ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ಅಪೂರ್ವ ದಾಖಲೆ ನಿರ್ಮಿಸಿದ ಋತುರಾಜ್ ಗಾಯಕ್ವಾಡ್

ವಿಜಯ್ ಹಝಾರೆ ಟ್ರೋಫಿ

Update: 2022-11-28 10:08 GMT

ಅಹಮದಾಬಾದ್, ನ.28: ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ Ruturaj Gaikwad ಒಂದೇ ಓವರ್ ನಲ್ಲಿ ಭರ್ಜರಿ  7 ಸಿಕ್ಸರ್ ಗಳನ್ನು ಸಿಡಿಸಿ ಅಪೂರ್ವ ದಾಖಲೆ ನಿರ್ಮಿಸಿದ್ದಾರೆ.

ಸೋಮವಾರ ನಡೆದ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಿರುಸಿನ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಗಾಯಕ್ವಾಡ್  ಅವರ ಅಜೇಯ 220 ರನ್ ಗಳ ನೆರವಿನಿಂದ ಮಹಾರಾಷ್ಟ್ರ ತಂಡವು ನಿಗದಿತ 50 ಓವರ್‌ಗಳಲ್ಲಿ  330 ರನ್ ಗಳಿಸಿತು. ಆದಾಗ್ಯೂ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಶಿವ ಸಿಂಗ್ ಅವರ ಬೌಲಿಂಗ್‌ನಲ್ಲಿ 43 ರನ್  ಕಲೆ ಹಾಕಿ  ದಾಖಲೆ ಬರೆದರು. ಈ ನಿರ್ದಿಷ್ಟ ಓವರ್‌ನಲ್ಲಿ ಋತುರಾಜ್ ಗಾಯಕ್ವಾಡ್ ಸತತ ಏಳು ಸಿಕ್ಸರ್‌ಗಳನ್ನು ಬಾರಿಸಿದ್ದು ವಿಶೇಷವಾಗಿತ್ತು.

ಓವರ್‌ನ ಐದನೇ ಎಸೆತವು ನೋ-ಬಾಲ್ ಆಗಿತ್ತು. ಫ್ರೀ-ಹಿಟ್ ಕೂಡ ಸಿಕ್ಸರ್‌ ಗೆರೆ ದಾಟಿ ಕಣ್ಮರೆಯಾಯಿತು.  ಹೀಗಾಗಿ ಗಾಯಕ್ವಾಡ್ ಊಹೆಗೂ ನಿಲುಕದಂತೆ ಒಂದೇ ಓವರ್ ನಲ್ಲಿ 43 ರನ್ ಗಳಿಸಿದರು.

ಶಿವ ಸಿಂಗ್ ಅವರ ಒಂದೇ ಓವರ್ ನಲ್ಲಿ  42 ರನ್ ಗಳಿಸಿದ  ನಂತರ ಋತುರಾಜ್ ಲಿಸ್ಟ್-ಎ ಕ್ರಿಕೆಟ್‌ನ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಸರಿಗಟ್ಟಿದರು. ನೋ ಬಾಲ್‌ನ ಪರಿಣಾಮವಾಗಿ ಒಂದು ರನ್ ಬಂದಿತು. ಹೀಗಾಗಿ ಶಿವ ಸಿಂಗ್ 49 ನೇ ಓವರ್‌ನಲ್ಲಿ 43 ರನ್‌ಗಳನ್ನು ಬಿಟ್ಟುಕೊಟ್ಟರು.

ಲಿಸ್ಟ್-ಎ ಕ್ರಿಕೆಟ್‌ನ ಒಂದೇ ಓವರ್‌ನಲ್ಲಿ ಏಳು ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಗಾಯಕ್ವಾಡ್.

ಋತುರಾಜ್ ಗಾಯಕ್ವಾಡ್ ಕೇವಲ 159 ಎಸೆತಗಳಲ್ಲಿ 10 ಬೌಂಡರಿ ಹಾಗೂ  16 ಸಿಕ್ಸರ್‌ಗಳ ನೆರವಿನಿಂದ 220 ರನ್ ಗಳಿಸಿದರು. ಅವರ ಇನ್ನಿಂಗ್ಸ್ ಸ್ಟ್ರೈಕ್ ರೇಟ್ 138.36 ಆಗಿತ್ತು.

Similar News