ರಾಜ್ಯದ ಶಿಕ್ಷಿತ ಕೈದಿಗಳ ವೇತನ ಶೇ.165ರಿಂದ 200ವರೆಗೆ ಏರಿಕೆ

Update: 2022-11-29 03:20 GMT

ಬೆಂಗಳೂರು: ಜೈಲು ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಜೈಲುಗಳಲ್ಲಿ ಇರುವ ಶಿಕ್ಷಿತ ಕೈದಿಗಳ ವೇತನವನ್ನು ಶೇ. 165ರಿಂದ ಶೇ. 200ವರೆಗೆ ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು timesofindia.com ವರದಿ ಮಾಡಿದೆ.

ವೇತನ ಪರಿಷ್ಕರಣೆಗೆ ಸಂಬಂಧಿಸಿದ ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆ ಮುಂದಿನ ಮೂರು ವರ್ಷಗಳವರೆಗೆ ಅಥವಾ ಹೊಸ ಆದೇಶ ಹೊರಡಿಸುವವರೆಗೆ ಊರ್ಜಿತವಾಗಿರುತ್ತದೆ.

ಜೈಲು ಆಡಳಿತದಲ್ಲಿ ಸುಧಾರಣೆಗಳನ್ನು ಶಿಫಾರಸ್ಸು ಮಾಡಲು ಸರ್ಕಾರ ಕೆಲ ತಿಂಗಳ ಹಿಂದೆ ಜೈಲು ಅಭಿವೃದ್ಧಿ ಮಂಡಳಿ ರಚಿಸಿತ್ತು. ಆರು ಮಂದಿ ಸದಸ್ಯರ ಮಂಡಳಿ ಜುಲೈನಲ್ಲಿ ಮೊದಲ ಸಭೆ ನಡೆಸಿದ ಬಳಿಕ, ಗೃಹ ಸಚಿವ ಆರಗ ಜ್ಞಾನೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ, ಶಿಕ್ಷಿತ ಕೈದಿಗಳ ವೇತನ ಹೆಚ್ಚಳಕ್ಕೆ ಕೋರಿದ್ದರು.

ಸರ್ಕಾರ ಬಿಡುಗಡೆ ಮಾಡಿರುವ ಕನಿಷ್ಠ ಕೂಲಿ ನಿಯಮಾವಳಿಯ ಅನುಸಾರ ವೇತನ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದಾಗಿ ಸರ್ಕಾರಿ ಬೊಕ್ಕಸಕ್ಕೆ ಹೆಚ್ಚುವರಿ 7 ಕೋಟಿ ರೂಪಾಯಿ ಸಂಪನ್ಮೂಲ ಬೇಕಾಗುತ್ತದೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ಹಣಕಾಸು ಇಲಾಖೆಯ ಕಾರ್ಮಿಕ ಆಯುಕ್ತರು ವೇತನ ಹೆಚ್ಚಳವನ್ನು ಅನುಮೋದಿಸಿದ್ದಾರೆ. ಜತೆಗೆ ಕೈದಿಗಳ ವೇತನದಿಂದ ಯಾವುದೇ ಕಡಿತ ಮಾಡದಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಮೊದಲು ಆಹಾರ ಮತ್ತು ಬಟ್ಟೆಗಾಗಿ ಅವರ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತಗೊಳಿಸಲಾಗುತ್ತಿತ್ತು. ಕೌಶಲಯುಕ್ತ, ಅರೆ ಕೌಶಲ ಹಾಗೂ ವಿಶೇಷ ಕೌಶಲ ವರ್ಗಗಳಡಿ ಮೂರು ಶ್ರೇಣಿಗಳನ್ನು ಸೃಷ್ಟಿಸಿ ವೇತನವನ್ನು ಶೇ. 165ರಿಂದ ಶೇಕಡ 200ರಷ್ಟು ಹೆಚ್ಚಿಸಲಾಗಿದೆ ಎಂದು timesofindia.com ವರದಿ ಮಾಡಿದೆ.

Similar News