದ್ದಾರೆ ಎಂಬ ಮಾತು ಕೂಡ ಬಿಜೆಪಿ ತಾಲೂಕು ವಲಯದಲ್ಲಿ ಇದೆ.

ಶ್ರೀರಾಮುಲು ಬಾದಾಮಿಗೆ ಬೇಡ ಎಂದು ಬಿಜೆಪಿ ನಿರ್ಧರಿಸಿದರೆ, ಮಹಾಂತೇಶ ಮಮದಾಪುರ ಹಾಗೂ ಎಂ.ಕೆ.ಪಟ್ಟಣಶೆಟ್ಟಿ ಅವರ ನಡುವೆ ಪೈಪೋಟಿ ಇದೆ. ಇನ್ನೊಂದೆಡೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ್ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಇರುವುದು ಕಂಡುಬರುತ್ತಿಲ್ಲ.

ಇನ್ನು ಜೆಡಿಎಸ್ ವಿಚಾರಕ್ಕೆ ಬರುವುದಾದರೆ, ಹನುಮಂತ ಮಾವಿನ ಮರದ ಸ್ಪರ್ಧಿಸುವುದಾಗಿ ಈಗಾಗಲೇ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಮುಸ್ಲಿಮ್ ಹಾಗೂ ದಲಿತ ಮತಗಳ ಮೇಲೆ ಹನುಮಂತ ಹಿಡಿತ ಸಾಧಿಸುವ ಕೆಲಸ ಮಾಡುತ್ತಿದ್ದು, ಮುಂದೆ ಸಿ.ಎಂ.ಇಬ್ರಾಹೀಂ ಅವರನ್ನು ಕರೆತಂದು ಮುಸ್ಲಿಮ್ ಮತಗಳ ಕ್ರೋಡೀಕರಣ ಮಾಡಲು ಅವರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಸ್ಪರ್ಧಿಸದೇ ಇರುವ ಸಂದರ್ಭದಲ್ಲಿ ಬಿಜೆಪಿಗೆ ಒಳಜಗಳವೇ ಕಂಟಕವಾಗುವ ಸಾಧ್ಯತೆ ಹೆಚ್ಚು. ಮಮದಾಪೂರ ಹಾಗೂ ಪಟ್ಟಣಶೆಟ್ಟಿ ಯಾರಿಗೇ ಟಿಕೆಟ್ ಕೊಟ್ಟರೂ ಒಳಜಗಳ ತಪ್ಪಿದ್ದಲ್ಲ. ಬಿಜೆಪಿಯ ಮಹಾಂತೇಶ ಮಮದಾಫೂರ ಪಂಚಮಸಾಲಿಯಾದರೆ, ಎಂ.ಕೆ ಪಟ್ಟಣಶೆಟ್ಟಿ ಪಂಚಮ
ಸಾಲಿ ಬಣಜಿಗ ಪಂಗಡದವರು ಜೆಡಿಎಸ್‌ನ ಹನುಮಂತ ಮಾವಿನಮರದ ಅವರೂ ಪಂಚಮಸಾಲಿ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಪಂಚಮಸಾಲಿ ಮತಗಳ ವಿಭಜನೆ ಆಗುವುದು ಪಕ್ಕಾ. ಮಾವಿನ ಮರದ ಸ್ಪರ್ಧೆಯಿಂದ ಬಿಜೆಪಿಗೆ ಒಳ ಹೊಡೆತ ಹೆಚ್ಚೆನ್ನಲಾಗುತ್ತಿದೆ. ಇದು ನೇರವಾಗಿ ಕಾಂಗ್ರೆಸ್‌ಗೆ ಲಾಭವಾಗಿ ಪರಿಣಮಿಸಲಿದೆ.

