ಬಡ್ತಿಗಾಗಿ ಕೊಲಿಜಿಯಂ ಶಿಫಾರಸ್ಸು ಮಾಡಿದ 10 ಹೆಸರುಗಳನ್ನು ವಾಪಾಸು ಕಳುಹಿಸಿದ ಕೇಂದ್ರ ಸರ್ಕಾರ: ವರದಿ

Update: 2022-11-29 02:30 GMT

ಹೊಸದಿಲ್ಲಿ: ಪದೋನ್ನತಿಗಾಗಿ ಸುಪ್ರೀಂಕೋರ್ಟ್ (Supreme Court)  ಕೊಲಾಜಿಯಂ (Collegium) ಶಿಫಾರಸ್ಸು ಮಾಡಿದ 10 ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರ ಸರ್ಕಾರ (Central government) ವಾಪಾಸು ಕಳುಹಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿರುವುದಾಗಿ ndtv.com ವರದಿ ಮಾಡಿದೆ.

ನಿವೃತ್ತ ಸಿಜೆಐ ಬಿ.ಎನ್.ಕೃಪಾಲ್ ಅವರ ಪುತ್ರ ಹಿರಿಯ ವಕೀಲ ಸೌರಭ್ ಕೃಪಾಲ್ ಅವರ ಹೆಸರನ್ನೂ ಒಳಗೊಂಡಿದ್ದ ಕಡತವನ್ನು ಕೇಂದ್ರ ಸರ್ಕಾರ ನ.25ರಂದು ವಾಪಾಸು ಕಳುಹಿಸಿದೆ ಎಂದು ಹೇಳಲಾಗಿದೆ.

ಮುಕ್ತವಾಗಿ 'ಗೇ' ಎಂದು ಹೇಳಿಕೊಂಡಿರುವ ತಮ್ಮನ್ನು ಸುಪ್ರೀಂಕೋರ್ಟ್‍ಗೆ ನೇಮಕ ಮಾಡಲು ಸರ್ಕಾರ ಬಯಸದು ಎಂದು 50 ವರ್ಷ ವಯಸ್ಸಿನ ಕೃಪಾಲ್, ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕಳೆದ ವಾರ ಹೇಳಿದ್ದರು. 2017ರಿಂದಲೂ ಅವರ ಪದೋನ್ನತಿಯನ್ನು ತಡೆಯಲಾಗಿದೆ ಎಂದು ವರದಿಯಾಗಿದೆ.

ಸುಪ್ರೀಂಕೋರ್ಟ್‍ನ ಕೊಲಾಜಿಯಂ, ಪದೋನ್ನತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಚರ್ಚೆಗಳು ಆರಂಭವಾಗಿರುವ ನಡುವೆಯೇ ಕೇಂದ್ರ ಸರ್ಕಾರ, ಕೊಲಾಜಿಯಂ ಶಿಫಾರಸ್ಸನ್ನು ವಾಪಾಸು ಕಳುಹಿಸಿದೆ. ನೇಮಕಾತಿಗಳಿಗೆ ಕೋರ್ಟ್ ಕಡ್ಡಾಯಪಡಿಸಿದ ಸಮಯದ ಚೌಕಟ್ಟನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ದ್ವಿ ಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

ನ್ಯಾಯಾಂಗ ನೇಮಕಾತಿಗಳಿಗೆ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ನಿನ್ನೆ ಸಂಜೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು.

"ಒಮ್ಮೆ ಕೊಲಾಜಿಯಂ ಹೆಸರುಗಳನ್ನು ಪುನರುಚ್ಚರಿಸಿದ ಬಳಿಕ ಅಧ್ಯಾಯ ಕೊನೆಯಾಗುತ್ತದೆ.. ಸರ್ಕಾರ ಹೆಸರುಗಳನ್ನು ಬಾಕಿ ಇಡುವ ಮೂಲಕ ತನ್ನ ಎಲ್ಲೆಯನ್ನು ಮೀರುತ್ತಿದೆ" ಎಂದು ಕೋರ್ಟ್ ಹೇಳಿತ್ತು. ದಯವಿಟ್ಟು ಇದನ್ನು ಪರಿಹರಿಸಿ ಹಾಗೂ ಈ ನಿಟ್ಟಿನಲ್ಲಿ ನ್ಯಾಯಾಂಗ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಡಿ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರನ್ನು ಒಳಗೊಂಡ ಪೀಠ ಹೇಳಿತ್ತು. ಈ ಬಗ್ಗೆ ndtv.com ವರದಿ ಮಾಡಿದೆ.

Similar News