ಲಿಯೊನೆಲ್ ಮೆಸ್ಸಿಗೆ ಬೆದರಿಕೆ ಹಾಕಿದ ಮೆಕ್ಸಿಕೊ ಬಾಕ್ಸರ್

Update: 2022-11-28 17:54 GMT

ದೋಹಾ, ನ. 28: ಫಿಫಾ ವಿಶ್ವಕಪ್ ನ 'ಸಿ' ಗುಂಪಿನ ಪಂದ್ಯವೊಂದರಲ್ಲಿ ಶನಿವಾರ ರಾತ್ರಿ ಮೆಕ್ಸಿಕೊ ತಂಡವನ್ನು ಸೋಲಿಸಿದ ಬಳಿಕ, ಡ್ರೆಸಿಂಗ್ ಕೋಣೆಯಲ್ಲಿ ಸಂಭ್ರಮಾಚರಣೆ ನಡೆಸಿದ ವಿಧಾನಕ್ಕೆ ಸಂಬಂಧಿಸಿ ಅರ್ಜೆಂಟೀನ ತಂಡದ ನಾಯಕ ಲಿಯೊನೆಲ್ ಮೆಸ್ಸಿ(Lionel Messi)ಗೆ ಮೆಕ್ಸಿಕೊದ ಬಾಕ್ಸರ್ ಕಾನೆಲೊ ಅಲ್ವಾರೇಝ್ (Canelo Alvarez)ಬೆದರಿಕೆ ಹಾಕಿದ್ದಾರೆ.

ಸಂಭ್ರಮಾಚರಣೆಯ ವೇಳೆ ಅರ್ಜೆಂಟೀನ ಸೂಪರ್ಸ್ಟಾರ್, ಮೆಕ್ಸಿಕೊದ ಜರ್ಸಿಯೊಂದನ್ನು ತನ್ನ ಕಾಲಿನಲ್ಲಿ ದೂರ ತಳ್ಳುವುದನ್ನು ವೀಡಿಯೊ ತುಣುಕೊಂದು ತೋರಿಸುತ್ತದೆ. ಇದಕ್ಕೆ ಅಲ್ವಾರೇಝ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅರ್ಜೆಂಟೀನವು ಮೆಕ್ಸಿಕೊ ತಂಡವನ್ನು 2-0 ಗೋಲಿನಿಂದ ಸೋಲಿಸಿದೆ. ಅರ್ಜೆಂಟೀನ ಪರವಾಗಿ ಮೊದಲ ಗೋಲನ್ನು ಮೆಸ್ಸಿ ಅದ್ಭುತವಾಗಿ ಬಾರಿಸಿದ್ದರು. ಅರ್ಜೆಂಟೀನವು ತನ್ನ ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯದ ಎದುರು ಸೋತಿತ್ತು.

‘‘ನಮ್ಮ ಜರ್ಸಿ ಮತ್ತು ಧ್ವಜದಿಂದ ಮೆಸ್ಸಿ ನೆಲವನ್ನು ಒರೆಸುವುದನ್ನು ನೀವು ನೋಡಿದ್ದೀರಾ?’’ ಎಂಬುದಾಗಿ ಅಲ್ವಾರೇಝ್ ಟ್ವಿಟರ್ನಲ್ಲಿ ಬರೆದಿದ್ದಾರೆ. ಅವರಿಗೆ ಟ್ವಿಟರ್ನಲ್ಲಿ 22 ಲಕ್ಷ ಅನುಯಾಯಿಗಳಿದ್ದಾರೆ.

‘‘ನನಗೆ ಸಿಗಬಾರದು ಎಂಬುದಾಗಿ ಅವರು ದೇವರಲ್ಲಿ ಪ್ರಾರ್ಥಿಸಬೇಕು’’ ಎಂಬುದಾಗಿ ಅವರು ಇನ್ನೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ. ಈ ಟ್ವೀಟ್ ನಲ್ಲಿ ಎರಡು

ಮುಷ್ಟಿಯ ಸಂಕೇತಗಳು, ಒಂದು ಆಕ್ರೋಶಭರಿತ ಕೆಂಪು ಮುಖ ಮತ್ತು ಒಂದು ಬೆಂಕಿಯ ಜ್ವಾಲೆಯೂ ಇದೆ.

ಮೆಸ್ಸಿ ತನ್ನ ಬಲಗಾಲಿನ ಶೂವನ್ನು ತೆಗೆಯುತ್ತಿದ್ದಾಗ ಮೆಕ್ಸಿಕೊ ತಂಡದ ಅಂಗಿಯೊಂದನ್ನು ಕಾಲಿನಲ್ಲಿ ಸರಿಸುವುದು ವೀಡಿಯೊದಲ್ಲಿ ಕಾಣಿಸುತ್ತದೆ. ಆದರೆ, ಇದು ಉದ್ದೇಶಪೂರ್ವಕವಾಗಿ ಅಲ್ಲ ಎಂಬಂತೆ ಕಾಣುತ್ತದೆ. ಈ ಅಂಗಿಯನ್ನು ಅವರು ಪಂದ್ಯದ ಬಳಿಕ ಮೆಕ್ಸಿಕೊ ಆಟಗಾರರೊಬ್ಬರೊಂದಿಗೆ ವಿನಿಮಯ ಮಾಡಿಕೊಂಡಿದ್ದರು. ಲಾಕರ್ ಕೋಣೆಯಲ್ಲಿ ಅರ್ಜೆಂಟೀನ ಆಟಗಾರರು ಸಂಭ್ರಮಾಚರಣೆಯಲ್ಲಿದ್ದಾಗ ಈ ಜರ್ಸಿಯು ನೆಲದಲ್ಲಿತ್ತು.

ಜರ್ಸಿ ಯಾವಾಗಲೂ ನೆಲದಲ್ಲೇ ಇರುತ್ತದೆ

ಅರ್ಜೆಂಟೀನದ ಮಾಜಿ ಆಟಗಾರ ಸರ್ಗಿಯೊ ‘ಕುನ್’ ಅಗೆರೊ, ಮೆಸ್ಸಿಯನ್ನು ಸಮರ್ಥಿಸಿಕೊಂಡಿದ್ದಾರೆ. ‘‘ಕಾನೆಲೊ ಅವರೇ, ನೆವಗಳನ್ನು ಹುಡುಕಬೇಡಿ ಅಥವಾ ಸಂಕಷ್ಟಗಳನ್ನು ಸೃಷ್ಟಿಸಬೇಡಿ. ನಿಮಗೆ ಖಂಡಿತವಾಗಿಯೂ ಫುಟ್ಬಾಲ್ ಎಂದರೆ ಏನೆಂದು ಗೊತ್ತಿಲ್ಲ ಅಥವಾ ಲಾಕರ್ ಕೋಣೆಯಲ್ಲಿ ಏನು ನಡೆಯುತ್ತದೆ ಎನ್ನುವುದು ಗೊತ್ತಿಲ್ಲ’’ ಎಂಬುದಾಗಿ ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ. ‘‘ಜರ್ಸಿಗಳಲ್ಲಿ ಬೆವರು ಇರುವುದರಿಂದ ಅವುಗಳು ಯಾವಾಗಲೂ ನೆಲದಲ್ಲೇ ಇರುತ್ತವೆ’’ ಎಂದು ಅವರು ಹೇಳಿದ್ದಾರೆ.

Similar News