ಫಿಫಾ ವಿಶ್ವಕಪ್: ಕ್ರಿಶ್ಚಿಯನ್ ಪುಲಿಸಿಕ್ ಸಾಹಸದಲ್ಲಿ ನಾಕೌಟ್ ತಲುಪಿದ ಅಮೆರಿಕ

Update: 2022-11-30 02:35 GMT

ದೋಹಾ: ಕ್ರಿಸ್ಟಿಯಾನ್ ಪುಲಿಸಿಕ್ (Christian Pulisic) ಅವರ ಏಕೈಕ ಗೋಲಿನ ನೆರವಿನಿಂದ ಅಮೆರಿಕ ತಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ನಾಕೌಟ್ ಹಂತಕ್ಕೆ ಮುನ್ನಡೆದಿದೆ.

ಮಂಗಳವಾರ ಅಲ್ ತುಮಾಮ ಸ್ಟೇಡಿಯಂ (Al Thumama Stadium)ನಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಇರಾನ್ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದ ಅಮೆರಿಕ ಪ್ರಿಕ್ವಾರ್ಟರ್ ಫೈನಲ್ ತಲುಪಿದೆ.

38ನೇ ನಿಮಿಷದಲ್ಲಿ ಪುಲಿಸಿಕ್ ಗಳಿಸಿದ ಗೋಲು, ಅಮೆರಿಕ ತಂಡಕ್ಕೆ ಮುಂದಿನ ಹಂತಕ್ಕೆ ಮುನ್ನಡೆಯಲು ಸಾಕಾಯಿತು. ಮೇಲಕ್ಕೆ ಜಿಗಿದ ಪುಲಿಸಿಕ್‍ಗೆ ಆಕರ್ಷಕ ಹೆಡ್ ಮೂಲಕ ಚೆಂಡನ್ನು ಪಾಸ್ ಮಾಡಿದ ಸೆರ್ಗಿನೊ ದೆಸ್ತ್, ಅಮೆರಿಕದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಪುಲಿಸಿಕ್ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುತ್ತಿದ್ದಂತೆ ಒಂದು ಕ್ಷಣ ಸ್ಟೇಡಿಯಂನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಇರಾನ್ ಬೆಂಬಲಿಗರಲ್ಲಿ ಮೌನ ಆವರಿಸಿತ್ತು.

ಆದರೆ ಗೋಲು ಗಳಿಸುವ ಯತ್ನದಲ್ಲಿ ಅಲಿರೆಝಾ ಬೀರನ್‍ವಂಡ್ ಅವರಿಗೆ ಢಿಕ್ಕಿ ಹೊಡೆದು ಗಾಯಗೊಂಡರು. ಹೊಟ್ಟೆ ಗಾಯಕ್ಕೆ ಕೆಲ ನಿಮಿಷಗಳ ಕಾಲ ಚಿಕಿತ್ಸೆ ಪಡೆದು ಮೈದಾನಕ್ಕೆ ಮರಳಿದರೂ, ಸಹಜ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಬಿ ಗುಂಪಿನ ಅಗ್ರಸ್ಥಾನಿ ಇಂಗ್ಲೆಂಡ್‍ಗಿಂತ ಎರಡು ಅಂಕ ಕಡಿಮೆ ಪಡೆದ ಅಮೆರಿಕ 1994ರ ಬಳಿಕ ಮೊದಲ ಬಾರಿಗೆ ನಾಕೌಟ್ ರಹದಾರಿ ಪಡೆಯಿತು. ಮೂರು ಅಂಕಗಳೊಂದಿಗೆ ಇರಾನ್ ಮೂರನೇ ಸ್ಥಾನ ಗಳಿಸಿ ವಿಶ್ವಕಪ್ ಅಭಿಯಾನ ಮುಗಿಸಿದರೆ, ಒಂದು ಅಂಕ ಪಡೆದ ವೇಲ್ಸ್ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

Similar News