► ಸಿದ್ದರಾಮಯ್ಯ

ಸಿದ್ದರಾಮಯ್ಯ. ಮಾಜಿ ಮುಖ್ಯಮಂತ್ರಿ. ಈಗ ಅವರಿಗೆ 74 ವರ್ಷ ವಯಸ್ಸು. ಅಗ್ರಗಣ್ಯ ಅಹಿಂದ ನಾಯಕನೆಂದೇ ಗುರುತಾದವರು. ಸಮಾಜವಾದಿ ಹೋರಾಟದ ಹಿನ್ನೆಲೆ. ಜನತಾ ಪರಿವಾರದಿಂದ ಬಂದ ನಾಯಕ. ರಾಜ್ಯ ಕಾಂಗ್ರೆಸ್‌ನಲ್ಲಿ ಏನು ಹೇಳಿದರೂ ನಡೆಯುವಷ್ಟರ ಮಟ್ಟಿಗೆ ಬಹಳ ಗಟ್ಟಿ ಸ್ಥಾನ. ಡಿ.ಕೆ. ಶಿವಕುಮಾರ್ ಅವರನ್ನು ಬದಿಗೆ ಸರಿಸುವ ಮಟ್ಟಿಗೆ ಅವರದೇ ಆದ ಬೆಂಬಲಿಗರ ಪಡೆಯೊಂದು ಪಕ್ಷದೊಳಗೇ ಇರುವುದು ಕೂಡ ಕಾಂಗ್ರೆಸ್‌ನಲ್ಲಿಯೇ ಹಲವರ ಅಸಮಾಧಾನಕ್ಕೂ ಕಾರಣವಾಗಿದ್ದರೂ, ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಅವರಿಗೆ ಪ್ರಾಮುಖ್ಯತೆಯಿದೆ. ಅವರ ಅನುಭವ, ಅವರ ಪ್ರೌಢಿಮೆ, ಪಕ್ಷದ ಮುಖ್ಯ ಧ್ವನಿಯಾಗಿ, ಕೇಂದ್ರ ಸರಕಾರದ ವಿರುದ್ಧ ತೀಕ್ಷ್ಣವಾಗಿ ಅಭಿಪ್ರಾಯ ಮಂಡಿಸಬಲ್ಲ ಅವರ ಶಕ್ತಿಯನ್ನು ಯಾರೂ ನಿರಾಕರಿಸಲಿಕ್ಕಾಗದು. ಆರ್ಥಿಕ ವಿಚಾರ, ಕಾನೂನಿನ ತಿಳುವಳಿಕೆ ಇವೆಲ್ಲದರ ಮೂಲಕ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ವಿರುದ್ಧ ಪ್ರತಿಪಕ್ಷದ ನಾಯಕನ ಸ್ಥಾನದಿಂದ ಸಮರ್ಥವಾಗಿ ವಾದಿಸಬಲ್ಲ ಚತುರತೆ ಮತ್ತು ಸಾಮರ್ಥ್ಯವುಳ್ಳ ರಾಜಕಾರಣಿಯೂ ಹೌದು.

ನಾಲ್ಕು ದಶಕಗಳ ಸಕ್ರಿಯ ರಾಜಕಾರಣದಲ್ಲಿ ಹಲವು ಏಳುಬೀಳುಗಳನ್ನು ಕಂಡವರು ಸಿದ್ದರಾಮಯ್ಯ. ದಶಕಕ್ಕೂ ಹೆಚ್ಚು ಕಾಲ ದೇವೇಗೌಡರ ರಾಜಕೀಯ ಗರಡಿಯಲ್ಲಿದ್ದು, ಎರಡು ಬಾರಿ ಉಪಮುಖ್ಯಮಂತ್ರಿಯೂ ಆದವರು. 2008ರಲ್ಲಿ ಕಾಂಗ್ರೆಸ್ ಸೇರ್ಪಡೆ. 2013ರಲ್ಲಿ ಮುಖ್ಯಮಂತ್ರಿಯಾಗಿ, ಐದು ವರ್ಷಗಳನ್ನು ಪೂರೈಸಿದ ಹೆಗ್ಗಳಿಕೆಯೂ ಅವರದಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವಿದ್ದಾಗ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ, ಮೈತ್ರಿ ಸರಕಾರದ ಪತನದ ಬಳಿಕ 2019ರಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದರು.

Similar News