ಹೆಜಮಾಡಿ ಟೋಲ್‍ನಲ್ಲಿ ದುಪ್ಪಟ್ಟು ಟೋಲ್ ಸಂಗ್ರಹಿಸಿದಲ್ಲಿ ಪ್ರತಿಭಟನೆ: ವಿನಯಕುಮಾರ್ ಸೊರಕೆ

Update: 2022-11-30 15:43 GMT

ಪಡುಬಿದ್ರಿ: ಸುರತ್ಕಲ್ ಟೋಲ್ ರದ್ದು ಮಾಡುವ ಬದಲು ಹೆಜಮಾಡಿ ಟೋಲ್‍ನಲ್ಲಿ ದುಪ್ಪಟ್ಟು ಟೋಲ್ ಸಂಗ್ರಹಿಸಲು ಮುಂದಾದರೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಪಕ್ಷಾತೀತವಾಗಿ ಪ್ರತಿಭಟನೆ ಮಾಡುವುದಾಗಿ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಎಚ್ಚರಿಕೆ ನೀಡಿದರು.

ಕಾಪು ಪ್ರೆಸ್‍ಕ್ಲಬ್‍ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್‍ನಲ್ಲಿ ನ.30ರ ಮಧ್ಯರಾತ್ರಿಯಿಂದ ಸುಂಕ ಸಂಗ್ರಹ ಸ್ಥಗಿತಗೊಳಿಸುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದು, ಹೆದ್ದಾರಿ ಪ್ರಾಧಿಕಾರದ ಸುತ್ತೋಲೆಯಂತೆ ಉಡುಪಿ ಜಿಲ್ಲಾಡಳಿತ ನಡೆದುಕೊಳ್ಳುವುದಾಗಿ ಉಡುಪಿ ಜಿಲ್ಲಾಧಿಕಾರಿ ಸಂರ್ಕಿಸಿದಾಗ ವಿವರಿಸಿದ್ದಾರೆ.

ಜನ, ವಾಹನಗಳ ಮಾಲೀಕರ ಸಹಕಾರದಿಂದ ಏಳು ವರ್ಷಗಳ ಕಾಲ ನಿರಂತರ ಹೋರಾಟದಿಂದ ಟೋಲ್ ರದ್ದಾಗಿದೆ. ಸುರತ್ಕಲ್ ಟೋಲ್ ಮುಚ್ಚಿದರೂ, ಅದನ್ನು ಎನ್‍ಎಂಪಿಟಿಗೆ ಸ್ಥಳಾಂತರಿಸುವುದಾಗಿ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಇದೀಗ ಹೆಜಮಾಡಿ ಟೋಲ್‍ನಲ್ಲಿ ಸುಂಕ ವಸೂಲಿ  ಮಾಡುವ ಬಗ್ಗೆ ಅಭಿಪ್ರಾಯ ಕೇಳಿ ಬಂದಿದೆ. ಹೆಜಮಾಡಿ ಟೋಲ್‍ನಲ್ಲಿ ಡಿ. 1ರಿಂದ ಸುಂಕ ವಸೂಲಿಗೆ ಮುಂದಾದರೆ ಡಿ. 2ರಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುರತ್ಕಲ್ ಟೋಲ್ ರದ್ದು ಮಾಡಿರುವ ಬಗ್ಗೆ ಸಂಸದ ನಳಿನ್‍ ಕುಮಾರ್ ಟ್ವೀಟ್ ಹಾಗೂ ಪ್ರಧಾನಿ, ಮೋದಿ, ಸಚಿವ ನಿತಿನ್ ಗಡ್ಕರಿಯವರಿಗೆ ಅಭಿನಂದನೆ ಹೇಳಿ ಹತ್ತುದಿನ ಕಳೆದರು ಇನ್ನೂ ಸುಂಕ ಸಂಗ್ರಹ ನಿಂತಿಲ್ಲ ಎಂದು ನುಡಿದರು.

