ಉಡುಪಿ | ಅಂಗನವಾಡಿ-ಗ್ರಾಚ್ಯುಟಿ ಪಾವತಿಸಲು ಆಗ್ರಹಿಸಿ ಅಂಗನವಾಡಿ ನೌಕರರಿಂದ ಧರಣಿ

Update: 2022-12-01 08:45 GMT

ಉಡುಪಿ: ಗ್ರಾಚ್ಯುಟಿ ಪಾವತಿಸಲು, ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿ ಯರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ, 1972ರ ಗ್ರಾಚ್ಯುಟಿ ಕಾಯಿದೆ ಪ್ರಕಾರ ಅಂಗನ ವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದುದರಿಂದ ಗ್ರಾಚ್ಯುಟಿ ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟ ಆದೇಶ ನೀಡಬೇಕು. ಅನ್ನದೊಟ್ಟಿಗೆ ಅಕ್ಷರ ಕೇಂದ್ರವಾಗಿರುವ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಿ ಬಲಿಷ್ಠ ಪಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರದ ವೇಳಾಪಟ್ಟಿಯನ್ನು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯತನಕ ಬದಲಾಯಿಸಿ, ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಸಮಯ ನಿಗದಿ ಮಾಡಬೇಕು. ಅದೇ ರೀತಿ ದಾಖಲಾತಿ ಮಾಡುವ ವಿಧಾನವನ್ನು ಕೂಡ ಬದಲಾಯಿಸಬೇಕು. ಅಂಗನವಾಡಿ ಕಾರ್ಯಕರ್ತೆ ತಪ್ಪು ಮಾಡಿದ ಕೂಡಲೇ ನೈಸರ್ಗಿಕ ನ್ಯಾಯವನ್ನು ಒದಗಿಸದೇ ಕೆಲಸದಿಂದ ತೆಗೆಯುವ ಕ್ರಮನಿಲ್ಲಬೇಕು. ಉಚಿತ ಕೆಲಸವನ್ನು ನಿಲ್ಲಿಸಿ, ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಬೇಕು. ಹೊಸದಾಗಿ ಪ್ರಾರಂಭವಾಗುತ್ತಿರುವ ಅಂಗನ ವಾಡಿ ಕೇಂದ್ರಗಳನ್ನು ಈಗಾಗಲೇ ಇರುವ ಮಿನಿ ಅಂಗನವಾಡಿ ಕೇಂದ್ರಗಳ ಅಡಿಯಲ್ಲಿ ಪೂರ್ಣಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಅವರು ಆಗ್ರಹಿಸಿದರು.

ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಮಾತನಾಡಿ, ಕೇಂದ್ರ ಸರಕಾರವು ಐಸಿಡಿಎಸ್ ಮೂಲಕ ಅಂಗನವಾಡಿ ಕೇಂದ್ರ ಗಳಿಗೆ ಸಂಬಂಧಿಸಿದ ಯೋಜನೆಗಳ ಅನುದಾನವನ್ನು ವರ್ಷ ವರ್ಷಕ್ಕೆ ಕಡಿತ ಮಾಡುತ್ತ ಬರುತ್ತಿದೆ. ಈ ಮೂಲಕ ಕೇಂದ್ರ ಬಿಜೆಪಿ ಸರಕಾರಕ್ಕೆ ಮಕ್ಕಳು, ಹಸುಗೂಸು, ತಾಯಂದಿರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬುದು ಸ್ಪಷ್ಟ ವಾಗುತ್ತದೆ ಎಂದು ಆರೋಪಿಸಿದರು.

ಬಳಿಕ ಈ ಕುರಿತ ಮನವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಖಜಾಂಚಿ ಯಶೋಧ, ಪ್ರೇಮ ಶಿರ್ವ, ಸಿಐಟಿಯು ಜಿಲ್ಲಾ ಮುಖಂಡರಾದ ಎಚ್. ನರಸಿಂಹ, ಚಂದ್ರಶೇಖರ್, ಮಹಾಬಲ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಲು ವಿಳಂಬ: ಆಕ್ರೋಶ

ಅಧಿಕಾರಿಗಳು ಧರಣಿಯ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಲು ವಿಳಂಬ ಮಾಡಿರುವುದನ್ನು ವಿರೋಧಿಸಿ ಧರಣಿನಿರತರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮೂಲಕ ತೆರಳಿದರು.

ಜಿಲ್ಲಾಧಿಕಾರಿ ಕಚೇರಿ ದ್ವಾರದ ಎದುರು ನಿಂತು ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಲು ಅಧಿಕಾರಿಗಳು ವಿಳಂಬ ಮಾಡಿರುವುದರ ವಿರುದ್ಧ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ವೀಣಾ ಆಗಮಿಸಿ ಮನವಿ ಸ್ವೀಕರಿಸಿದರು.

Similar News