ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ʼಕಾಶ್ಮೀರ್‌ ಫೈಲ್ಸ್‌ʼ: ಸಮಾರೋಪದ ವೇದಿಕೆಯಲ್ಲೇ ತೀರ್ಪುಗಾರರಿಂದ ಆಕ್ರೋಶ

"ಇಂತಹ ಅಸಭ್ಯ ಚಿತ್ರವನ್ನು ಆಯ್ಕೆ ಮಾಡಿದ್ದು ಸೂಕ್ತವಲ್ಲ" ಎಂದ ಇಸ್ರೇಲ್‌ ನ ನಾದವ್ ಲ್ಯಾಪಿಡ್

Update: 2022-11-28 18:08 GMT

ಹೊಸದಿಲ್ಲಿ: ಬಲಪಂಥೀಯ ವಿಚಾರಧಾರೆಯ ವಿವಾದಾತ್ಮಕ ಚಲನಚಿತ್ರ ʼದಿ ಕಾಶ್ಮೀರ್‌ ಫೈಲ್ಸ್‌ʼ ಕುರಿತಂತೆ ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸದ ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಅವರು ಕಟು ಭಾಷೆಯಲ್ಲಿ ಟೀಕೆಯನ್ನು ವ್ಯಕ್ತಪಡಿಸಿದ್ದು, “ದಿ ಕಾಶ್ಮೀರ್‌ ಫೈಲ್ಸ್‌ ಒಂದು ಪ್ರೊಪಗಾಂಡ ಹಾಗೂ ಅಸಭ್ಯ ಚಲನಚಿತ್ರ, ಅಂತಹ ಚಿತ್ರ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ” ಎಂದು ಹೇಳಿದ್ದಾರೆ. 

ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಸೋಮವಾರ ಕೊನೆಗೊಂಡಿದ್ದು, ಸಮಾರೋಪ ಸಮಾರಂಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ನಾದವ್, “ದಿ ಕಾಶ್ಮೀರ್ ಫೈಲ್ಸ್‌ನಿಂದ ನಾವೆಲ್ಲರೂ ವಿಚಲಿತರಾಗಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ. ಅದು ನಮಗೆ ಒಂದು ವಿಚಾರಧಾರೆಯನ್ನು ಪ್ರತಿಪಾದಿಸುವ ಅಸಭ್ಯ ಚಲನಚಿತ್ರವೆಂದು ತೋರಿದೆ. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲ. ವೇದಿಕೆಯಲ್ಲಿ ನಿಮ್ಮೊಂದಿಗೆ ಈ ಭಾವನೆಗಳನ್ನು ಬಹಿರಂಗವಾಗಿ ಹಂಚಿಕೊಳ್ಳಲು ನನಗೆ ಹಿಂಜರಿಕೆಯಿಲ್ಲ. ಒಂದು ಉತ್ಸವದ ಮನೋಭಾವವು ಕಲೆಗೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಸಹ ಸ್ವೀಕರಿಸುವುದಾಗಿದೆ” ಎಂದು ಹೇಳಿದ್ದಾರೆ.

ಕಳೆದ ವಾರ ಉತ್ಸವದಲ್ಲಿ ದಿ ಕಾಶ್ಮೀರ್ ಫೈಲ್‌ ಚಿತ್ರವನ್ನು ಪ್ರದರ್ಶಿಸಲಾಗಿತ್ತು.   ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ನಿರ್ದೇಶಿರುವ ಈ ಚಿತ್ರವನ್ನು ಮಾರ್ಚ್ 11 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕಾಶ್ಮೀರ ಮುಸ್ಲಿಮರ ವಿರುದ್ಧ ಧ್ವೇಷವನ್ನು ಹರಡುವಂತಿದೆ ಎಂದು ಈ ಚಿತ್ರವನ್ನು ಸಿಂಗಾಪುರ ಚಲನಚಿತ್ರ ಮಂಡಳಿಯು ನಿರ್ಬಂಧಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಿದ್ದು, ನರೇಂದ್ರ ಮೋದಿ, ಅಮಿತ್‌ ಶಾ, ಆದಿತ್ಯನಾಥ್ ಮೊದಲಾದ ಬಿಜೆಪಿ ನಾಯಕರೇ ಈ ಚಿತ್ರವನ್ನು ವೀಕ್ಷಿಸಿ ಬೆಂಬಲಿಸಿದ್ದರು.

Similar News