ಸಾಸ್ತಾನ ಟೋಲ್‍ನಲ್ಲಿ ಅಲ್ಲಿನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸುಂಕ ವಸೂಲಿ ಮಾಡದೆಎ ಇದ್ದು, ಹೆಜಮಾಡಿಯಲ್ಲಿ ಟೋಲ್‍ನ 5 ಕೀ.ಮೀ. ವ್ಯಾಪ್ತಿಯ ವಾಹನಗಳಿಗೆ ಟೋಲ್ ರಹಿತ ಗೊಳಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸೊರಕೆ ನುಡಿದರು.

ಡಬಲ್ ಇಂಜಿನ್ ಸರ್ಕಾರದಿಂದ ಮೋಸ: ಸುರತ್ಕಲ್ ಅಕ್ರಮ ಟೋಲ್ ಎಂದು ಸಚಿವ ಗಡ್ಕರಿಯವರೇ ಸಂಸತ್‍ನಲ್ಲಿ ತಿಳಿಸಿದ್ದು, ಕೆಲವು ತಿಂಗಳ ಹಿಂದೆಯೇ ರದ್ದು ಮಾಡುವುದಾಗಿ ಹೇಳಿದ್ದರೂ, ಈವರೆಗೆ ಅದನ್ನು ಮುಂದುವರೆಸಿಕೊಂಡು ಹೋಗಲಾಗಿದೆ. ಹೋರಾಟದ ಫಲವಾಗಿ ಸುರತ್ಕಲ್ ಟೋಲ್ ರದ್ದಾಗುತ್ತಿದೆ. ಅಲ್ಲಿನ ಸುಂಕ ವಸೂಲಿ ಹೊರೆಯನ್ನು ಹೆಜಮಾಡಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ.  ಇದು ಡಬಲ್ ಇಂಜಿನ್ ಸರ್ಕಾರ ರಾಜ್ಯದ ಜನತೆಗೆ ಮಾಡುವ ಮೋಸವಾಗಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಆರೋಪಿಸಿದರು.

ಇಬ್ಬರು ಸಂಸದರೂ, ಪ್ರಭಾವಿ ನಾಯಕರೂ ಇದ್ದರೂ, ಹೊಗಳಿಕೆ ಹಾಗೂ ಐಷಾರಾಮಿ ಜೀವನಕ್ಕೆ ಮಾತ್ರವಲ್ಲ. ಜನರ ಸ್ಪಂದನೆಗೆ ಪ್ರತಿಸ್ಪಂದಿಸಬೇಕು. ದೆಹಲಿಯಲ್ಲಿ ಕೂತು ಅದನ್ನು ಬಗೆಹರಿಸುವ ಕೆಲಸ ಮಾಡಬೇಕಿತ್ತು. ಇಬ್ಬರೂ ಸಂಸದರೂ ಈ ಹೊಣೆಯಿಂದ ನುಣುಚಿದ್ದಾರೆ. ಹೆಜಮಾಡಿ ಟೋಲ್‍ನಲ್ಲಿ ದುಪ್ಪಟ್ಟು ಸುಂಕ ವಸೂಲಿ ನಡೆದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಇಬ್ಬರು ಸಂಸದರು ಕೇವಲ ಕಣ್ಣೀರೊರೆಸುವ ತಂತ್ರ ಮಾಡುತ್ತಿದ್ದು, ನಾಲಾಯಕ್ ಸಂಸದರಾಗಿದ್ದಾರೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ದ್ವಂದ ನೀತಿಯನ್ನು ವಿರೋಧಿಸುವ ಕೆಲಸ ಮಾಡುವುದಲ್ಲದೆ, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸರ್ಕಾರದ ಕಿವಿ ಚಿವುಟುವ ಕೆಲಸ ಮಾಡುವುದಾಗಿ ತಿಳಿಸಿದರು.

ದಲಿತ ಮುಖಂಡ ಶೇಖರ್ ಹೆಜಮಾಡಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಜೀತೇಂದ್ರ ಪುರ್ಟಾಡೊ ಉಪಸ್ಥಿತರಿದ್ದರು.

Similar News