ಏರ್ ಇಂಡಿಯಾದಲ್ಲಿ ವಿಲೀನಗೊಳ್ಳಲಿರುವ ವಿಸ್ತಾರ ಏರ್ಲೈನ್ಸ್

Update: 2022-11-29 17:58 GMT

ಹೊಸದಿಲ್ಲಿ,ನ.29: 2024ರ ಮಾರ್ಚ್ ವೇಳೆಗೆ ವಿಸ್ತಾರ ಏರ್ಲೈನ್ಸ್ ಟಾಟಾ ಒಡೆತನದ ಏರ್ ಇಂಡಿಯಾ(Air India)ದೊಂದಿಗೆ ವಿಲೀನಗೊಳ್ಳಲಿದೆ ಎಂದು ಕಂಪನಿಯು ಮಂಗಳವಾರ ಪ್ರಕಟಿಸಿದೆ.  ಟಾಟಾ(Tata)ದೊಂದಿಗೆ ತನ್ನ ಜಂಟಿ ಉದ್ಯಮವಾಗಿರುವ ವಿಸ್ತಾರದಲ್ಲಿ ಶೇ.49ರಷ್ಟು ಪಾಲು ಬಂಡವಾಳವನ್ನು ಹೊಂದಿರುವ ಸಿಂಗಾಪುರ ಏರ್ಲೈನ್ಸ್ (Singapore Airlines)ವಿಲೀನದ ಬಳಿಕ ವಿಸ್ತರಿತ ಏರ್ ಇಂಡಿಯಾದಲ್ಲಿ ಸುಮಾರು ಶೇ.25ರಷ್ಟು ಪಾಲು ಬಂಡವಾಳವನ್ನು ಹೊಂದಿರಲಿದ್ದು, 2,000 ಕೋ.ರೂ.ಗೂ ಅಧಿಕ ಹಣವನ್ನು ಹೂಡಿಕೆ ಮಾಡಲಿದೆ.

ವಿಲೀನದ ಬಳಿಕ ಹೆಚ್ಚು ವಿಮಾನಗಳು ಮತ್ತು ಮಾರ್ಗಗಳು ಏರ್ ಇಂಡಿಯಾ ಬ್ರ್ಯಾಂಡ್‌ ನಡಿ ಬರಲಿವೆ. 2013ರಲ್ಲಿ ಸ್ಥಾಪನೆಗೊಂಡ ವಿಸ್ತಾರದಲ್ಲಿ ಪ್ರಸ್ತುತ ಟಾಟಾ ಶೇ.51ರಷ್ಟು ಪಾಲು ಬಂಡವಾಳವನ್ನು ಹೊಂದಿದೆ.

ಟಾಟಾ ಒಡೆತನದ ಅಗ್ಗದರದ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಏರ್ ಏಷ್ಯಾ ಇಂಡಿಯಾ ಕೂಡ ಮಾರ್ಚ್,2024ರ ವೇಳೆಗೆ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿವೆ.

ಏರ್ ಇಂಡಿಯಾ ಬಳಿ ಹಾಲಿ 113 ವಿಮಾನಗಳಿದ್ದು, ವಿಲೀನದ ಬಳಿಕ ಏರ್ ಏಷ್ಯಾದ 28,ವಿಸ್ತಾರದ 53 ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ನ 24 ಸೇರಿದಂತೆ ಒಟ್ಟು 218 ವಿಮಾನಗಳನ್ನು ಹೊಂದಲಿದೆ. ತನ್ಮೂಲಕ ಭಾರತದ ಅತಿ ದೊಡ್ಡ ಅಂತರರಾಷ್ಟ್ರೀಯ ಮತ್ತು ಎರಡನೇ ಅತ್ಯಂತ ದೊಡ್ಡ ದೇಶಿಯ ವಿಮಾನಯಾನ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ಏರ್ ಇಂಡಿಯಾ 300 ಹೊಸ ಜೆಟ್ ವಿಮಾನಗಳಿಗೆ ಬೇಡಿಕೆ ಸಲ್ಲಿಸುವ ಸಾಧ್ಯತೆಯಿದ್ದು,ಇದು ವೈಮಾನಿಕ ಇತಿಹಾಸದಲ್ಲಿ ಅತ್ಯಂತ ದೊಡ್ಡ ಖರೀದಿಗಳಲ್ಲಿ ಒಂದಾಗಲಿದೆ. ಈ ವಿಮಾನಗಳು ಹಂತಹಂತವಾಗಿ ಪೂರೈಕೆಯಾಗಲಿವೆ.

Similar News